FACT CHECK | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಬೆದರಿಕೆಗೆ ಹೆದರಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಕ್ಷಮೆ ಯಾಚಿಸಿದ್ರಾ?

ಅಕ್ಟೋಬರ್ 12 ರಂದು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಮುಂಬೈನಲ್ಲಿರುವ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಾಬಾ ಸಿದ್ದಿಕಿ ಹತ್ಯೆಯ ನಂತರ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈಗ ಕೆಲವು ಬಳಕೆದಾರರು ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ನಂತರ ಮುನಾವರ್ ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಕ್ಟೋಬರ್ 19, 2024 ರಂದು ಹಂಚಿಕೊಂಡು, ‘‘ಈತನಿಗೆ ಈಗ ಬುದ್ದಿ ಬಂದಿದೆ. ಪ್ರಾಣ ಭಯ ಶುರುವಾಗಿದೆ. ಈ ಭಯ ಯಾವತ್ತೂ ಇರಬೇಕು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ ಬಂದ ನಂತರ ಮುನ್ನಾವರ್ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಜೈ ಲಾರೆನ್ಸ್,’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿರುವುದನ್ನು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ, 13 ಆಗಸ್ಟ್ 2024 ರಂದು  ದೈನಿಕ್ ಜಾಗರಣ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ.

ದೈನಿಕ್ ಜಾಗರಣ್ ವರದಿಯ ಪ್ರಕಾರ, “ಬಿಗ್ ಬಾಸ್ ವಿಜೇತ ಮತ್ತು ಕಾಮಿಡಿಯನ್ ಮುನಾವರ್ ಫರುಕಿ ಅವರು ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಕೊಂಕಣ ಸಮುದಾಯದ ಮೇಲೆ ಕಾಮೆಂಟ್ ಮಾಡಿದ್ದಾರೆ ಮತ್ತು ನಿಂದನೀಯ ಭಾಷೆಯನ್ನು ಬಳಸಿದ್ದಾರೆ. ನಂತರ ಕೊಂಕಣ ಸಮುದಾಯವು ಮುನಾವರ್ ಅನ್ನು ವಿರೋಧಿಸಿದ ಪರಿಣಾಮ ಕ್ಷಮೆ ಕೇಳಿದ್ದಾರೆ,’’ ಎಂದು ಉಲ್ಲೇಖಿಸಲಾಗಿದೆ.

ಆಗಸ್ಟ್ 13, 2024 ರಂದು ಮಿಡ್ ಡೇ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ವಿಡಿಯೋವನ್ನೆ ಹೋಲುವ ಮತ್ತೊಂದು ವಿಡಿಯೋ ಕಂಡುಬಂದಿದೆ. “ಮುನಾವರ್ ಫಾರುಕಿ ಅವರು ತಮ್ಮ ಸ್ಟ್ಯಾಂಡ್-ಅಪ್ ಸೆಟ್‌ನಲ್ಲಿ ಕೊಂಕಣಿಗರ ಬಗ್ಗೆ ಅವಹೇಳನಕಾರಿ ಹಾಸ್ಯ ಮಾಡಿದ ನಂತರ ಕ್ಷಮೆಯಾಚಿಸಿದ್ದಾರೆ” ಎಂದು  ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಆಗಸ್ಟ್ 12, 2024 ರಂದು ಮುನಾವರ್ ಫಾರುಕಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಇದೇ ವಿವರಣೆ ಇರುವ ವಿಡಿಯೋವನ್ನು   ‘‘ಕೊಂಕಣಕ್ಕೆ ನನ್ನ ಪ್ರೀತಿ ಮತ್ತು ಕ್ಷಮೆ’’ ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಅವರು ಕೊಂಕಣ ಸಮುದಾಯದ ಬಗ್ಗೆ ಮಾತನಾಡುವ ನಿಂದನೀಯ ಭಾಷೆಗೆ ಕ್ಷಮೆಯಾಚಿಸುವುದನ್ನು ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮುನಾವರ್ ಫರುಕಿ ಕಾರ್ಯಕ್ರಮವೊಂದರಲ್ಲಿ ಕೊಂಕಣಿ ಸಮುದಾಯದ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ ಕಾರಣಕ್ಕೆ ಆಗಸ್ಟ್ 2024 ರಲ್ಲಿ ಕ್ಷಮೆ ಕೇಳಿರುವ ಹಳೆಯ ವಿಡಿಯೋವನ್ನು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ನಂತರ ಮುನಾವರ್ ಕ್ಷಮೆ ಕೇಳಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಲಾರೆನ್ಸ್ ಬಿಷ್ಣೋಯ್‌ಗೆ ಎಚ್ಚರಿಕೆ ನೀಡಿದ್ರಾ ಸಲ್ಮಾನ್ ಖಾನ್ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights