ಹಿಂದಿ ಹೇರಿಕೆ ವಿರೋಧದ ನಡುವೆಯೂ ಸರ್ಕಾರಿ ಅಧಿಕಾರಿಗಳು ಹಿಂದಿಯಲ್ಲೇ ಮಾತನಾಡಲು ಅಮಿತ್ ಶಾ ಒತ್ತಾಯ

ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣ ರಾಜ್ಯಗಳು ತೀವ್ರವಾಗಿ ಧ್ವನಿ ಎತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಖಂಡಿಸುತ್ತಲೇ ಇವೆ. ಈ ನಡುವೆಯೂ ಭಾರತದ ಸಂಸ್ಕೃತಿ, ನಾಗರಿಕತೆ ಮತ್ತು ಮೌಲ್ಯಾಧಾರಿತ ವ್ಯವಸ್ಥೆಗಳು ಹಿಂದಿ ಭಾಷೆಯ ಕಾರಣದಿಂದಾಗಿ ಜೀವಂತವಾಗಿ ಸಂರಕ್ಷಿತಗೊಂಡಿದೆ. ಹೀಗಾಗಿ ದೇಶದ ಯುವಜನರು ಮತ್ತು ಅಧಿಕಾರಿಗಳು ಹೆಚ್ಚಾಗಿ ಹಿಂದಿ ಭಾಷೆಯನ್ನು ಬಳಸಬೇಕೆಂದು ಕೇಂದ್ರ ಗೃಹ ಸಚಿವ ಅಮಿಶ್‌ ಶಾ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಹಿರಿಯ ಬ್ಯಾಂಕ್ ಅಧಿಕಾರಿಗಳು ಕಚೇರಿಗಳಲ್ಲಿ ಹಿಂದಿಯಲ್ಲಿ ಮಾತನಾಡಬೇಕು ಎಂದು ಒತ್ತಾಯಿಸುತ್ತೇನೆ. ಮುಂದಿನ ಪೀಳಿಗೆಗೆ ಹೆಚ್ಚಿನ ಮಾಹಿತಿಯನ್ನು ಹಿಂದಿ ಭಾಷೆಯಲ್ಲಿ ನೀಡುವುದು ಮುಖ್ಯ. ಆ ಮೂಲಕ ಅವರು ಹಿಂದಿಯಲ್ಲಿ ಪ್ರಾಥಮಿಕವಾದ ಕೆಲಸಗಳನ್ನು ಮಾಡಲು ಪ್ರೇರೇಪಿಸಲ್ಪಡುತ್ತಾರೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ವೈವಿಧ್ಯತೆಯನ್ನು ಹೊಂದಿರುವಂತಹ ಭಾರತದ ಉದ್ದಗಲವನ್ನು ಒಂದುಗೂಡಿಸುವಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಹಿಂದಿ ಭಾಷೆಯೇ ಅತ್ಯಂತ ಪ್ರಮುಖವಾದುದು. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ರಾಷ್ಟ್ರೀಯ ಏಕೀಕರಣಗೊಳಿಸುವ ನಿಟ್ಟಿನಲ್ಲಿ ಹಿಂದಿ ಭಾಷೆ ಹೆಮ್ಮೆಯ ಪ್ರಬಲ ಮಾಧ್ಯಮವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಹಿಂದಿ ಭಾಷೆಯ ಪ್ರಾಮುಖ್ಯತೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಎಂದಿರುವ ಶಾ, ಹಿಂದಿಯ ಜೊತೆಗೆ ಬಂದೇಲ್‌ಖಂಡಿ, ಅವಧಿ, ಭೋಜ್‌ಪುರಿ ಸೇರಿದಂತೆ ಇತರೆ ಭಾಷೆಗಳು ಭಾರತದ ವೈವಿಧ್ಯತೆಯನ್ನು ಹೇಗೆ ಬಲಪಡಿಸಿವೆ ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದು ಹೇಳಿದ್ದಾರೆ.

ಇನ್ನು ಸಂವಿಧಾನದ ಆರ್ಟಿಕಲ್ 351ರ ಪ್ರಕಾರ, ಹಿಂದಿ ಭಾಷೆಯ ಸಮೃದ್ಧಿಯನ್ನು ಇತರೆ ಪ್ರಾದೇಶಿಕ ಭಾಷೆಗಳು ಖಚಿತಪಡಿಸಿಕೊಳ್ಳಬೇಕು ಎಂದಿರುವ ಅಮಿತ್ ಶಾ, ಅಗತ್ಯವಿರುವಲ್ಲೆಲ್ಲಾ ಸಂಸ್ಕೃತ ಮತ್ತು ಇತರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವ ಮೂಲಕ ಶಬ್ದಕೊಶವನ್ನು ಸುಧಾರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಸಾಂವಿಧಾನಿಕ ಜವಾಬ್ದಾರಿಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಅಧಿಕೃತ ಕೆಲಸಗಳನ್ನು ಮೊದಲು ಹಿಂದಿಯಲ್ಲಿ ಮಾಡಿ ನಂತರ ಇತರೆ ಭಾಷೆಗಳಿಗೆ ಅನುವಾದಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಎಲ್ಲಾ ಹಿಂದಿ ಯಾವುದೇ ಭಾಷೆಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ಆದರೆ ಇತರೆ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸಲು ಹಿಂದಿ ಪೂರಕವಾಗಿದೆ. ವೈಜ್ಞಾನಿಕ ಸ್ವರೂಪ, ಸರಳತೆ ಮತ್ತು ಸುಲಭ ಗ್ರಹಿಸುವಿಕೆ ಮತ್ತು ಸ್ವೀಕಾರಾರ್ಹ ಗುಣ ಹಿಂದಿಯ ಭಾಷೆಯ ಶಕ್ತಿಯಾಗಿದೆ. ಹೀಗಾಗಿಯೇ ಹಿಂದಿ ಭಾಷೆಯನ್ನು 1949ರಲ್ಲಿ ಭಾರತದ ಅಧಿಕೃತ ಭಾಷೆಯೆಂದು ಘೋಷಿಸಲಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಬಿಜೆಪಿ ವಿರುದ್ಧ #NoMoreBJP ಟ್ರೆಂಡಿಂಗ್‌! ಕಾರಣವೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights