ನೀವು ನಡೆಸುತ್ತಿರುವ ಸರ್ಕಾರವನ್ನೋ? ಸರ್ಕಸ್‌ ಕಂಪನಿಯನ್ನೋ?: ಕೇಂದ್ರಕ್ಕೆ ಕಾಂಗ್ರೆಸ್‌ ಪ್ರಶ್ನೆ

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಕಡಿತಗೊಳಿಸುವುದಾಗಿ ಆದೇಶ ಹೊರಡಿಸಿದ್ದ ಸರ್ಕಾರ, ಒಂದೇ ದಿನದಲ್ಲಿ ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ನೀವು ಸರ್ಕಾರ ನಡೆಸುತ್ತಿದ್ದೀರೋ ಅಥವಾ ಸರ್ಕಸ್‌ ಕಂಪನಿ ನಡೆಸುತ್ತಿದ್ದೀರಾ? ಎಂದು ವ್ಯಂಗ್ಯವಾಡಿದೆ.

ಬಡ್ಡಿದರ ಕಡಿತದ ಆದೇಶವನ್ನು ಹಿಂಪಡೆಯುವುದಾಗಿ ವಿತ್ತ ಸಚಿವೆ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, “ಸರ್ಕಾರದ ಬಹುಮುಖ್ಯ ಆದೇಶವೊಂದನ್ನು ಹೊರಡಿಸುವಾಗ ಇಷ್ಟು ಅಜಾಗರೂಕತೆಯೇ? ಅಥವಾ ಇದು ಚುನಾವಣಾ ಬೆಂಬಲಿತ ನಡೆಯಾಗಿತ್ತೇ” ಎಂದು ಪ್ರಶ್ನಿಸಿದ್ದಾರೆ.

“ಮೇಡಂ (ನಿರ್ಮಲಾ ಸೀತಾರಾಮನ್‌) ನೀವು ಸರ್ಕಾರ ನಡೆಸುತ್ತಿದ್ದೀರಾ, ಸರ್ಕಸ್ ಕಂಪನಿ ನಡೆಸುತ್ತಿದ್ದೀರಾ?. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಮುಂದುವರೆಯಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ” ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಿ ಕೇಂದ್ರ ಸರ್ಕಾರಬುಧವಾರ ಆದೇಶ ಹೊರಡಿಸಿತ್ತು. ಈ ಆದೇಶದಿಂದಾಗಿ ಬ್ಯಾಂಕುಗಳು ತನ್ನ ಠೇವಣಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಸಣ್ಣ ಉಳಿತಾಯ ಯೋಜನೆಗಳ ಮೇಲೆ ಗರಿಷ್ಠ ಶೇ.1.1ರವರೆಗೆ ಬಡ್ಡಿ ಇಳಿಕೆ ಮಾಡಲಾಗಿತ್ತು. ಆದರೆ ಗುರುವಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತದ ಆದೇಶವನ್ನು ಸರ್ಕಾರ ಹಿಂಪಡೆದಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಇದನ್ನೂ ಓದಿ: ಮಮತಾ V/S ಸುವೆಂದು: ಸಿಎಂ ಮತ್ತು BJP ನಾಯಕನ ಭವಿಷ್ಯಕ್ಕೆ ಇಂದು ಮತದಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights