ರಾಹುಲ್ ಗಾಂಧಿ ಸಲಹೆ ಕೇಳಿದ್ದರೆ ಭಾರತ ಇಟಲಿಯಾಗುತ್ತಿತ್ತು: ಯೋಗಿ ಆದಿತ್ಯನಾಥ್‌

ಕೊರೊನಾ ವೈರಸ್ ನಿಭಾಯಿಸುವಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಮೇಲೆ ತೀವ್ರ ಪ್ರತಿದಾಳಿ ನಡೆಸಿದ್ದಾರೆ. ಕೊರೊನಾ ವಿಷಯದಲ್ಲಿ ರಾಹುಲ್‌ ಮಾತು ಕೇಳಿದ್ದರೆ ಭಾರತ ಇಟಲಿಯಾಗುತ್ತಿತ್ತು, ನಾವು ಭಾರತವಾಗಿಯೇ ಇರೋಣ ಎಂದು ಅವರು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಪ್ರಧಾನ ಸಂಪಾದಕ ಶಶಿ ಶೇಖರ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಪರೋಕ್ಷವಾಗಿ ರಾಹುಲ್‌ ಮತ್ತು ಪ್ರಿಯಾಂಕ ಇಬ್ಬರನ್ನು ಇಟಲಿಯವರು ಎಂದು ಟೀಕಿಸಿದ್ದಾರೆ.

ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಇಟಲಿ ತೀವ್ರ ಹೊಡೆತ ತಿಂದ ಮೊದಲ ಯುರೋಪಿಯನ್ ದೇಶವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಇಟಲಿಯು 2.33 ಲಕ್ಷ ಕೊರೊನಾ ಪ್ರಕರಣಗಳು ಮತ್ತು 33,000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತವು 2.26 ಲಕ್ಷ ಪ್ರಕರಣಗಳು ಮತ್ತು 6,348 ಸಾವುಗಳನ್ನು ವರದಿ ಮಾಡಿದೆ.

ಫೆಬ್ರವರಿ 12 ರಂದೇ ರಾಹುಲ್‌ ಗಾಂಧಿಯವರು ಕೊರೊನಾ ವೈರಸ್‌ ಬಹಳ ಅಪಾಯಕಾರಿ. ಇದರ ಬಗ್ಗೆ ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಂಡು ಎದುರಿಸಬೇಕು ಎಂದು ಟ್ವೀಟ್‌ ಮಾಡಿದ್ದರು. ಅಲ್ಲದೇ ಮಾರ್ಚ್‌ 05 ರಂದು ಅದರ ಬಗ್ಗೆ ಜ್ಞಾಪಿಸಿದ್ದರು. ನಂತರ ಮಾರ್ಚ್‌ 12 ರಂದು ಮತ್ತೊಮ್ಮೆ ತಮ್ಮ ಫೆಬ್ರವರಿ 12 ರ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿ ಸರ್ಕಾರ ಏನು ಮಾಡುತ್ತಿಲ್ಲ ಎಂದು ಟೀಕಿಸಿದ್ದರು. ಮಾರ್ಚ್‌ 24 ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲಾಕ್‌ಡೌನ್‌ ಘೋಷಿಸಿತ್ತು.

ಲಾಕ್‌ಡೌನ್‌ ವೇಳೆಯಲ್ಲಿ ವಲಸೆ ಕಾರ್ಮಿಕರನ್ನು ಕೇಂದ್ರ ಸರ್ಕಾರ ಮತ್ತು ಯುಪಿ ಸರ್ಕಾರ ನಡೆಸಿಕೊಂಡ ರೀತಿಗೆ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ಮೇಲೆ ಟೀಕೆಯ ಸುರಿಮಳೆ ಸುರಿಸಿತ್ತು. ಯುಪಿಗೆ ಬಸ್‌ ಕರೆತರುವ ವಿಚಾರದಲ್ಲಿ ಪ್ರಿಯಾಂಕ ಗಾಂಧಿ ಮತ್ತು ಯೋಗಿ ಆದಿತ್ಯನಾಥ್‌ ನಡುವೆ ವಾಗ್ವಾದ ನಡೆದಿತ್ತು. ಇತ್ತೀಚಿನ ದಿನಗಳಲ್ಲಿ ಮೋದಿಯವರ ಮುಂದಾಲೋಚನೆ ಮತ್ತು ಯೋಜನೆಗಳಿಲ್ಲ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗ ಅಧಿಕವಾಗಿದೆ, ಸಣ್ಣ ಮತ್ತು ಮದ್ಯಮ ಉದ್ಯಮಗಳು ನೆಲಕಚ್ಚಿವೆ ಎಂದು ರಾಹುಲ್‌ ಟೀಕಿಸಿದ್ದರು.

ಇದಕ್ಕೆ ಪ್ರತಿಯಾಗಿ ಯೋಗಿ ಆದಿತ್ಯನಾಥ್‌ ನಿಮ್ಮ ಮಾತು ಕೇಳಿದ್ದರೆ ಭಾರತ ಇಟಲಿಯಾಗುತ್ತಿತ್ತು ಎಂದು ತಿರುಗೇಟು ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights