ಸತ್ಯ ಹೇಳಿದ್ದೇನೆ; ಅದಕ್ಕಾಗಿ ಕ್ಷಮೆ ಕೇಳುವುದಿಲ್ಲ; ಶಿಕ್ಷೆ ಸ್ವೀಕರಿಸುತ್ತೇವೆ: ಪ್ರಶಾಂತ್ ಭೂಷಣ್‌

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ, ಚಿಂತಕ ಪ್ರಶಾಂತ್ ಭೂಷಣ್ ಅವರನ್ನು ತಪ್ಪಿತಸ್ತ ಎಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ನ ಶಿಕ್ಷೆ ಘೋಷಿಸುವ ವಿಚಾರಣೆ ಮುಂದೂಡಲು ಭೂಷಣ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಈ ಸಂದರ್ಭದಲ್ಲಿ ತನ್ನ ಹೇಳಿಕೆ ದಾಖಲಿಸಿರುವ ಪ್ರಶಾಂತ್ ಭೂಷಣ್, ನಾನು ಕ್ಷಮೆ ಕೇಳುವುದಿಲ್ಲ, ಶಿಕ್ಷೆ ಸ್ವೀಕರಿಸುತ್ತೇನೆ ಎಂದು ಘೊಷಿಸಿದ್ದಾರೆ.

ಮೂರು ದಶಕಗಳಿಂದ ಯಾವ ಘನ ನ್ಯಾಯಾಲಯದ ಗೌರವವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದೆನೊ ಅದೇ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ನನ್ನನ್ನು ತಪ್ಪಿತಸ್ಥನೆಂದು ಘೋಷಿಸಿದೆ. “ನನ್ನನ್ನು ನ್ಯಾಯಾಲಯವು ತಪ್ಪಿತಸ್ತ ಎಂದು ತೀರ್ಮಾನಿಸಿರುವ ಬಗ್ಗೆ ನನಗೆ ನೋವಿದೆ. ನನ್ನನ್ನು ನ್ಯಾಯಾಲಯ ತಪ್ಪಾಗಿ ಅರ್ಥಮಾಡಿಕೊಂಡಿರುವುದಕ್ಕೆ ನನಗೆ ಬೇಸರವಿದೆ”ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.

ನನ್ನ ಉದ್ದೇಶವನ್ನು ಅರಿಯದೇ, ಸ್ವಷ್ಟ ವಿಚಾರಣೆ ನಡೆಸದೆ ನ್ಯಾಯಾಲಯವು ಈ ತೀರ್ಮಾನಕ್ಕೆ ಬಂದು ತಲುಪಿದ ಬಗ್ಗೆ ನನಗೆ ಆಘಾತವಾಗಿದೆ. ನನ್ನ ಟ್ವೀಟ್‌ಗಳು ನಾಗರಿಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುವ ಉತ್ತಮ ಪ್ರಯತ್ನದ ಭಾಗವಾಗಿವೆ. ಇತಿಹಾಸದ ಈ ಹಂತದಲ್ಲಿ ನಾನು ಮಾತನಾಡದಿದ್ದರೆ ನಾನು ನನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದ್ದೆ. ನ್ಯಾಯಾಲಯವು ವಿಧಿಸಬಹುದಾದ ಯಾವುದೇ ದಂಡವನ್ನು ನಾನು ಸಲ್ಲಿಸುತ್ತೇನೆ. ಕ್ಷಮೆಯಾಚಿಸುವುದಿಲ್ಲ ಎಂದು ಭೂಷಣ್ ತಿಳಿಸಿದ್ದಾರೆ.

“ನಾನು ಯಾವುದೇ ಕ್ಷಮೆಯನ್ನು ಕೋರುವುದಿಲ್ಲ. ಯಾವ ಮನವಿ ಸಹ ಮಾಡುವುದಿಲ್ಲ. ನ್ಯಾಯಾಲಯವು ನೀಡುವ ಯಾವುದೇ ಶಿಕ್ಷೆಯನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ” ಎಂದು ಮಹತಾತ್ಮ ಗಾಂಧಿಯನ್ನು ಉಲ್ಲೇಖಿಸಿ ಭೂಷಣ್ ಹೇಳಿದ್ದಾರೆ.

ಸಾಂವಿಧಾನಿಕ ಕ್ರಮವನ್ನು ಕಾಪಾಡಲು ಯಾವುದೇ ಪ್ರಜಾಪ್ರಭುತ್ವದಲ್ಲಿ ಮುಕ್ತ ಟೀಕೆ ಅಗತ್ಯ ಎಂದು ನಾನು ನಂಬುತ್ತೇನೆ. “ಸಂವಿಧಾನದ ರಕ್ಷಣೆ ಎನ್ನುವುದು ವ್ಯಕ್ತಿಗತವಾಗಿ ಹಾಗೂ ವೃತ್ತಿಯಿಂದ ಬರಬೇಕು. ಈ ದಿಸೆಯಲ್ಲಿ ಯಾವುದು ನನ್ನ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆಯೋ ಅದರ ಒಂದು ಸಣ್ಣ ಪ್ರಯತ್ನ ನನ್ನ ಟ್ವೀಟ್‌ಗಳಾಗಿವೆ” ಎಂದು ಅವರು ಹೇಳಿದ್ದಾರೆ.

ಇಂದು ಪ್ರಶಾಂತ್ ಭೂಷಣ್‌ ಪರ ಹಿರಿಯ ವಕೀಲ ರಾಜೀವ್ ಧವನ್‌ ವಾದ ಮಂಡನೆ ಮಾಡಿದ್ದು ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ಸಮಯಾವಕಾಶವಿರುವ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು.

ನೀವು ಮರುಪರಿಶೀಲನಾ ಅರ್ಜಿಯನ್ನು ಆಗಸ್ಟ್‌ 17ರಂದೇ ಸಲ್ಲಿಸಲಾಗುವುದು ಎಂದು ಹೇಳಿದ್ದಿರಿ. ಸಲ್ಲಿಸಿಲ್ಲವೇ, ಇಷ್ಟರಲ್ಲಾಗಲೇ ಸಲ್ಲಿಸಬೇಕಿತ್ತು ಎಂಬ ನ್ಯಾಯಮೂರ್ತಿ ಗವಾಯಿಯವರ ಪ್ರಶ್ನೆಗೆ ಭೂಷಣ್ ಪರ ಮತ್ತೊಬ್ಬ ವಕೀಲ ದುಷ್ಯಂತ್ ದವೆ ಉತ್ತರಿಸಿ, ಅಂದೇ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿರಲಿಲ್ಲ. ಶಾಸನಾತ್ಮಕವಾಗಿ 30 ದಿನಗಳ ಅವಕಾಶವಿದೆ ಎಂದಷ್ಟೆ ಹೇಳಿದ್ದೆವು ಎಂದಿದ್ದಾರೆ.

ಇದಕ್ಕೆ ಪೀಠದಲ್ಲಿರುವ ಒಬ್ಬರು ನ್ಯಾಯಮೂರ್ತಿಗಳು ನಿವೃತ್ತಿಯಾದ ನಂತರ ಅರ್ಜಿ ಸಲ್ಲಿಸುತ್ತಿರೋ ಎಂಬದು ಗವಾಯಿ ಕೇಳಿದ್ದಾರೆ. ಮರುಪರಿಶೀಲನಾ ಅರ್ಜಿಯನ್ನು 30 ದಿನದ ಒಳಗೆ ಸಲ್ಲಿಸಬಹುದಾಗಿದೆ. ನ್ಯಾ.ಮಿಶ್ರಾ ಅವರು ನಿವೃತ್ತಿಯಾಗುವವರೆಗೆ ಅರ್ಜಿ ಸಲ್ಲಿಕೆಯಾಗುವುದಿಲ್ಲ ಎನ್ನುವ ಅಭಿಪ್ರಾಯ ಹೊಂದುವುದು ಬೇಡ ಎಂದು ದವೆ ಉತ್ತರಿಸಿದ್ದಾರೆ.

ನ್ಯಾ.ಮಿಶ್ರಾರವರು ವಿಚಾರಣೆಯನ್ನು ಮುಂದೂಡಲು ನಾವು ಸಮ್ಮತಿಸುವುದಿಲ್ಲ ಎಂದಾಗ ನಾವು ಮುಂದೂಡಿಕೆ ಅರ್ಜಿ ಸಲ್ಲಿಸಿದ್ದೆವು. ನೀವು ತಿರಸ್ಕರಿಸಬಹುದು. ನಾನು ನಿಮ್ಮ ನಿರ್ಧಾರಕ್ಕೆ ತಲೆಬಾಗುತ್ತೇನೆ. ಕಾನೂನನ್ನು ಮಾತ್ರವೇ ನಾನು ಹೇಳಬಹುದು ಎಂದು ದವೆ ತಿಳಿಸಿದ್ದಾರೆ.

ನ್ಯಾಯಾಂಗ ಪರಿಶೀಲನೆಯಲ್ಲಿ ಮೇಲ್ಮನವಿ ಸರಿಯಾಗಿದೆ ಮತ್ತು ಶಿಕ್ಷೆ ಘೋಷಿಸುವುದನ್ನು ಮುಂದೂಡಬಹುದು. ಶಿಕ್ಷೆ ಮುಂದೂಡಲ್ಪಟ್ಟರೆ ಸ್ವರ್ಗವೇನು ಬಿದ್ದೋಗುವುದಿಲ್ಲ ಎಂದು ದವೆ ಹೇಳೀದ್ದಾರೆ.

ಕೊನೆಗೆ ನ್ಯಾಯಮೂರ್ತಿಗಳು ವಿಚಾರಣೆ ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಎಂದಿದ್ದಾರೆ. ಶಿಕ್ಷೆ ಘೋಷಿಸುವ ವಾದ-ವಿವಾದ ಮುಂದುವರೆಯುತ್ತಿದೆ.


ಇದನ್ನೂ ಓದಿ:  ಪ್ರಶಾಂತ್ ಭೂಷಣ್ ಅಪರಾಧಿ ಎಂದ ಸುಪ್ರೀಂ: ಪ್ರಜಾಪ್ರಭುತ್ವದ ಕರಾಳದಿನ ಎಂದ ರಾಮಚಂದ್ರ ಗುಹಾ!


ಇದನ್ನೂ ಓದಿ: ಒಂದು ಟ್ವೀಟ್‌ಗಷ್ಟೇ ಕ್ಷಮೆಯಾಚಿಸಿದ ಪ್ರಶಾಂತ್ ಭೂಷಣ್‌; ಲೋಯಾ ಸಾವು, ಸಿಎಎ ಟ್ವೀಟ್‌ ಸಮರ್ಥನೆ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights