ಬೆಂಗಳೂರಿನ ಅವ್ಯವಸ್ಥೆಯ ನಡುವೆಯೂ ಭೋರ್ಗರೆದು ನರ್ತಿಸುತ್ತಿದೆ ಮುತ್ಯಾಲ ಮಡು ಜಲಪಾತ!
ಬೆಂಗಳೂರಿಗರಿಗೆ ಮಳೆ ಎಂದರೆ ಕೇಡು ಎಂದು ಭಾವಿಸುವ ಮಟ್ಟಕ್ಕೆ ಬೆಂಗಳೂರು ಬೆಳೆದಿದ್ದು, ಅಷ್ಟೇ ಪ್ರಮಾಣದ ಅವ್ಯವಸ್ಥೆಗಳ ಆಗರವೂ ಆಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಬೆಂಗಳೂರು ಬೆಂಡಾಗಿದ್ದು, ರಾಜಾರಾಜೇಶ್ವರಿ ನಗರ, ಕೆಂಗೇರಿ ಸೇರಿದಂತೆ ಹಲವು ಭಾಗಗಳು ನಲುಗಿ ಹೋಗಿವೆ. ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಒಳಚರಂಡಿಗಳು ಬಂದ್ ಆಗಿವೆ, ನೀರು ಮನೆ, ಕಟ್ಟಡಗಳ ನೆಲಮಾಳಿಗೆಗೆ ನುಗ್ಗಿ ಸಾಕಷ್ಟು ನಷ್ಟವೂ ಅಗಿದೆ. ಈ ಎಲ್ಲದರ ಮಧ್ಯೆ, ನಿಸರ್ಗದ ನರ್ತನ ನಡೆಯುತ್ತಿರುವುದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಮುತ್ಯಾಲ ಮಡು ಜಲಪಾತ.
ಬೆಂಗಳೂರು ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಗ್ಗುಲಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಈ ಮುತ್ಯಾಲ ಮಡು. ಬೆಟ್ಟ ಗುಡ್ಡಗಳ ನಡುವೆ ಝಳಪಿಸುತ್ತ, ಮುತ್ತಿನ ಹನಿಗಳಂತೆ ನೀರು ಪ್ರಪಾತಕ್ಕೆ ದುಮ್ಮಿಕ್ಕುವ ಈ ಮುತ್ಯಾಲ ಮಡು ಬೆಂಗಳೂರಿನ ಸುತ್ತಲಿನ ಅಪರೂಪದ ಜಲಪಾತ.
ಬೆಂಗಳೂರು ಬೆಳೆದಂತೆ ವೃಷಭಾವತಿ ನದಿಯೂ ಸೇರಿದಂತೆ ಹಲವಾರು ಕೆರೆ-ಕಟ್ಟೆಗಳು ಕಣ್ಮರೆಯಾಗಿವೆ. ಸ್ವಚ್ಛ ನೀರಿನಿಂದ ಸ್ವಚ್ಛಂದವಾಗಿ ಹರಿಯುತ್ತಿದ್ದ ವೃಷಭಾವತಿ ನದಿಯೂ ಕೂಡ ಇತರ ರಾಜಕಾಲುವೆಗಳಂತೆ ಒಂದು ಕೊಳಚೆ ನೀರು ಹರಿಯುವ ಕಾಲುವೇ ಆಗಿಹೋಗಿದೆ. ಎತ್ತ ನೋಡಿದರೂ ಕಾಂಕ್ರಿಟ್ ಕಾಡಿನಂತಿರುವ, ಟ್ರಾಫಿಕ್, ಹೊಗೆ, ಧೂಳುಗಳಿಂದಲೂ ಮುಚ್ಚಿಹೋಗುತ್ತಿರುವ ಬೆಂಗಳೂರಿಗೆ ಮುತ್ಯಾಲ ಮಡು ಒಂದು ವರದಾನವಾಗಿ ಇನ್ನೂ ಉಳಿದಿದೆ.
ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ಯಾಲ ಮಡು ಜಲಪಾತ ಗಿರಿ ಕಾನನದ ಮುಗಿಲಿಂದ ಪ್ರಪಾತಕ್ಕೆ ಧುಮ್ಮಿಕ್ಕುತ್ತಿರುವ ಜಲಧಾರೆ ಇದು.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಕೂಬಾ ಡೈವ್ ಪೆಸ್ಟ್ ಸವಿದ ಪ್ರವಾಸಿಗರು….
ಬೆಂಗಳೂರು ನಗರದಿಂದ ಕೇವಲ 35 ಕಿ.ಮಿ. ಹಾಗೂ ಆನೇಕಲ್ ಪಟ್ಟಣಕ್ಕೆ ಕೇವಲ 8 ಕಿ. ಮಿ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಮುತ್ಯಾಲ ಮಡು ಜಲಪಾತ, ಕಾಡಿನ ನಡುವೆ ಕಂಗೊಳಿಸುತ್ತಿರುವ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮುತ್ತಿನ ಹನಿಗಳಂತೆ ನೀರು ಬೆಟ್ಟಗುಡ್ಡಗಳನ್ನು ಸೀಳಿ ಪ್ರಪಾತದಲ್ಲಿ ದುಮ್ಮಿಕ್ಕುವುದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅದ್ರಲ್ಲು ಮಳೆಗಾಲದಲ್ಲಿ ತನ್ನ ವೈಭವನ್ನು ಮತ್ತಷು ಹೆಚ್ಚಿಸಿಕೊಳ್ಳುವ ಇಲ್ಲಿನ ಜಲಪಾತವನ್ನು ನೋಡುವುದೇ ಒಂದು ಸೋಜಿಗ. ಕೊರೋನಾ ಬಳಿಕ ಪ್ರವಾಸಿಗರ ದಂಡು ಕಡಿಮೆಯಾಗಿದ್ದರು. ಜಲಪಾತ ಸೌಂದರ್ಯಕ್ಕೆ ಪ್ರವಾಸಿಗರು ಮಾರುಹೋಗಿದ್ದಾರೆ.
ಮುತ್ಯಾಲಮಡು ಜಲಪಾತ ಬೆಂಗಳೂರು ನಗರಕ್ಕೆ ತೀರ ಹತ್ತಿರದಲ್ಲಿದೆ. ಜಲಪಾತದ ಸೌಂದರ್ಯವನ್ನು ಸವಿಯಲು ಒಂದು ದಿನದ ಪಿಕ್ನಿಕ್ಗೆ ಹೇಳಿ ಮಾಡಿಸಿದಂತಿದೆ. ಪ್ರಕೃತಿ ನಡುವೆ ಸ್ವಚ್ಚಂದವಾಗಿ ವಿರಮಿಸಲು ಪ್ರೇಮಿಗಳು, ಸ್ನೇಹಿತರೊಂದಿಗೆ ಕಾಡು, ಬೆಟ್ಟಗುಡ್ಡಗಳಲ್ಲಿ ಅಡ್ಡಾಡಿ ಎಂಜಾಯ್ ಮಾಡಲು ಪಡ್ಡೆ ಹೈಕಳು, ದಿನನಿತ್ಯದ ಜಂಜಾಟದಿಂದ ವಿಶ್ರಾಂತಿಗಾಗಿ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರು ಧುಮ್ಮಿಕ್ಕಿ ಭೋರ್ಗರೆಯುತ್ತಿರುವ ಜಲಪಾತ ಮತ್ತು ಸುತ್ತಮುತ್ತಲಿನ ಪರಿಸರದ ಐಸಿರಿಯನ್ನು ಕಂಡು ಖುಷಿಪಡಬಹುದಾಗಿದೆ ಎಂದು ಪ್ರವಾಸಿಗರಾದ ರಂಜಿತ್ ಮತ್ತು ತೇಜಸ್ ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಗಿರಿ ಕಾನನದ ನಡುವೆ ಕಂಗೊಳಿಸುತ್ತಿರುವ ಪ್ರಸಿದ್ದ ಪ್ರವಾಸಿ ತಾಣ ಮುತ್ಯಾಲಮಡು ಬೇಸಿಗೆಯಲ್ಲಿ ಝರಿಯಂತೆ ಮಳೆಗಾಲದಲ್ಲಿ ತೊರೆಯಂತೆ ಭೋರ್ಗರೆಯುವುದನ್ನು ಕಂಡು ಕಣ್ತುಂಬಿಕೊಳ್ಳಲು ಇಚ್ಚೆಯುಳ್ಳ ಪ್ರವಾಸಿಗರು ಮುತ್ಯಾಲಮಡುವಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದಾಗಿದೆ.
ಇದನ್ನೂ ಓದಿ: ಪ್ರವಾಹ: 11 ವರ್ಷಗಳಲ್ಲಿ ರಾಜ್ಯಕ್ಕೆ ಕೇಂದ್ರ ಕೊಟ್ಟ ಪರಿಹಾರ 11,495 ಕೋಟಿ ಮಾತ್ರ!