FACT CHECK | ಹಿಂದೂಗಳ ಮತಾಂತರಕ್ಕೆ ಮುಸ್ಲಿಮರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಹಿಂದೂಗಳನ್ನು ಮತಾಂತರ ಮಾಡುವ ಹೇಳಿಕೆಯಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಹಿಂದೂಗಳ ಮನೆ ಬಾಗಿಲಿಗೆ ಹೋಗುತ್ತೇವೆ, ಮತ್ತು ಹಿಂದೂಗಳನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಮಾಡುತ್ತೇವೆ ಎಂದು ಮುಸಲ್ಮಾನ ವಿದ್ವಾಂಸನೊಬ್ಬ ಹೇಳಿಕೆ ನೀಡಿದ್ದಾನೆ. ಜಾಗೃತರಾಗಿ ಹಿಂದೂಗಳೆ ಈಗಾಲಾದರೂ ಎಚ್ಚತ್ತುಕೊಳ್ಳಿ, ಚುನಾವಣೆಯಲ್ಲಿ ನೀವು ಯಾರಿಗೆ ಮತ ಹಾಕಬೇಕು ಎಂಬುದನ್ನು ಈಗಾಲಾದರು ಸರಿಯಾಗಿ ನಿರ್ಧರಿಸಿ’ ಎಂದು ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾತನಾಡುತ್ತಿದ್ದು ಆತನ ಹಿಂಬದಿಯಲ್ಲಿ ಇರುವವರೆಲ್ಲ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆ ನಿಜವೇ ಎಂದು ಪರಿಶೀಲಿಸೋಣ.

https://twitter.com/_VK86/status/1785349195760803969

ಫ್ಯಾಕ್ಟ್‌ಚೆಕ್‌ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್  ಮಾಡಿದಾಗ, ಮೂಲ ವಿಡಿಯೋ ಲಭ್ಯವಾಗಿದೆ.

ಮೂಲ ವಿಡಿಯೋವನ್ನು ಎಕ್ಸ್‌ ಖಾತೆಯ ಬಳಕೆದಾರರೊಬ್ಬರು 6 ಮೇ 2021ರಂದು ಹಂಚಿಕೊಂಡಿದ್ದರು ಇದರಲ್ಲಿ ವಿಡಿಯೋದ ಪೂರ್ಣ ಆವೃತ್ತಿಯನ್ನು ಕಾಣಬಹುದಾಗಿದೆ. ವೈರಲ್‌ ವಿಡಿಯೋದಲ್ಲಿರುವ ಅದೇ ವ್ಯಕ್ತಿ ಮೈಕ್ರೋಫೋನ್ ಹಿಡಿದುಕೊಂಡು ಬಾಂಗ್ಲಾದೇಶದ ದಿನಜ್‌ಪುರದಿಂದ ಮಾತನಾಡುತ್ತಿದ್ದೇನೆ ಎಂದು ಹೇಳುವುದನ್ನು ಕಾಣಬಹುದು. ಅಲ್ಲಿಗೆ ಈ ವಿಡಿಯೋ ಭಾರತದ್ದೂ ಅಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯ ಸಂದರ್ಭದ ಭಾಷಣದ ವಿಡಿಯೋ ಕೂಡ ಇದಲ್ಲ ಎಂಬುದು ಖಚಿತವಾಗಿದೆ.

ಇನ್ನು ಈ ವಿಡಿಯೋದಲ್ಲಿನ ಮಾಹಿತಿಯನ್ನು ಆಧಾರಿಸಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಈ ವ್ಯಕ್ತಿಯ ಯೂಟ್ಯೂಬ್‌ ಚಾನಲ್‌ ಮತ್ತು ಫೇಸ್‌ಬುಕ್‌ ಪೇಜ್‌ ಲಭ್ಯವಾಗಿದೆ. ಅವುಗಳಿಂದ ಈತನ ಹೆಸರು ‘ಸೈಯದ್ ಇರ್ಷಾದ್ ಅಹ್ಮದ್ ಅಲ್ ಬುಖಾರಿ ಎಂದು ತಿಳಿದು ಬಂದಿದ್ದು, ಈತ ಬಾಂಗ್ಲಾದೇಶದ ದಿನಜ್‌ಪುರದವನಾಗಿದ್ದು, ಅಂತರರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸಕನಾಗಿದ್ದಾನೆ ಎಂಬುದು ತಿಳಿದು ಬಂದಿದೆ. ಇವನ ಯೂಟ್ಯೂಬ್ ಚಾನಲ್‌ನಲ್ಲಿ ವೈರಲ್‌ ಭಾಷಣದ  ವಿಡಿಯೋವನ್ನು 30 ಏಪ್ರಿಲ್‌ 2021 ರಂದು ಹಂಚಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಈತ ಎಲ್ಲಿಯೂ ಕಾಂಗ್ರೆಸ್‌ ಎಂಬ ಪದವನ್ನೇ ಬಳಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ದಿನಜ್‌ಪುರದ ‘ಸೈಯದ್ ಇರ್ಷಾದ್ ಅಹ್ಮದ್ ಅಲ್ ಬುಖಾರಿ ಎಂಬ ವ್ಯಕ್ತಿಯು 2021ರಲ್ಲಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಈ ವಿಡಿಯೋಗೂ ಭಾರತಕ್ಕೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕ್ರಿಶ್ಚಿಯನ್‌ ಅಧಿಕಾರಿಯನ್ನು ಕುಕ್ಕೆ ದೇವಸ್ಥಾನದ ಮುಖ್ಯ ಅಧಿಕಾರಿಯಾಗಿ ಕಾಂಗ್ರೆಸ್‌ ಸರ್ಕಾರ ನೇಮಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights