ವೈಜಾಕ್ ಗ್ಯಾಸ್ ದುರಂತ – ಎಲ್ ಜಿ ಪಾಲಿಮರ್ಸ್ ಸಂಸ್ಥೆಗೆ 50 ಕೋಟಿ ದಂಡ!
ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪದ ಆರ್‌ಆರ್ ವೆಂಕಟಾಪುರಂ ಗ್ರಾಮದಲ್ಲಿ ವಿಷಾನಿಲ ಸೋರಿಕೆ ದುರಂತ ಪ್ರಕರಣದಲ್ಲಿ ಬಹುರಾಷ್ಟ್ರೀಯ ರಾಸಾಯನಿಕ ಕಾರ್ಖಾನೆ ಎಲ್‌ಜಿ ಪಾಲಿಮರ್ಸ್ ಸಂಸ್ಥಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 50 ಕೋಟಿ ರೂಪಾಯಿ ದಂಡ ವಿಧಿಸಿದೆ.
ವೈಜಾಕ್ ಗ್ಯಾಸ್ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಸೇರಿದಂತೆ ಇದುವರೆಗೂ 11 ಜನ ಮೃತಟ್ಟಿದ್ದು, 200ಕ್ಕೂ ಹೆಚ್ಚು ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್‌ಜಿ ಪಾಲಿಮರ್ಸ್ ಸುತ್ತಲಿನ ಮೂರು ಕಿ.ಮೀ ಪ್ರದೇಶದಲ್ಲಿ ವಿಷಾನಿಲ ವ್ಯಾಪಿಸಿ, 1,000ಕ್ಕೂ ಅಧಿಕ ಜನ ತೊಂದರೆಗೀಡಾಗಿದ್ದಾರೆ.
ವಿಷಾನಿಲ ಸೋರಿಕೆ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್ ಜಿಟಿ ಮುಖ್ಯಸ್ಥ ನ್ಯಾ. ಆದರ್ಶ್ ಕುಮಾರ್ ಗೋಯಲ್ ಅವರಿದ್ದ ಪೀಠ ಮೇ.08 ರಂದು ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಮೇಲ್ನೋಟಕ್ಕೆ ಗೋಚರಿಸಿರುವ ಜೀವಹಾನಿ, ಸಾರ್ವಜನಿಕ ಆರೋಗ್ಯ, ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗಮನಿಸಿ ಎಲ್ ಜಿ ಪಾಲಿಮರ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ 50 ಕೋಟಿ ರೂಪಾಯಿ ಠೇವಣಿ ಇಡಲು ಸೂಚಿಸಲಾಗಿದೆ.
ಈ ಮಧ್ಯೆ ನಡುರಾತ್ರಿಯಲ್ಲಿ ವಿಷಾನಿಲ ಸೋರಿಕೆ ಹೇಗೆ ಸಂಭವಿಸಿತು ಎನ್ನುವುದರ ಕುರಿತು ಇನ್ನಷ್ಟೇ ತನಿಖೆಯಾಗಬೇಕಿದ್ದು, ಕೇಂದ್ರ ಸರ್ಕಾರ, ಅರಣ್ಯ, ಪರಿಸರ ಸಚಿವಾಲಯ, ಎಲ್ ಜಿ ಪಾಲಿಮರ್ಸ್ ಇಂಡಿಯಾ, ಆಂಧ್ರಪ್ರದೇಶ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಶಾಖಪಟ್ಟಣಂ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ನೊಟೀಸ್ ಜಾರಿ ಮಾಡಿದ್ದು ಮೇ.18 ರ ಒಳಗೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಿವೆ.

