ಬೆಳಗಾವಿಗೆ ಡಿಕೆ ಶಿವಕುಮಾರ್ ಎಂಟ್ರಿ : ಕಪ್ಪು ಬಾವುಟ ಪ್ರದರ್ಶಿಸಿ ಸಾಹುಕಾರನ ಬೆಂಬಲಿಗಿಂದ ಪ್ರತಿಭಟನೆ!
ಬೆಳಗಾವಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಹಾಟ್ ಸ್ಪಾಟ್ ಆಗಿದೆ. ಬೆಳಗಾವಿಗೆ ಎಂಟ್ರಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರು ಧಿಕ್ಕಾರ ಕೂಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಪರ ಘೋಷಣೆ ಕೂಗಿ ಸ್ವಾಗತಿಸಿದ್ದಾರೆ.
ಹೌದು… ಬೆಳಗಾವಿಯ ಉಪಚುನಾವಣೆ ಕಾವು ಹೆಚ್ಚಾಗಿದ್ದು ನಾಳೆ ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ನಾಮಿನೇಷನ್ ಫೈಲ್ ಮಾಡಲಿದ್ದಾರೆ. ಈ ವೇಳೆ ಕಾಂಗ್ರೆಸ್ ನ ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಲಕ್ಷ್ಮೀಹೆಬ್ಬಾಳ್ಕರ್ ಇರಲಿದ್ದಾರೆ. ಹೀಗಾಗಿ ಇಂದೇ ಬೆಳಗಾವಿಗೆ ಎಂಟ್ರಿ ಕೊಟ್ಟ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲೇ ತಡೆಗೆ ಮುಂದಾಗಿ ” ಗೋ ಬ್ಯಾಕ್ ಡಿಕೆಶಿ” ಪ್ರತಿ ಹಿಡಿದು ಘೋಷಣೆ ಕೂಗುತ್ತಿದ್ದಾರೆ. ಕಪ್ಪು ಬಾವುಟವನ್ನು ಪ್ರದರ್ಶಿಸಿ, ಡಿಕೆಶಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಶರ್ಟ್ ಬಿಚ್ಚ ಅರೆ ಬೆತ್ತಲೆಯಿಂದ ಡಿಕೆಶಿ ಕಾರ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಇನ್ನೂ ಬೆಳಗಾವಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಹರಸಾಹಸಪಡುತ್ತಿದ್ದಾರೆ.
ಇನ್ನೊಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಡಿಕೆ ಶಿವಕುಮಾರ್ ಗೆ ಸ್ವಾಗತ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ” ಈ ಚುನಾವಣೆ ಬರಬಾರದಿತ್ತು, ಸುರೇಶ್ ಅಂಗಡಿ ಅಕಾಲಿಕ ಮರಣದಿಂದ ಈ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಇಡೀ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಹೈಕಮಾಂಡ್, ಎಂಬಿ ಪಾಟೀಲ್, ರಾಮಲಿಂಗಾ ರೆಡ್ಡಿ ಅವರೊಂದಿಗೆ ಈ ಕ್ಷೇತ್ರದ ಶಾಸಕರು ಮತ್ತು ನಾನು ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಅಭ್ಯರ್ಥಿಯನ್ನಾಗಿ ಸೂಚಿಸಿದ್ದೇವೆ. ನಾಳೆ ಬೆಳಿಗ್ಗೆ 11 ಗೆ ನಾಮಿನೇಷನ್ ಫೈಲ್ ಮಾಡುತ್ತಾರೆ. ಜನ ಸೇವೆ, ವರ್ಗದ ಅಭಿಪ್ರಾಯ, ಸೌಮ್ಯ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಬೆಳಗಾವಿ ಜಿಲ್ಲೆಯ ಜನ ಆಶೀರ್ವಾದ ಮಾಡುತ್ತಿದ್ದಾರೆ. ನಾವೂ ಶಕ್ತಿ ಕೊಡಬೇಕು. ಈ ಸರ್ಕಾರ ಡ್ರೈವರ್, ರೈತರು, ನೇಯಿಕರಿಗೆ ಪರಿಹಾರ ಕೊಟ್ಟಿಲ್ಲ. ಎಲ್ಲಾ ವರ್ಗದ ಜನ ರೊಚ್ಚಿಗೆದ್ದಿದ್ದಾರೆ. ಗ್ಯಾಸ್, ಪೆಟ್ರೋಲ್ ಹೆಚ್ಚಿಗಾಗಿದೆ. ಕೊರೊನಾವನ್ನು ನಿರ್ವಹಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಇದಕ್ಕೆಲ್ಲ ಅಂತ್ಯ ಹಾಡಲು ಜನ ಕಾಯುತ್ತಿದ್ದಾರೆ” ಎಂದು ವಾಗ್ದಾಳಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಅವರ ಪ್ರತಿಭಟನೆ ಸ್ವಾಗತನೇ.. ಎಂಥೆಂತ ಘನ ಕಾರ್ಯದ ಪರ ಪ್ರತಿಭಟನೆ ಮಾಡುತ್ತಿದ್ದಾರೆ. ಅದು ನನಗೆ ಸ್ವಾಗತ ಮಾಡಿದಂತೆ ” ಎಂದು ವ್ಯಂಗ್ಯವಾಡಿದ್ದಾರೆ.