ಮಕ್ಕಳ ರಕ್ಷಕನೆಂದು ಹೆಸರಾಗಿದ್ದ ವೈದ್ಯ ಕಫೀಲ್‌ ಖಾನ್‌ ಅವರ ಬಂಧನ 3 ತಿಂಗಳು ವಿಸ್ತರಣೆ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಫೀಲ್ ಖಾನ್ ಬಂಧನವನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

2019 ರ ಡಿಸೆಂಬರ್ 10 ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಕಫೀಲ್ ಖಾನ್ ಅವರನ್ನು ಜನವರಿ 29 ರಂದು ಬಂಧಿಸಲಾಗಿತ್ತು.

2020ರ ಫೆಬ್ರವರಿ 13 ರಂದು ಅಲಿಘರ್ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಫೀಲ್‌ ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧನಕ್ಕೆ ಒಳಪಡಿಸಲಾಗಿದ್ದು, ನಂತರ, ಈ ವಿಷಯವನ್ನು ಸಲಹಾ ಮಂಡಳಿಗೆ ಕಳುಹಿಸಲಾಗಿತ್ತು. ಸಲಹಾ ಮಂಡಳಿಯ ವರದಿಯಲ್ಲಿ ಖಾನ್ ಅವರನ್ನು ಜೈಲಿನಲ್ಲಿಡಲು “ಸಾಕಷ್ಟು ಕಾರಣಗಳಿವೆ” ಎಂದು ಎಂದು ಯುಪಿ ಗೃಹ ಇಲಾಖೆ ಆಗಸ್ಟ್‌ 04 ರಂದು ಆದೇಶ ಹೊರಡಿಸಿದೆ.

“ಯುಪಿ ಸಲಹಾ ಮಂಡಳಿಯ ವರದಿ ಮತ್ತು ಅಲಿಘರ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ನ ವರದಿಯ ಪ್ರಕಾರ, ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ತಮ್ಮಲ್ಲಿರುವ ಅಧಿಕಾರವನ್ನು ಬಳಸಿಕೊಂಡು, ಕಫೀಲ್ ಖಾನ್ ಅವರ ಬಂಧನವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬೇಕೆಂದು ನಿರ್ದೇಶಿಸಿದ್ದಾರೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದರ ಪರಿಣಾಮವಾಗಿ, ಕಫೀಲ್‌ ಖಾನ್‌ ಅವರು 2020 ರ ನವೆಂಬರ್ 13 ರವರೆಗೆ ಜೈಲಿನಲ್ಲಿಯೇ ಇರಬೇಕಾಗಿದೆ ಎಂದು ಗೃಹ ಇಲಾಖೆ ಹೇಳಿದೆ.

ಗೋರಖ್‌ಪುರದ ಬಾಬಾ ರಾಘವ್ ದಾಸ್ (ಬಿಆರ್‌ಡಿ) ವೈದ್ಯಕೀಯ ಕಾಲೇಜಿನಲ್ಲಿ 2017 ರ ದುರಂತದ ನಂತರ ಕಫೀಲ್‌ ಖಾನ್ ಮುಖ್ಯವಾಹಿನಿಯಲ್ಲಿ ದನಿ ಎತ್ತಿದ್ದರು. ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದಾಗಿ ಹಲವಾರು ಮಕ್ಕಳು ಸಾವನ್ನಪ್ಪಿದರು. ಆರಂಭದಲ್ಲಿ, ಅವರು ತುರ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಜೋಡಿಸಿದ್ದಕ್ಕಾಗಿ ಮಕ್ಕಳ ರಕ್ಷಕ ಎಂದು ಪ್ರಶಂಸಿಸಲ್ಪಟ್ಟರು. ಆದರೆ, ಅವರ ಸೇವೆಗಾಗಿ ಅವರು ಶಿಕ್ಷೆಗೆ ಗುರಿಯಾಗಿದ್ದರು. ಆಸ್ಪತ್ರೆಯ ಇತರ ಒಂಬತ್ತು ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಕಫೀಲ್‌ ಅವರನ್ನು ಬಂಧಿಸಲಾಗಿತ್ತು. ನಂತರ, ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.


ಇದನ್ನೂ ಓದಿ:  ೨೧ ವಾರಗಳ ಗರ್ಭಿಣಿ, ಹೋರಾಟಗಾರ್ತಿ ಸಫೂರಾ ಅವರಿಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights