FACT CHECK | 7 ಲಕ್ಷ ಅಮೆರಿಕನ್ ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ಮತಾಂತರಗೊಂಡರೇ?

‘ಹರೇ ರಾಮ ಹರೇ ಕೃಷ್ಣ’ ಎಂದು ಸಾವಿರಾರು ಜನರು ಘೋಷಣೆ ಕೂಗುತ್ತಿರುವ ರ್‍ಯಾಲಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಅಮೆರಿಕಾದಲ್ಲಿ 7 ಲಕ್ಷ ಕ್ರಿಶ್ಚಿಯನ್ನರು ಏಕಕಾಲದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.

‘‘ಅಮೇರಿಕಾದಲ್ಲಿ ಏಳು ಲಕ್ಷ ಜನ ಕ್ರೈಸ್ತ ಮತವನ್ನು ತ್ಯಜಿಸಿ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮಕ್ಕೆ ಸೇರ್ಪಡೆಯಾದರು. ಒಂದೇ ಭೂಮಿ, ಒಂದೇ ಧರ್ಮ ಸಕಲ ಜೀವ ರಾಶಿಗಳ ಸಂತುಷ್ಟಕ್ಕೆ  ಅದುವೇ ಸನಾತನ ಧರ್ಮ. ಓಂ ನಮೋ ನಾರಾಯಣಾಯ’’ ಎಂದು ಬರೆದುಕೊಂಡು ಫೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್‌ಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ, 7 ಲಕ್ಷ ಕ್ರಿಶ್ಚಿಯನ್ ಅಮೆರಿಕನ್ನರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದಾದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುತ್ತಿತ್ತು. ಆದರೆ, ಅಂತಹ ಯಾವುದೇ ಸುದ್ದಿ ಲಭ್ಯವಾಗಿಲ್ಲ.

ನಂತರ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 22, 2024 ರಂದು ಅಪ್‌ಲೋಡ್ Krishna of Vrindavan ಎಂಬ ಯೂಟ್ಯೂಬ್ ಚಾನೆಲ್​ನಲ್ಲಿ ಇದೇ ರೀತಿ ಕಾಣುವ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋಗೆ ‘‘ಲಂಡನ್ ರಥ ಯಾತ್ರೆ 2024 #ಲಂಡನ್ #ಹರೇಕೃಷ್ಣ #ಫೆಸ್ಟಿವಲ್ #ISKCONLONDON #BRINDAVAN #PURI’’ ಎಂದು ಶೀರ್ಷಿಕೆ ನೀಡಲಾಗಿದೆ.

ರ್‍ಯಾಲಿಯಲ್ಲಿ ಜನರು ಸಂಗೀತ- ವಾದ್ಯಗಳನ್ನು ಬಾರಿಸುತ್ತಾ ಹಾಡುಗಳನ್ನು ಹಾಡುತ್ತಾ ಸಾಗುತ್ತಿರುವುದನ್ನು ಕಾಣಬಹುದು. ಈ ಮಾಹಿತಿಯ ಆಧಾರದ ಮೇಲೆ ನಾವು ಕೀವರ್ಡ್ ಹುಡುಕಾಟವನ್ನು ಮಾಡಿದ್ದೇವೆ. ಆಗ ಯೂಟ್ಯೂಬ್​ನಲ್ಲಿ ‘‘ಲಂಡನ್ ರಥ ಯಾತ್ರೆ 2023’’ ಎಂಬ ಶೀರ್ಷಿಕೆಯೊಂದಿಗೆ ಜುಲೈ 31, 2023 ರಂದು ಅಪ್‌ಲೋಡ್ ಮಾಡಲಾದ ವೀಡಿಯೊ ಸಿಕ್ಕಿದೆ.

ಈ ವೀಡಿಯೊದಲ್ಲಿ, ಜನರು ಹಾಡುಗಳನ್ನು ಹಾಡುತ್ತಾ, ವಾದ್ಯಗಳನ್ನು ಬಾರಿಸುತ್ತಾ ಮತ್ತು ಘೋಷಣೆಗಳನ್ನು ಕೂಗುತ್ತಾ ರ್ಯಾಲಿಯಲ್ಲಿ ಭಾಗವಹಿಸುವುದನ್ನು ಕಾಣಬಹುದು. ಈ ಯೂಟ್ಯೂಬ್ ವೀಡಿಯೊದ ಕೀಫ್ರೇಮ್‌ಗಳನ್ನು ಪರಿಶೀಲಿಸಿದ ನಂತರ, ವೈರಲ್ ವೀಡಿಯೊವನ್ನು ಅದೇ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಎರಡು ವೀಡಿಯೊಗಳಲ್ಲಿನ ಕಟ್ಟಡಗಳ ಹೋಲಿಕೆಯನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಈ ಯೂಟ್ಯೂಬ್ ವಿಡಿಯೋದ 37:59 ಟೈಮ್‌ಸ್ಟ್ಯಾಂಪ್‌ನಲ್ಲಿ ನಾವು ಚೌಕಾಕಾರದ ರಥವನ್ನು ಕಾಣಬಹುದು. ವೈರಲ್ ವೀಡಿಯೋದಲ್ಲಿಯೂ ಇದೇ ರಥ ಕಾಣಿಸುತ್ತಿದೆ. ಎರಡೂ ವೀಡಿಯೊಗಳಿಂದ ಕೀಫ್ರೇಮ್‌ಗಳ ಒಂದೇ ರೀತಿಯ ಫೋಟೋವನ್ನು ಕೆಳಗೆ ನೋಡಬಹುದು.

ಕಳೆದ ಜುಲೈನಲ್ಲಿ ನಡೆದ ಲಂಡನ್ ರಥ ಯಾತ್ರೆ 2024 ರ ವೀಡಿಯೊ ಕೂಡ ಯೂಟ್ಯೂಬ್​ನಲ್ಲಿ ಲರ್ಭಯವಾಗಿದೆ.  2023, 2022 ಮತ್ತು 2013 ರಲ್ಲಿ UK ನಲ್ಲಿ ಇದೇ ರೀತಿಯ ರಥ ಯಾತ್ರೆ ರ್ಯಾಲಿಗಳನ್ನು ತೋರಿಸುವ ಯೂಟ್ಯೂಬ್ ವಿಡಿಯೋಗಳು ಲಭ್ಯವಾಗಿವೆ. ಇಸ್ಕಾನ್ ಪ್ರತಿ ವರ್ಷ ಲಂಡನ್ ರಥಯಾತ್ರೆಯನ್ನು ಆಯೋಜಿಸುತ್ತದೆ. ಈ ವೈರಲ್ ವಿಡಿಯೋ ಲಂಡನ್‌ನಲ್ಲಿ ಇಸ್ಕಾನ್ ಆಯೋಜಿಸಿದ್ದ ರಥಯಾತ್ರೆ ಉತ್ಸವಕ್ಕೆ ಸಂಬಂಧಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 7 ಲಕ್ಷ ಅಮೆರಿಕ ಕ್ರಿಶ್ಚಿಯನ್ನರು  ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಯುಕೆಯ ವಾರ್ಷಿಕ ರಥಯಾತ್ರೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾ ಹಿಂದೂಗಳನ್ನು ಉಳಿಸಿ ಎಂದು ಮಕ್ಕಳು ಪೋಸ್ಟರ್ ಹಿಡಿದಿರುವ ಈ ಫೋಟೋ ನಿಜವಾದ ಚಿತ್ರವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights