ಕೊರೊನ ವೈರಸ್ ಮಾರಣಾಂತಿಕ ಅಲ್ಲ, ಕೇಂದ್ರ ಇದರ ಬಗ್ಗೆ ಅನಗತ್ಯ ಭಯವನ್ನು ನಿವಾರಿಸಬೇಕು: ರಾಹುಲ್ ಗಾಂಧಿ

ನಾವೆಲ್ ಕೊರೊನ ವೈರಸ್ ಮಾರಣಾಂತಿಕ ಅಲ್ಲ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಾಷ್ಟ್ರವ್ಯಾಪಿ ಲಾಕ್ ಡೌನ್ ತೆರವುಗೊಳಿಸುವ ಭಾಗವಾಗಿ ಅದರ ಬಗ್ಗೆ ಜನರಿಗೆ ಇರುವ ಭಯವನ್ನು ನಿವಾರಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಅವರು ಶುಕ್ರವಾರ ಹೇಳಿದ್ದಾರೆ.

ಪಕ್ಷದ ಆಂತರಿಕ ಸಮಿತಿ ಮಾಡಿರುವ ಅಧ್ಯನದ ಕುರಿತು ಪತ್ರಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ರಾಹುಲ್ ಗಾಂಧಿ “ಲಾಕ್ ಡೌನ್ ಅಂದರೆ ಕೀ ತೆಗೆದು ಹಾಕಿ ಮಾಡುವುದಲ್ಲ. ಈಗ ಲಾಕ್ ಡೌನ್ ನಿಂದ ಹೊರಗೆ ಬರುವುದಕ್ಕೆ ಮಾನಸಿಕ ಬದಲಾವಣೆಯೂ ಅಗತ್ಯವಿದೆ” ಎಂದಿದ್ದಾರೆ.

ಇದರ ವಿವರಣೆಯನ್ನು ಮುಂದುವರೆಸಿ “ಕೆಲವು ವರ್ಗದ ಜನರಿಗೆ ಈ ರೋಗ ಆತಂಕಕಾರಿಯಾಗಿದೆ. ಅದರಲ್ಲೂ ವಯಸ್ಸಾದವರಿಗೆ, ಸಕ್ಕರೆಖಾಯಿಲಿ, ರಕ್ತದೊತ್ತಡ ಇತ್ಯಾದಿ ಖಾಯಿಲೆ  ಇರುವವರಿಗೆ ಇದು ಆತಂಕಕಾರಿ. ಅದನ್ನು ಹೊರತುಪಡಿಸಿದರೆ ಇದು ಅಂತಹ ಭಯಾನಕವಲ್ಲ. ಆದುದರಿಂದ ಜನರಲ್ಲಿ ಮಾನಸಿಕ ಬದಲಾವಣೆಗೆ ಸಹಾಯ ಮಾಡುವುದು ಅವಶ್ಯಕ. ಸದ್ಯಕ್ಕೆ ಜನ ಭಯಭೀತರಾಗಿದ್ದಾರೆ. ಸರ್ಕಾರ ಮತ್ತೆ ವ್ಯವಹಾರಗಳಿಗೆ ಚೇತರಿಕೆ ನೀಡಬೇಕು ಎಂದರೆ ಈ ಭಯವನ್ನು ಹೋಗಲಾಡಿಸಿ, ಜನರಲ್ಲಿ ಭರವಸೆಯನ್ನು ಮೂಡಿಸಬೇಕಿದೆ” ಎಂದಿದ್ದಾರೆ.

ಹಾಗೆಯೇ ಲಾಕ್ ಡೌನ್ ತೆರವುಗೊಳಿಸುವಾಗ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಪಾರದರ್ಶಕತೆ ಇರಬೇಕೆಂದು ಹೇಳಿರುವ ಅವರು “ಅವರು ಹೇಗೆ ಲಾಕ್ ಡೌನ್ ತೆರವುಗೊಳಿಸುತ್ತಾರೆ ಎಂಬ ಯೋಜನೆಯ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಇವತ್ತಿಗೆ ವಲಸೆ ಕಾರ್ಮಿಕರಿಗೆ ಸಹಾಯ ಮತ್ತು ಹಣದ ಅವಶ್ಯಕತೆ ಇದೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೂ ತುರ್ತು ಸಹಾಯದ ಅವಶ್ಯಕತೆ ಇದೆ. ಅದು ಇವತ್ತೇ ಆಗಬೇಕಿದೆ ನಾಳೆಯಲ್ಲ” ಎಂದು ಔರಂಗಾಬಾದ್ ನಲ್ಲಿ 16 ವಲಸೆ ಕಾರ್ಮಿಕರ ಮೇಲೆ ರೈಲು ಹರಿದಿರುವ ಘಟನೆಯನ್ನು ಉದಾಹರಿಸಿ ಹೇಳಿದ್ದಾರೆ.

“ಕೇಂದ್ರ ಸರ್ಕಾರ ಕೂಡಲೇ 65 ಸಾವಿರ ಕೋಟಿ ಹಣದ ಸಹಾಯ ನೀಡಬೇಕು. ಬಡ ಮತ್ತು ವಲಸೆ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಬೇಕು. ರಾಜ್ಯ ಸರ್ಕಾರಗಳ ಜೊತೆಗೆ ಕೇಂದ್ರ ಮಾತುಕತೆ ನಡೆಸಬೇಕು” ಎಂದು ಕೂಡ ರಾಹುಲ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights