ಬಂಗಾಳ ಚುನಾವಣೆಯಲ್ಲಿ ಜಾರ್‌ಗ್ರಾಮ ವಿಶೇಷ: ನಾವೆಲ್ಲರೂ ಒಂದೇ-ಪರಸ್ಪರ ಜೊತೆಗಿದ್ದೇವೆ ಎಂದ 3 ಪಕ್ಷಗಳು!

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆಯು ಹಿಂಸಾಚಾರದ ಘಟನೆಗಳಿಗೆ ಕಾರಣವಾಗದೇ ಶಾಂತಿಯುತವಾಗಿ ನಡೆದಿದೆ. ಅಲ್ಲದೆ, ಈ ಹಿಂದೆ ಮಾವೋವಾದಿಗಳ ಭದ್ರಕೋಟೆಯಾಗಿದ್ದ ಜಾರ್‌ಗ್ರಾಮದಲ್ಲಿಯೂ ಮತದಾನವು ಹೆಚ್ಚು ಶಾಂತಿಯುತವಾಗಿ ನಡೆದಿದೆ.

ಜಾರ್‌ಗ್ರಾಮ ಜಿಲ್ಲೆಯ ನಾಲ್ಕು ವಿಧಾನಸಭಾ (ಜಾರ್‌ಗ್ರಾಮ, ಗೋಪಿಬಲ್ಲಾವ್ಪುರ್, ಬಿನ್ಪುರ್ ಮತ್ತು ನಾಯಗ್ರಾಮ್) ಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ನ ಒಟ್ಟು 144 ತುಕಡಿಗಳನ್ನು ನಿಯೋಜಿಸಲಾಗಿದೆ.

ಬೆನೆಗೇರಿಯಾ ಜೂನಿಯರ್ ಪ್ರೌಢ ಶಾಲೆಯಲ್ಲಿ, ಕೋವಿಡ್‌ ಹಿನ್ನೆಲೆಯಲ್ಲಿ ಮತದಾರರು ಸಾಮಾಜಿಕ ಅಂತರವನ್ನು ಅನುಸರಿಸಿ, ಹ್ಯಾಂಡ್‌ ಸ್ಯಾನಿಟೈಸರ್‌ ಹಾಕಿಕೊಂಡು ಮತದಾನ ಕೇಂದ್ರಕ್ಕೆ ಪ್ರವೇಶಿಸಿದ್ದರು. ಅಪರೂಪದ ಆಶ್ಚರ್ಯವೆಂಬಂತೆ, ಮತದಾರರ ಸ್ಲಿಪ್‌ಗಳನ್ನು ವಿತರಿಸುವ ರಾಜಕೀಯ ಪಕ್ಷಗಳ ಟೆಂಟ್‌ಗಳನ್ನು ಅಕ್ಕ-ಪಕ್ಕದಲ್ಲಿಯೇ ಸ್ಥಾಪಿಸಲಾಗಿತ್ತು.

“ಇಲ್ಲಿ ನಾವು ಚುನಾವಣೆಯ ಸಮಯದಲ್ಲಿ ಪರಸ್ಪರ ಜಗಳವಾಡುವುದಿಲ್ಲ. ನಮ್ಮ ನೆರೆಹೊರೆಯ ಸ್ನೇಹಿತರು ತಮ್ಮ ಆಯ್ಕೆಯ ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ. ನಾವು ನಮ್ಮಿಷ್ಟದ ನಾಯಕನ ಪರವಾಗಿ ಪ್ರಚಾರ ಮಾಡುತ್ತೇವೆ. ಆದರೆ, ನಮ್ಮ ಮಧ್ಯೆ ಯಾವುದೇ ದ್ವೇಷವಿಲ್ಲ. ನಾವು ಆಹಾರ ಮತ್ತು ನೀರನ್ನು ಪರಸ್ಪರ ಹಂಚಿಕೊಳ್ಳುತ್ತೇವೆ” ಎಂದು ಟಿಎಂಸಿ ಕಾರ್ಯಕರ್ತೆ ಮೃಗಂಕಾ ಮುರ್ಮು ಹೇಳಿದರು.

ಕೆಲವು ಮೀಟರ್ ದೂರದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರದೊಂದಿಗೆ ಬಿಜೆಪಿ ಪ್ರಚಾರ ಟೆಂಟ್‌ ಅನ್ನು ಹಾಕಿಕೊಂಡಿತ್ತು. “ನಾವು ಪ್ರಜಾಪ್ರಭುತ್ವದ ರೀತಿಯಲ್ಲಿ ಹೋರಾಡೋಣ. ಒಂದು ಚುನಾವಣೆಯಿಂದಾಗಿ ನಮ್ಮ ಸ್ನೇಹವನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್” ಎಂದು ಬಿಜೆಪಿ ಕಾರ್ಯಕರ್ತ ಗೌರಂಗಾ ಮಹತೋ ಹೇಳಿದರು.

ಅದರ ಪಕ್ಕದಲ್ಲಿಯೇ ಸಿಪಿಐ (ಎಂ) ಟೆಂಟ್‌ ಸಹ ಮತದಾರರ ಸ್ಲಿಪ್‌ಗಳನ್ನು ವಿತರಿಸುತ್ತಿರುವುದು ಕಂಡುಬಂತು.

ಸಾಲ್ಬೊನಿ ಪ್ರಾಥಮಿಕ ಶಾಲೆಯು ಅರಣ್ಯಕ್ಕೆ ಹತ್ತಿರದಲ್ಲಿದ್ದ ಕಾರಣ, ಸಿಆರ್‌ಪಿಎಫ್ ಸಿಬ್ಬಂದಿಯನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು. ಸಿಆರ್‌ಪಿಎಫ್ ಸಿಬ್ಬಂದಿಯನ್ನು ಶಾಲೆಯ ಟೆರೇಸ್‌ನಲ್ಲಿ ವಾಂಟೇಜ್ ಪಾಯಿಂಟ್‌ಗಾಗಿ ನಿಯೋಜಿಸಲಾಗಿತ್ತು. “ಇಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ನಾವು ನಿಮಗೆ ಅನುಮತಿಸುವುದಿಲ್ಲ. ಈ ಬೂತ್ ತುಂಬಾ ಸೂಕ್ಷ್ಮವಾಗಿದೆ” ಎಂದು ಸಿಆರ್‌ಪಿಎಫ್‌ನ ಯೋಧರೊಬ್ಬರು ತಿಳಿಸಿದರು.

ಮತದಾನ ಶಾಂತಿಯುತವಾಗಿದೆ ಎಂದು ಗೋಪಿಬಲ್ಲವ್‌ಪುರ ಅಸೆಂಬ್ಲಿ ವಿಭಾಗದ ಶಾಲೆಯೊಂದರ ಅಧ್ಯಕ್ಷರು ತಿಳಿಸಿದ್ದಾರೆ.

Read Also: ಬಂಗಾಳ: 2009ರ CPM ನಾಯಕನ ಹತ್ಯೆ ಪ್ರಕರಣ; TMC ಮುಖಂಡ ಛತ್ರಧರ್‌ ಮಹತೊ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights