BJPಯೊಂದಿಗೆ ಚುನಾವಣಾ ಆಯೋಗ ಶಾಮೀಲು; TMC ಆಡಿಯೋ ಬಿಡುಗಡೆ!
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದೆ. ಶಾನಿವಾರ ನಡೆದ ಮತದಾನದ ವೇಳೆ ಟಿಎಂಸಿಗೆ ಮತ ಹಾಕಿದರೆ ವಿವಿಪ್ಯಾಟ್ ಬಿಜೆಪಿಗೆ ತೋರಿಸುತ್ತಿದೆ ಎಂದು ಟಿಎಂಸಿ ಆರೋಪಿಸಿತ್ತು. ಇದೀಗ, ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ಟಿಎಂಸಿ ಆಡಿಯೋ ಬಿಡುಗಡೆ ಮಾಡಿದೆ.
ಟಿಎಂಸಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ಮುಖಂಡ ಶಿಶಿರ್ ಬಜೋರಿಯಾ ಅವರೊಂದಿಗಿನ ಉದ್ದೇಶಿತ ಸಂಭಾಷಣೆಯಲ್ಲಿ, ಬಿಜೆಪಿ ಮುಖಂಡ ಮುಕುಲ್ ರಾಯ್ ಅವರು ಚುನಾವಣಾ ಆಯೋಗದೊಂದಿಗೆ ಚರ್ಚಿಸಬೇಕಾದ ವಿಷಯಗಳ ಪಟ್ಟಿಯಲ್ಲಿ ಮತಗಟ್ಟೆ ಏಜೆಂಟ್ ಅಥವಾ ಬೂತ್ ಏಜೆಂಟರ ಬಗ್ಗೆ ಒಂದು ನಿರ್ದಿಷ್ಟ ಆದೇಶ ನೀಡುತ್ತಾರೆ.
ಬೂತ್ ಏಜೆಂಟರು ಯಾವಾಗಲು ಅದೇ ಕ್ಷೇತ್ರದ ಮತದಾರನಾಗಿರಬೇಕು ಎಂಬ ನಿಯಮವಿದೆ. ಚುನಾವಣಾ ಆಯೋಗದೊಂದಿಗೆ ಮಾತನಾಡಿ ಅದನ್ನು ಬದಲಿಸಬೇಕು. ರಾಜ್ಯದ ಯಾವುದೇ ವ್ಯಕ್ತಿ, ಯಾವುದೇ ಬೂತ್‌ನಲ್ಲಿ ಬೇಕಾದರೂ ಏಜೆಂಟ್ ಆಗಬಹುದು ಎಂದು ಆಯೋಗ ಹೇಳುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ಹಲವಾರು ಬೂತ್‌ಗಳಲ್ಲಿ ಬಿಜೆಪಿಗೆ ಬೂತ್ ಏಜೆಂಟರೆ ಇಲ್ಲದಂತಾಗುತ್ತದೆ ಎಂದು ಮುಕುಲ್ ರಾಯ್ ಹೇಳಿದ್ದು ಆಡಿಯೋದಲ್ಲಿ ಬಹಿರಂಗಗೊಂಡಿದೆ.
ಆಶ್ಚರ್ಯಕರ ರೀತಿಯಲ್ಲಿ ಚುನಾವಣಾ ಆಯೋಗ ರಾಜ್ಯದ ಯಾವುದೇ ವ್ಯಕ್ತಿ, ಯಾವುದೇ ಬೂತ್‌ನಲ್ಲಿ ಬೇಕಾದರೂ ಏಜೆಂಟ್ ಆಗಬಹುದು ಎಂಬ ಆದೇಶ ಜಾರಿಗೊಳಿಸಿದೆ. ಹಾಗಾಗಿ ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ಟಿಎಂಸಿ ದೂರಿದೆ.
ಈ ಆದೇಶವನ್ನು ರದ್ದುಗೊಳಿಸುವಂತೆ ತೃಣಮೂಲ ಕೇಳುತ್ತಿದೆ ಮತ್ತು ಸಂಸದ ಸುದೀಪ್ ಬಂಡೋಪಾಧ್ಯಾಯ ನೇತೃತ್ವದ ಪಕ್ಷದ ನಿಯೋಗ ಶನಿವಾರ ಆಯೋಗವನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ತೃಣಮೂಲ ಕಾಂಗ್ರೆಸ್‌ಗೆ ಜನರು ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ನಿನ್ನೆ ಸಹ ಟಿಎಂಸಿ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿತ್ತು. “ಕಾಂತಿ ದಕ್ಷಿಣದ ವಿಧಾನಸಭಾ ಸ್ಥಾನದ ಅನೇಕ ಮತದಾರರು ತಾವು ಟಿಎಂಸಿಗೆ ಮತ ಹಾಕಿದ್ದೇವೆ ಅದರೆ ವಿವಿ ಪ್ಯಾಟ್ ಸ್ಲಿಪ್‌ನಲ್ಲಿ ಬಿಜೆಪಿ ಚಿಹ್ನೆ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಗಂಭೀರವಾಗಿದೆ! ಇದು ಅಸಮರ್ಥನೀಯ, ಕೂಡಲೇ ಗಮನ ಹರಿಸಿ” ಎಂದು ಟಿಎಂಸಿ ಟ್ವೀಟ್ ಮಾಡಿತ್ತು.
Read Also: ಬಂಗಾಳ: 2009ರ CPM ನಾಯಕನ ಹತ್ಯೆ ಪ್ರಕರಣ; TMC ಮುಖಂಡ ಛತ್ರಧರ್ ಮಹತೊ ಬಂಧನ!