FACT CHECK | ಮೋದಿ ಆಡಳಿತದಲ್ಲಿ ನಿರ್ಮಾಣಗೊಂಡ ಸೇತುವೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಮೋದಿ ಸರ್ಕಾರದಲ್ಲಿ ನಿರ್ಮಾಣಗೊಂಡಿರುವ ರಸ್ತೆ ಎಂಬ ಹೇಳಿಕೆಯೊಂದಿಗೆ ಶಿಥಿಲಗೊಂಡ ಸೇತುವೆಯ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ  ಭಾರತದ ಬಿಹಾರ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

‘‘ಮೋದಿ ಹೇಳಿದರು ನಾವು #SpaceTechnology ಬಳಸಿ ರಸ್ತೆ ಹಾಗೂ ಸೇತುವೆಗಳನ್ನು ನಿರ್ಮಾಣ ಮಾಡುತ್ತೇವೆಂದು. ಜನರಿಗೆ ಅವರ ಮಾತು ಸರಿಯಾಗಿ ಅರ್ಥವಾಗಿರಲಿಲ್ಲ. ಈ ಚಿತ್ರ ನೋಡಿ ಸ್ಪೇಸ್ ಅಂದರೆ ಏನೂ ಅಂತ ನೀವೇ ತಿಳಿದುಕೊಳ್ಳಿ.’’ ಎಂಬ  ಸುದರ್ಶನ್ ಜಯರಾಮು ಎಂಬ ಎಕ್ಸ್ ಬಳಕೆದಾರರು ಸೆಪ್ಟೆಂಬರ್ 19, 2024 ರಂದು ಈ ಫೋಟೋ ಅಪ್ಲೋಡ್ ಆಗಿದ್ದು. ಬರೆದುಕೊಂಡಿದ್ದಾರೆ.

ಇದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದನ್ನು  ನೀವು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 27, 2024 ರಂದು ಬಾಂಗ್ಲಾದೇಶದ Follow Medeya ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಚಿತ್ರವೊಂದು ಲಭ್ಯವಾಗಿದೆ.  ‘‘ಅಪರಿಚಿತ ರಸ್ತೆಗಳಲ್ಲಿ ಬೈಕ್ ಓಡಿಸುವಾಗ ಹೆಚ್ಚಿನ ಕಾಳಜಿ ವಹಿಸಿ. ಇದ್ದಕ್ಕಿದ್ದಂತೆ ಇಂತಹ ಸೇತುವೆ ಎದುರು ಬರಬಹುದು’’ ಎಂದು ಬೆಂಗಾಳಿ ಭಾಷೆಯಲ್ಲಿ ಶೀರ್ಷಿಕೆ ನೀಡಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ, ನಾವು ‘bangladesh Dilapidated bridge photo’ ಎಂದು ಬೆಂಗಾಳಿ ಭಾಷೆಯಲ್ಲಿ ಗೂಗಲ್​ನಲ್ಲಿ ಕೀವರ್ಡ್‌ ಸರ್ಚ್ ಮಾಡಿದೆವು. ಆಗ ಬಾಂಗ್ಲಾದೇಶದ ವೆಬ್‌ಸೈಟ್ mzamin ನಲ್ಲಿ ಇದಕ್ಕೆ ಸಂಬಂಧಿಸಿದ ವರದಿ ಲಭ್ಯವಾಗಿದೆ. 30 ಜೂನ್ 2024 ರಂದು ಈ ಲೇಖನ ಪ್ರಕಟವಾಗಿದ್ದು, ‘ಅಮತಾಲಿಯಲ್ಲಿ 19 ಅಪಾಯಕಾರಿ ಸೇತುವೆಗಳು, ಭೀತಿಯಲ್ಲಿ ಲಕ್ಷಾಂತರ ಜನರು’ ಎಂದು ಹೆಡ್ಡಿಂಗ್ ನೀಡಲಾಗಿದೆ. ಬಂಗಾಳಿ ಭಾಷೆಯಲ್ಲಿ ಬರೆದ ವರದಿಯ ಪ್ರಕಾರ, ವೈರಲ್ ಸೇತುವೆಯ ಚಿತ್ರವು ಬಾಂಗ್ಲಾದೇಶದ ಬರ್ಗುನಾ ಜಿಲ್ಲೆಯದ್ದಾಗಿದೆ.

ಇದರ ಜೊತೆಗೆ, ಬಾಂಗ್ಲಾದೇಶದ BTC ನ್ಯೂಸ್‌ನ ವೆಬ್‌ಸೈಟ್‌ನಲ್ಲಿ ಕೂಡ ಮತ್ತೊಂದು ವರದಿಯನ್ನು ನಾವು ಕಂಡುಕೊಂಡಿದ್ದೇವೆ. 1 ಜುಲೈ 2024 ರಂದು ಈ ಸುದ್ದು ಪ್ರಕಟವಾಗಿದ್ದು, ಈ ಸೇತುವೆ ಬರ್ಗುನಾ ಜಿಲ್ಲೆಯ ತೇಪುರ ಗ್ರಾಮದ ಬಳಿ ಇದೆ. ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಈ ಸೇತುವೆಯಲ್ಲಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ ಎಂದು ಬರೆಯಲಾಗಿದೆ. ಈ ಸೇತುವೆಯ ಕಾರಣದಿಂದಾಗಿ ಜೂನ್‌ನಲ್ಲಿ ಒಂದು ಬಸ್ ಕಾಲುವೆಗೆ ಬಿದ್ದು ದೊಡ್ಡ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಸುಮಾರು ಒಂಬತ್ತು ಜನರು ಸಾವನ್ನಪ್ಪಿದ್ದರು ಎಂದು ವರದಿಯಲ್ಲಿದೆ.

ಕಲರ್‌ಕಾಂತೋ ಅವರ ವೆಬ್‌ಸೈಟ್‌ನಲ್ಲಿ ಜುಲೈ 1, 2024 ರಂದು ಪ್ರಕಟವಾದ ವರದಿಯ ಪ್ರಕಾರ, ಈ ಸೇತುವೆಯನ್ನು 2004 ರಲ್ಲಿ ತೇಪುರ ಗ್ರಾಮದ ಬಳಿ ಎಲ್ಜಿಇಡಿ ನಿಧಿ ಸಹಾಯದಿಂದ ನಿರ್ಮಿಸಲಾಗಿದೆ. 2019 ರಲ್ಲಿ, ಈ ಸೇತುವೆಯ ಸ್ಥಿತಿಯು ಕಳಪೆ ಮಟ್ಟಕ್ಕೆ ತಲುಪಿ ಅನೇಕ ಬಿರುಕುಗಳು ಕಂಡುಬಂದವು. ಅಂದಿನಿಂದ ಈ ಸೇತುವೆಯ ಸ್ಥಿತಿ ಹದಗೆಟ್ಟಿದೆ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಬರ್ಗುನಾ ಜಿಲ್ಲೆಯ ತೇಪುರ ಗ್ರಾಮದ ಶಿಥಿಲಗೊಂಡ ಸೇತುವೆಯ ಫೋಟೋವನ್ನು ಭಾರತದ್ದು ಮತ್ತು ಮೋದಿ ಸರ್ಕಾರದಲ್ಲಿ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಿರುಪತಿಯ ಪ್ರಸಾದ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನ ತುಪ್ಪ ಪೂರೈಕೆ ಮಾಡಿದ್ದು ಅಮುಲ್ ಡೈರಿಯಲ್ಲ! ಮತ್ತ್ಯಾವುದು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights