ಅನಕ್ಷರಸ್ಥರಿಗೆ ಸಾಕ್ಷಾರತೆ ಕಲಿಸುವ ಓದು-ಬರಹ ಅಭಿಯಾನಕ್ಕೆ ಏ.2ರಂದು ಚಾಲನೆ: ಶಿಕ್ಷಣ ಸಚಿವ

ಅನಕ್ಷರಸ್ಥರಿಗೆ ಸಾಕ್ಷಾರತೆಯನ್ನು ಕಲಿಸುವ ಉದ್ದೇಶಿತ ಓದು-ಬರಹ (ಪಢನಾ-ಲಿಖನಾ) ಅಭಿಯಾನಕ್ಕೆ ಏಪ್ರಿಲ್‌ 2ರಿಂದ ಚಾಲನೆ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಈ ಅಭಿಯಾನವು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದು, ರಾಜ್ಯದಲ್ಲಿ ಮೇ ತಿಂಗಳ ವೇಳೆಗೆ 3.20 ಲಕ್ಷ ಅನಕ್ಷರಸ್ಥರಿಗೆ ಓದು ಬರಹ ಕಲಿಸಿ ಸಾಕ್ಷಾರಸ್ಥರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ. ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ 24 ತಾಲೂಕು, 219 ಗ್ರಾಮ ಪಂಚಾಯತ್ ಮತ್ತು 19 ನಗರ/ಪಟ್ಟಣ ಪ್ರದೇಶಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

15 ರಿಂದ 50 ವರ್ಷ ವಯಸ್ಸಿನ ಅನಕ್ಷರಸ್ಥ 2.4 ಲಕ್ಷ ಮಹಿಳೆಯರು ಮತ್ತು 80,000 ಪುರುಷರಿಗೆ ಅಕ್ಷರ ಕಲಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕಲಿಕೆ ಪೂರ್ಣಗೊಂಡ ನಂತರ ಕಲಿಕಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ ಉತ್ತೀರ್ಣರಾದವರಿಗೆ ಇಲಾಖೆಯಿಂದ ಸಾಕ್ಷರತಾ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ರಾಜ್ಯದಲ್ಲಿ ಗುರುತಿಸಲಾಗಿರುವ 1.26 ಕೋಟಿ ಅನಕ್ಷರಸ್ಥರ ಪೈಕಿ ಈಗಾಗಲೇ 57 ಲಕ್ಷ ಜನರನ್ನು ಸಾಕ್ಷರರನ್ನಾಗಿ ಮಾಡಲಾಗಿದ್ದು, ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಸಾಕ್ಷರತೆಯ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೊಸ ಸ್ತರಕ್ಕೆ ಕೊಂಡೊಯ್ಯಲು ಇಲಾಖೆಯು ಕ್ರಿಯಾ ಯೋಜನೆಯನ್ನು ರೂಪಿಸುತ್ತಿದೆ. ನವ ಸಾಕ್ಷರರಿಗೆ ಜೀವನೋಪಾಯ ಕೌಶಲ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸ್ವಯಂಪ್ರೇರಿತರಾಗಿ ಕಲಿಕೆಗೆ ತೊಡಗಿಸಿಕೊಂಡ ನವ ಸಾಕ್ಷರರುಗಳ ಯಶೋಗಾಥೆಯನ್ನು ಪ್ರಕಟಣೆಯ ಮೂಲಕ ಹೊರತರಲು ನಿರ್ದೇಶನ ನೀಡಿದ ಅವರು, ಇಂತಹ ಪ್ರಯತ್ನಗಳು ಇಲಾಖೆಯ ಕೆಲಸಗಳಿಗೆ ಅರ್ಥಪೂರ್ಣತೆಯನ್ನು ತಂದುಕೊಡುತ್ತವೆ ಎಂದಿದ್ದಾರೆ.

ಚಂದನ ವಾಹಿನಿಯ ಮೂಲಕ ಸಮಾಜದಲ್ಲಿ ಗಾರ್ಮೆಂಟ್ಸ್ ನೌಕರರು, ಸಿದ್ಧಿ ಜನಾಂಗದಂತಹ ವಿವಿಧ ಹಿಂದುಳಿದ ವರ್ಗಗಳ ಅನಕ್ಷರಸ್ಥರೂ ಸೇರಿದಂತೆ ವಿಭಿನ್ನ ವರ್ಗಗಳ ಸಾಕ್ಷರತೆಗೆ ವಿನೂತನ ಕಾರ್ಯಕ್ರಮಗಳನ್ನ ಇಲಾಖೆಯೂ ಹಮ್ಮಿಕೊಳ್ಳಲಿದೆ ಎಂದು ಸೂಚಿಸಿದರು.

ಇದನ್ನೂ ಓದಿಒಂದೇ ವೇದಿಕೆಯಲ್ಲಿ BJP ಸಚಿವ-ಸಂಸದರ ನಡುವೆ ವಾಕ್ಸಮರ; ಕೇಂದ್ರದ ವಿರುದ್ಧ ಗುಡುಗಿದ ಮಾಧುಸ್ವಾಮಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights