FACT CHECK | ಪ್ರಿಯಾಂಕಾ ಗಾಂಧಿ ನಾಮ ಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೊಠಡಿಯಿಂದ ಹೊರಗೆ ನಿಲ್ಲಿಸಿ ಅವಮಾನಿಸಿದ್ದು ನಿಜವೇ

ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

ಖರ್ಗೆ ಅವರು ಕೊಠಡಿಯ ಬಾಗಿಲಿನ ಹಿಂದೆ ನಿಂತಿರುವಂತೆ ಕಾಣುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್‌, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ದಲಿತ ನಾಯಕ ಖರ್ಗೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಪ್ರಿಯಾಂಕಾ ಅವರು ವಯನಾಡ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ಎಲ್ಲಿದ್ದಿರಿ ಖರ್ಗೆ ಸಾಹೇಬರೇ?’ ಎಂದು ಕೇಳಿದ್ದಾರೆ.

ಮುಂದುವರಿದು, ‘ಕುಟುಂಬದವರಲ್ಲದ ಕಾರಣ (ಖರ್ಗೆ) ಅವರನ್ನು ಹೊರಗಿಡಲಾಗಿದೆ. ಸೋನಿಯಾ ಕುಟುಂಬದ ಅಹಂಕಾರದ ಎದುರು ಸ್ವಾಭಿಮಾನ ಮತ್ತು ಘನತೆ ಬಲಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ‘ಅವರು, ಹಿರಿಯ ದಲಿತ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನೇ ಈ ರೀತಿ ನಡೆಸಿಕೊಳ್ಳುತ್ತಾರೆ ಎಂದರೆ, ವಯನಾಡಿನ ಸಾಮಾನ್ಯ ಜನರನ್ನು ಹೇಗೆ ಕಾಣಬಲ್ಲರು ಎಂಬುದನ್ನು ಊಹಿಸಿಕೊಳ್ಳಿ’ ಎಂದು ಅಚ್ಚರಿಯಿಂದ ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೂ ಈ ವಿಡಿಯೊ ಹಂಚಿಕೊಂಡಿದ್ದು, ‘ಎಐಸಿಸಿ ಅಥವಾ ಪಿಸಿಸಿ (ಪ್ರದೇಶ ಕಾಂಗ್ರೆಸ್‌ ಸಮಿತಿ) ಅಧ್ಯಕ್ಷರೇ ಇರಲಿ, ತಾನು ರಬ್ಬರ್‌ ಸ್ಟಾಂಪ್‌ಗಳು ಎಂದು ಪರಿಗಣಿಸುವ ನಾಯಕರಿಗೆ ಅವಮಾನ ಮಾಡುವುದನ್ನು ಈ ಕುಟುಂಬವು ಹೆಮ್ಮೆಯ ಸಂಗತಿ ಎಂದು ಪರಿಗಣಿಸುತ್ತದೆಯೇ?’ ಎಂದು ಕೇಳಿದ್ದಾರೆ.

ರಾಹುಲ್ ಗಾಂಧಿಯವರು ನಾಟಕದಲ್ಲಿ ತೊಡಗುತ್ತಾರೆ ಮತ್ತು ಅವರು ದಲಿತರನ್ನು ಗೌರವಿಸುತ್ತಾರೆ ಎಂದು ನಟಿಸುತ್ತಾರೆ, ಆದರೆ ಖರ್ಗೆ ಅವರನ್ನು ನಡೆಸಿಕೊಂಡ ರೀತಿ, ಕಾಂಗ್ರೆಸ್ ದಲಿತರನ್ನು ಅಸ್ಪೃಶ್ಯರು ಮತ್ತು ಮೂರನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸುತ್ತದೆ ಎಂಬುದು ಸ್ಪಷ್ಟವಾಗಿದೆ” ಎಂದು ವಿಧಾನಸಭೆ ಚುನಾವಣೆಯ ಸಹ-ಪ್ರಭಾರಿಯೂ ಆಗಿರುವ ಶರ್ಮಾ ಹೇಳಿದ್ದಾರೆ. ಜಾರ್ಖಂಡ್, ಪಿಟಿಐ ಉಲ್ಲೇಖಿಸಿದೆ.

ಹೀಗೆ ಬಿಜೆಪಿ ಪಕ್ಷ ಮತ್ತದರ ನಾಯಕರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವಂತೆ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆಯವರನ್ನು ನಾಮಪತ್ರ ಸಲ್ಲಿಸುವ ಕೊಠಡಿಯಿಂದ ಹೊರಗೆ ನಿಲ್ಲಿಸಿ ಅವಮಾನಿಸಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ BJP ಮತ್ತದರ ನಾಯಕರು ರಾಹುಲ್ ಗಾಂಧಿ ಮತ್ತು ನೆಹರು ಕುಟುಂಬವನ್ನು ಗುರಿಯಾಗಿಸಿಕೊಂಡು ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಿಯಾಂಕಾ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಬಾಗಿಲಿನಲ್ಲೆ ನಿಲ್ಲಿಸಿ ಅವಮಾನಿಸಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳನ್ನು ಪರಿಶಿಲಿಸಿದಾಗ, ANI ತನ್ನ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ ಲಭ್ಯವಾಗಿದೆ.

ಪ್ರಿಯಾಂಕ ವಾದ್ರಾ ಸಹೋದರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್‌ಸ್ಟಾದಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು ಅದರಲ್ಲಿ ಪ್ರಿಯಾಂಕ್ ನಾಮಪತ್ರ ಸಲ್ಲಿಸುವ ವೇಳೆ  ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಯಲ್ಲಿ ಇರುವುದನ್ನು ನೋಡಬಹುದು.

 

View this post on Instagram

 

A post shared by Rahul Gandhi (@rahulgandhi)

ಅದೇ ರೀತಿ ತಮ್ಮ ಎಕ್ಸ್‌ ಖಾತೆಯಲ್ಲಿ ಫೋಟೊಗಳನ್ನು ರಾಹುಲ್ ಗಾಂಧಿ ಅಪ್‌ಲೋಡ್ ಮಾಡಿದ್ದಾರೆ.

ವಾಸ್ತವವಾಗಿ,ನಾಮಪತ್ರ ಸಲ್ಲಿಕೆ ವೇಳೆ ಖರ್ಗೆ ಅವರು ಪ್ರಿಯಾಂಕಾ ಪಕ್ಕದಲ್ಲೇ ಕುಳಿತಿರುವುದು ಹಲವು ಚಿತ್ರಗಳಲ್ಲಿ ಕಂಡುಬಂದಿದೆ. ಅಧಿಕಾರಿಯ ಕೊಠಡಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಪತ್ರಗಳಿಗೆ ಸಹಿ ಹಾಕುವಾಗ ಪ್ರಿಯಾಂಕಾ ಅವರ ಅಕ್ಕ–ಪಕ್ಕದಲ್ಲಿ ಖರ್ಗೆ ಹಾಗೂ ರಾಹುಲ್‌ ಗಾಂಧಿ ಕುಳಿತಿರುವುದು ಮತ್ತು ಅವರ ಹಿಂದಿನ ಸಾಲಿನಲ್ಲಿ ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್‌ ಅವರು ಇರುವುದು ಚಿತ್ರಗಳಲ್ಲಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯನ್ನ ಗುರಿಯಾಗಿಸಿಕೊಂಡು, ನೆಹರು ಕುಟುಂಬವನ್ನು ಉಲ್ಲೇಖಿಸಿ ಸುಳ್ಳು ಮತ್ತು ತಪ್ಪಾದ ನಿರೂಪಣೆಯನ್ನು BJP ಆಗಾಗ್ಗೆ ಮಾಡುತ್ತಿರುತ್ತದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಗಾಂಧಿ ಕುಟುಂಬ ಅವಮಾನಿಸಿದೆ ಎಂದು ಎಡಿಟ್ ಮಾಡಿದ ಪೋಸ್ಟ್‌ಗಳನ್ನು ಹಿಂದೆಯೂ  ಹಂಚಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಈ ವ್ಯಕ್ತಿ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights