ಒಂದೇ ವೇದಿಕೆಯಲ್ಲಿ BJP ಸಚಿವ-ಸಂಸದರ ನಡುವೆ ವಾಕ್ಸಮರ; ಕೇಂದ್ರದ ವಿರುದ್ಧ ಗುಡುಗಿದ ಮಾಧುಸ್ವಾಮಿ!
ಮೈಸೂರಿನಲ್ಲಿ ನಡೆದ ‘ರಾಷ್ಟ್ರೀಯ ಐಕ್ಯತೆ, ಪ್ರಾದೇಶಿಕ ಸ್ವಾತಂತ್ರ್ಯ’ ಎಂದು ವಿಚಾರ ಸಂಕಿರಣ ಕಾರ್ಯಕ್ರಮವು ಬಿಜೆಪಿ ಸಚಿವ ಮತ್ತು ಸಂಸದರ ನಡುವೆ ವಾಕ್ಸಮರ ವೇದಿಕೆಯಾಗಿತ್ತು. ರಾಜ್ಯದ ಆಡಳಿತದ ವಿಚಾರದಲ್ಲಿ ಕೇಂದ್ರವು ಹಸ್ತಕ್ಷೇಪ ಮಾಡುತ್ತಿದೆ ಎಂದು ಸಚಿವ ಮಾಧುಸ್ವಾಮಿ ಆರೋಪಿಸಿದರೆ, ಸಂಸದ ತೇಜಸ್ವಿ ಸೂರ್ಯ ಕೇಂದ್ರವನ್ನು ಸಮರ್ಥಿಸಿಕೊಂಡರು. ಹೀಗಾಗಿ ಬಿಜೆಪಿ ನಾಯಕರ ನಡುವೆಯೇ ವಾಗ್ವಾದ ಜೋರಾಗಿತ್ತು.
ಮೈಸೂರಿನಲ್ಲಿ ಭಾನುವಾರ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತಾಡಿದ ಮಾಧುಸ್ವಾಮಿ, ‘ಕೇಂದ್ರದಿಂದ ಪ್ರಾದೇಶಿಕ ಶಕ್ತಿ ಕುಂದುತ್ತಿದೆ’ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು. ಇದೇ ವೇಳೆ, ಕೇಂದ್ರದ ಸಲಹೆ ರಾಜ್ಯಗಳು ಸ್ವೀಕರಿಸುತ್ತಿಲ್ಲ ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದರು. ಹೀಗಾಗಿ ಒಂದೇ ವೇದಿಕೆಯಲ್ಲಿ ಬಿಜೆಪಿ ಮುಖಂಡರ ಭಿನ್ನಾಭಿಪ್ರಾಯಗಳು ಕಾರ್ಯಕರ್ತರಿಗೆ ಇರುಸು-ಮುರುಸು ಉಂಟು ಮಾಡಿತ್ತು.
ಕೇಂದ್ರ ಸರ್ಕಾರದಲ್ಲಿ ಸರ್ವಾಧಿಕಾರಿ ಧೋರಣೆ ಶುರುವಾಗಿದೆ. ಇದು ರಾಜ್ಯದ ಒಕ್ಕೂಟ ವ್ಯವಸ್ಥೆಗೆ ಭಾರಿ ಆತಂಕ ತಂದಿದೆ. ರಾಜ್ಯದ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚು ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಧುಸ್ವಾಮಿ ಆರೋಪಿಸಿದ್ದಾರೆ.
ಇದನ್ನೂ ಓದಿ: BJPಯೊಂದಿಗೆ ಚುನಾವಣಾ ಆಯೋಗ ಶಾಮೀಲು; TMC ಆಡಿಯೋ ಬಿಡುಗಡೆ!
‘ನೀಟ್’ಗೂ ನಮ್ಮ ರಾಜ್ಯಕ್ಕೂ ಏನ್ ಸಂಬಂಧ ಇದೆ. ಕೇಂದ್ರದ ನಿರ್ಣಯದಿಂದಾಗಿ 160 ಸೂಪರ್ ಸ್ಪೆಷಾಲಿಟಿ ಸೀಟುಗಳು ಖಾಲಿ ಉಳಿದಿವೆ. ನೀಟ್ನಲ್ಲಿ ಯಾರೋ ಉತ್ತರ ಭಾರತದವರು ಅವಕಾಶ ಪಡೆದುಕೊಂಡು ಬರುತ್ತಾರೆ. ಇದು ಸ್ಥಳೀಯವಾಗಿ ತೊಂದರೆಯಾಗುತ್ತದೆ. ಇದರಿಂದ 3-4 ವರ್ಷ ಡಾಕ್ಟರ್ ಕೊರತೆ ಎದುರಿಸಬೇಕಾಗುತ್ತೆ. ಮೊದಲು ಎಜುಕೇಷನ್ನಲ್ಲಿ ನಾವು ಕ್ಲಾಸ್ ಆಗಿದ್ದೆವು. ತಮಿಳುನಾಡು ಪ್ರೊಡಕ್ಷನ್ನಲ್ಲಿ ವಂಡರ್ಫುಲ್ ಆಗಿದ್ದರು. ಆದರೆ ಕೇಂದ್ರದ ಹಸ್ತಕ್ಷೇಪದಿಂದ ದಕ್ಷಿಣದ ರಾಜ್ಯಗಳು ಕುಗ್ಗುತ್ತಿವೆ. ಸಂಸದರಾಗಿ ಇದನ್ನ ಪಾರ್ಲಿಮೆಂಟ್ನಲ್ಲಿ ನೀವು ಪ್ರಶ್ನೆ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಚಿವ ಮಾಧುಸ್ವಾಮಿ ಮನವಿ ಮಾಡಿದ್ದರು.
ಸಚಿವ ಮಾಧುಸ್ವಾಮಿ ಹೇಳಿಕೆಗೆ ಆಕ್ಷೇಪವೊಡ್ಡಿದ ತೇಜಸ್ವಿ ಸೂರ್ಯ, ಪ್ರಾದೇಶಿಕ ಶಕ್ತಿಗಳಿಂದ ಭಾರತದ ಐಕ್ಯತೆಗೆ ಧಕ್ಕೆ ಆಗಲ್ಲ. ಆಡಳಿತ ವಿಚಾರದಲ್ಲಿ ವಿಕೇಂದ್ರೀಕರಣ ದೇಶಕ್ಕೆ ಅಗತ್ಯವಿದೆ. ಸರ್ಕಾರಿಯ ಕಮಿಷನ್ ಸ್ಥಾಪನೆಯಿಂದ ಸಾಕಷ್ಟು ಕೆಲಸವಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಮಧ್ಯೆ ಆರ್ಥಿಕ, ಆಡಳಿತ, ಕಾನೂನು ಮಾರ್ಪಾಡುಗಳಿಗೆ ಕಮಿಷನ್ ಸಲಹೆ ನೀಡಿತ್ತು. ಯಾವ ಸರ್ಕಾರಗಳೂ ಆ ಸಲಹೆಗಳನ್ನ ಸ್ವೀಕರಿಸಲೇ ಇಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರದ ತೆರಿಗೆಯ ಭಾಗದಲ್ಲಿ ಶೇ.42ರಷ್ಟನ್ನು ರಾಜ್ಯಗಳಿಗೆ ನೀಡಲಾಗುತ್ತಿದೆ. ಖಾಸಗೀಕರಣ ಬೆಂಬಲಿಸದಿದ್ದರಿಂದ ದೇಶದಲ್ಲಿ ಬಡತನವಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೆಯಲ್ಲಿ ಜಾರ್ಗ್ರಾಮ ವಿಶೇಷ: ನಾವೆಲ್ಲರೂ ಒಂದೇ-ಪರಸ್ಪರ ಜೊತೆಗಿದ್ದೇವೆ ಎಂದ 3 ಪಕ್ಷಗಳು!

