FACT CHECK | ಕುಮಾರಿ ಸೌಜನ್ಯ ಪರ ನ್ಯಾಯ ಕೇಳಿದಕ್ಕೆ 100 ಅಡಿ ಎತ್ತರದ ರಥ ಬಿದ್ದಿದೆ ಎಂದು ಸುಳ್ಳು ವರದಿ ಮಾಡಿದ ಏಷಿಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರಿನ ಗ್ರಾಮೀಣ ಪ್ರದೇಶದ ಆನೇಕಲ್ ಸಮೀಪವಿರುವ ಹುಸ್ಕೂರು ಮದ್ದೂರಮ್ಮನ ಜಾತ್ರೆಯ (ಶನಿವಾರ ಸಂಜೆ 22, ಮಾರ್ಚ್, 2025) ನೂರು ಅಡಿ ಎತ್ತರದ ರಥವು ಇದ್ದಕ್ಕಿದ್ದಂತೆ ಬಿದ್ದಿದೆ. ಇದರ ಪರಿಣಾಮವಾಗಿ ಎರಡು ರಥಗಳು ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, 20ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಈ ರಥ ಬೀಳಲು ‘ಜಸ್ಟೀಸ್ ಫಾರ್ ಸೌಜನ್ಯ’ ಎಂಬ ಪೋಸ್ಟ್ರ್ಗಳನ್ನು ಪ್ರದರ್ಶಿಸಿದ್ದು ಕಾರಣ ಎಂಬ ಟೈಟಲ್ ನೀಡಿ ಏಷಿಯಾನೆಟ್ ಸುವರ್ಣ ನ್ಯೂಸ್ ಸುದ್ದಿಯೊಂದನ್ನು ಪ್ರಕಟಿಸಿದೆ.

ಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: ‘ಜಸ್ಟೀಸ್ ಫಾರ್ ಸೌಜನ್ಯ’ ಫಲಕ ಪ್ರದರ್ಶನ ಕಾರಣವೇ? ಎಂಬ ಹೆಡ್ಲೈನ್ ನೀಡಿರುವ ಸುವರ್ಣ ನ್ಯೂಸ್, 13ವರ್ಷ ದಿಂದ ಧರ್ಮಸ್ಥಳದ ಸಮೀಪ, ಉಜಿರೆಯ ಸೌಜನ್ಯಳ ಕೊಲೆಯ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬ ಕೂಗು ಮತ್ತೆ ಜೋರು ಸದ್ದು ಮಾಡುತ್ತಿರುವ ಸಂದರ್ಭದಲ್ಲಿ, ಜಾತ್ರಾಮಹೋತ್ಸವದಲ್ಲಿ ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ, ಫಲಕ ಪ್ರದರ್ಶನ ಮಾಡಿದ್ದರಿಂದ ರಥ ಬಿದ್ದಿದೆ ಎಂಬ ಅರ್ಥ ಬರುವಂತೆ ಟೈಟಲ್ ನೀಡಿ ಸುದ್ದಿ ಪ್ರಸಾರ ಮಾಡಲಾಗಿದೆ.
ಹಾಗಿದ್ದರೆ ಈ ಸುದ್ದಿಯಲ್ಲಿ ಹೇಳಿರುವಂತೆ ‘ಜಸ್ಟೀಸ್ ಫಾರ್ ಸೌಜನ್ಯ’ ಫಲಕ ಪ್ರದರ್ಶನ ಮಾಡಿದ್ದರಿಂದ ಈ ರೀತಿ ದುರಂತ ಸಂಭವಿಸಿದೆಯೇ? ಸುವರ್ಣ ನ್ಯೂಸ್ ಹೇಳಿರುವ ಸುದ್ದಿಯಲ್ಲಿ ನಿಜಾಂಶ ಇದೆಯೇ ಎಂದು ಫ್ಯಾಕ್ಟ್ಚೆಕ್ ಮೂಲಕ ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸುವರ್ಣ ನ್ಯೂಸ್ನ ವೆಬ್ ಪೋರ್ಟಲ್ನಲ್ಲಿ ಮಾಡಿರುವ ವರದಿಯಂತೆ, ಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ಧರೆಗುರುಳಲು ‘ಜಸ್ಟೀಸ್ ಫಾರ್ ಸೌಜನ್ಯ’ ಫಲಕ ಪ್ರದರ್ಶನ ಕಾರಣವೇ ಎಂದು ಪರಿಶೀಲಿಸಿದಾಗ, ವಾಸ್ತವ ಏನು ಎಂದು ತಿಳಿದುಬಂದಿದೆ. ಬೆಂಗಳೂರಿನ ಗ್ರಾಮೀಣ ಪ್ರದೇಶದ ಆನೇಕಲ್ ಸಮೀಪವಿರುವ ಹುಸ್ಕೂರು ಮದ್ದೂರಮ್ಮ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಬಾರಿ ಹುಸ್ಕೂರು ಜಾತ್ರೆಗೆ ದೊಡ್ಡನಾಗಮಂಗಲ, ರಾಯಸಂದ್ರ, ಲಕ್ಷ್ಮೀನಾರಾಯಣಪುರ, ಗಟ್ಟಹಳ್ಳಿ, ಕೊಡತಿ, ಸಂಜೀವನಗರದಿಂದ ರಥಗಳು ಬಂದಿದ್ದವು.
ಈ ಜಾತ್ರೆಯ ಇನ್ನೊಂದು ವಿಶೇಷವೆಂದರೆ ಯಾವ ಗ್ರಾಮದ ರಥ ಎಷ್ಟು ಎತ್ತರವಾಗಿದೆ. ಈ ಬಾರಿ ಗಟ್ಟಹಳ್ಳಿ ಗ್ರಾಮಸ್ಥರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೊಸ ರಥ ನಿರ್ಮಿಸಿರುವುದು ವಿಶೇಷ. ಇದು ಇಲ್ಲಿಯೂ ಪ್ರತಿಷ್ಠೆಯ ವಿಷಯವಾಗಿದೆ. ಆದ್ದರಿಂದ, ರಥಗಳನ್ನು ನಿರ್ಮಿಸುವ ಗ್ರಾಮಸ್ಥರು ಈ ‘ರಥಯಾತ್ರೆ’ಯನ್ನು ಪ್ರತಿ ವರ್ಷ ಸ್ಪರ್ಧೆಯಾಗಿ ನೋಡುವುದರಿಂದ ಜಾತ್ರೆಯ ಸಂಭ್ರಮ ಹೆಚ್ಚುತ್ತಿದೆ. ಈ ವರ್ಷ ಒಟ್ಟು ಆರು ರಥಗಳು ಭಾಗವಹಿಸಿದ್ದವು.
ಕುಸಿದು ಬಿದ್ದ ರಥ ಯಾವುದು ಗೊತ್ತೇ?
ಜಾತ್ರೆಗೆ ತರಲಾಗುತ್ತಿದ್ದ ದೊಡ್ಡನಾಗಮಂಗಲ ಗ್ರಾಮದ ರಥವು ಚಿಕ್ಕ ನಾಗಮಂಗಲದ ಬಳಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಮತ್ತೊಂದೆಡೆ, ದೇವಾಲಯದ ಬಳಿಯಿರುವ ರಾಯಸಂದ್ರ ಗ್ರಾಮದ ರಥವು ಜನರ ಮೇಲೆ ಬಿದ್ದಿದೆ. ಘಟನೆಯಲ್ಲಿ, ಭಕ್ತರು ಈ ತೇರಿನ ಕೆಳಗೆ ಸಿಲುಕಿಕೊಂಡರು ಮತ್ತು ಆಟೋ ಚಾಲಕ ರೋಹಿತ್ ಮತ್ತು ಜ್ಯೋತಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ತಮಿಳುನಾಡಿನ ಹೊಸೂರಿನ ರೋಹಿತ್ (26) ಮತ್ತು ಬೆಂಗಳೂರಿನ ಕೆಂಗೇರಿಯ ಜ್ಯೋತಿ (14) ಎಂದು ಗುರುತಿಸಲಾಗಿದ್ದು, ಲಕ್ಕಸಂದ್ರದ ರಾಕೇಶ್ ಮತ್ತು ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ವಿಶೇಷ ಎಂದರೆ, ದೊಡ್ಡನಾಗಮಂಗಲ ತೇರು ದುರಂತ ಸಂಭವಿಸಿ 12 ಗಂಟೆಯೊಳಗೆ ಮತ್ತೊಂದು ತೇರನ್ನು ಮರು ನಿರ್ಮಾಣ ಮಾಡಿ ಗ್ರಾಮ ದೇವತೆಯ ತೇರನ್ನು ಎಳೆಯುವ ಮೂಲಕ ಕಹಿ ಘಟನೆಯನ್ನು ದೂರ ಮಾಡಿಕೊಂಡಿದ್ದಾರೆ.
ಸೌಜನ್ಯ ಪರ ಪ್ಲೆಕಾರ್ಡ್ ಪ್ರದರ್ಶಿಸಿದ್ದು ಗಟ್ಟಹಳ್ಳಿ ರಥದಲ್ಲಿ :
ಸುವರ್ಣ ನ್ಯೂಸ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಜಾತ್ರೆಯಲ್ಲಿ ನಲಕ್ಕುರುಳಿದ ರಥದಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಫ್ಲೆಕಾರ್ಡ್ ಪ್ರದರ್ಶನ ಮಾಡಲಾಗಿಲ್ಲ. ಸೌಜನ್ಯ ಪರ ಪ್ಲೆಕಾರ್ಡ್ ಪ್ರದರ್ಶಿಸಿದ್ದು ಗಟ್ಟಹಳ್ಳಿ ರಥದಲ್ಲಿ. ಗಟ್ಟಹಳ್ಳಿ ರಥವು ಯಾವ ತೊಂದರೆಯೂ ಇಲ್ಲದೆ ದೇವಸ್ಥಾನ ತಲುಪಿದೆ. ಹಾಗಾಗಿ ಸೌಜನ್ಯ ಪರ ನ್ಯಾಯಕ್ಕಾಗಿ ಫಲಕ ಪ್ರದರ್ಶನ ಮಾಡಿದ ರಥಕ್ಕೂ ನೆಲಕ್ಕುರಿಳಿದ ಬೇರೆ ರಥಗಳಿಗೂ ಸಂಬಂಧವಿಲ್ಲ.
ಬಿದ್ದ ಕೆಲವೇ ಗಂಟೆಗಳಲ್ಲಿ ಮತ್ತೆ ರಥ ಮರು ನಿರ್ಮಿಸಿ ಮದ್ದೂರಮ್ಮ ಜಾತ್ರೆಗೆ ತಂದ ದೊಡ್ಡ ನಾಗಮಂಗಲ ಜನರು #PrideOfDoddaNagamangala https://t.co/HoQcCKiyHE pic.twitter.com/a92FYJlVSi
— Che_ಕೃಷ್ಣ❤️ (@ChekrishnaCk) March 24, 2025
ಇನ್ನು ಸುವರ್ಣ ನ್ಯೂಸ್ ಮಾಡಿರುವ ವರದಿಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿ (@ChekrishnaCk) ಚೇತನ್ ಕೃಷ್ಣ ಎಂಬ ಎಕ್ಸ್ ಬಳಕೆದಾರರು ವಿಡಿಯೋ ಪೋಸ್ಟ್ವೊಂದನ್ನು ಹಂಚಿಕೊಂಡು ಧರೆಗುರುಳಿದ ರಥಕ್ಕೂ, ಸೌಜನ್ಯ ಪರ ನ್ಯಾಯಕ್ಕೆ ಆಗ್ರಹಿಸಿದ ರಥಕ್ಕೂ ಸಂಬಂಧವಿಲ್ಲ, ಸುವರ್ಣ ನ್ಯೂನ್ ಈ ವಿಷಯದಲ್ಲಿ ಜನರನ್ನು ದಿಕ್ಕುತಪ್ಪಿಸಿ, ದೇವರ ಹೆಸರಿನಲ್ಲಿ ಜನರನ್ನು ಬೀತಿಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕೀವರ್ಡ್ ಬಳಸಿ ಮತ್ತಷ್ಟು ಸರ್ಚ್ ಮಾಡಿದಾಗ, ಟೆಂಪಲ್ ಕ್ರೀವ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. 30 ನಿಮಿಷದ ಈ ವಿಡಿಯೋದ 17 ನೇ ನಿಮಿಷದ ಅವದಿಯಲ್ಲಿ ಸೌಜನ್ಯ ಪರ ಪೋಸ್ಟ್ರ್ಳನ್ನು ಪ್ರದರ್ಶಿಸಿರುವುದನ್ನು ನೋಡಬಹುದು. ಗಟ್ಟಹಳ್ಳಿ ರಥ ಯಾವುದೇ ತೊಂದರೆ ಇಲ್ಲದೆ ಮೆರವಣಿಗೆಯನ್ನು ಕ್ಷೇಮವಾಗಿ ಮುಗಿಸಿದೆ.
ಅತಿಯಾದ ಮಳೆ ಮತ್ತು ಗಾಳಿಯೇ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ರಥಗಳು ಬೀಳಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಮತ್ತೊಂದು ವಿಷಯ ಎಂದರೆ 2024 ರಲ್ಲಿ, ರಾಯಸಂದ್ರ ಗ್ರಾಮದ ರಥವೂ ಉರುಳಿಬಿದ್ದಿತ್ತು. ಆದರೆ ಆಗ ಯಾವುದೇ ಸಾವಿಗೂ ನ್ಯಾಯವನ್ನು ಕೇಳಿ ಪೋಸ್ಟ್ರ್ ಪ್ರದರ್ಶನ ಮಾಡಲಾಗಿರಲಿಲ್ಲ.
ಹಾಗಾಗಿ ಸುವರ್ಣ ನ್ಯೂಸ್ ಇಂತಹ ಸುದ್ದಿಗಳ ಮೂಲಕ ದೇವರು , ಧರ್ಮ ಎಂಬ ವಿಚಾರಗಳನ್ನು ಮುನ್ನಲೆಗೆ ತಂದು ಜನರು ನ್ಯಾಯ ಕೇಳಿದರೆ ಈ ರೀತಿ ಅವಘಡಗಳು ಸಂಭವಿಸುತ್ತವೆ ಎಂದು ಆತಂಕ ಸೃಷ್ಟಿಸುವುದು ಜೊತೆಗೆ ಮೌಢ್ಯಗಳನ್ನು ಬಿತ್ತುವ ಹುನ್ನಾರ ಇರಬಹುದೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಸೌಜನ್ಯ ಪರ ಪೋಸ್ಟ್ರ್ ಪ್ರದರ್ಶಿದ ರಥಕ್ಕೂ, ನೆಲಕ್ಕೆ ಬಿದ್ದ ರಥಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
FACT CHECK | ಪುರೋಹಿತರ ಎರಡು ಗುಂಪುಗಳ ನಡುವೆ ನಡೆದ ಜಗಳದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ
ಇದನ್ನು ಓದಿರಿ : FACT CHECK | ಪುರೋಹಿತರ ಎರಡು ಗುಂಪುಗಳ ನಡುವೆ ನಡೆದ ಜಗಳದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

