ಪಾರಿಜಾತಾ ಬಳಗದಿಂದ ‘ರೀಥಿಂಕಿಂಗ್’ ರಂಗಭೂಮಿ ಅಭಿಯಾನ

ರಂಗಭೂಮಿ ತನ್ನ ಮೂಲ ಗುಣದಂತೆ ನಿಂತ ನೀರಾಗಲು ಬಯಸುವುದಿಲ್ಲ. ಅದು ಸದಾ ಒಂದಿಲ್ಲೊಂದು  ಬದಲಾವಣೆಯ ಪರಿವರ್ತನೆಯಲ್ಲಿ ತೊಡಗಿಕೊಂಡು ಹರಿಯುವ ನದಿಯ ಗುಣವನ್ನು ಹೊಂದಿದೆ. ಕೊರೊನಾ ಸಾಂಕ್ರಾಮಿಕದಿಂದ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ಬಿದ್ದಂತೆ ರಂಗಭೂಮಿ ಕ್ಷೇತ್ರವು ತತ್ತಿರಿಸಿತು. ಆರೇಳು ತಿಂಗಳುಗಳ ಕಾಲ ಚಟುವಟಿಕೆಗಳು ಸ್ಥಗಿತಗೊಂಡವು.

ಈ ಸಮಯದಲ್ಲಿ ರಂಗಭೂಮಿಯ ಮೂಲಕ ಹೊಸದೊಂದನ್ನು ಹೇಳಲು ತವಕಿಸುವ ಸೃಜನಶೀಲ ಕಲಾವಿದರು ಮತ್ತು ರಂಗಭೂಮಿಯೇ ತಮ್ಮ ಜೀವನ ಎಂದು ಬದುಕು ಕಟ್ಟಿಕೊಳ್ಳಲು ಹೊರಟಿದ್ದವರ ಕಥೆ ಏನು? ಕೊರೊನಾ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವ ರಂಗಕರ್ಮಿಗಳ ಮುಂದಿನ ಜೀವನ ಹೇಗೆ ? ರಂಗಭೂಮಿಯನ್ನು ಕಲಿಯುವ ಮತ್ತು ಕಲಿಸುವ ಬಗೆಯಾದರು ಹೇಗೆ? ರಂಗಭೂಮಿಯನ್ನು ಹೊಸ ರೀತಿಯಾಗಿ ಜನಸಮುದಾಯದ ಮಧ್ಯೆ ತರುವುದು ಹೇಗೆ ಎಂಬ ಹತ್ತು ಹಲವು ಹೊಸ ಚಿಂತನೆಗಳ ಮೂಲಕ ರಂಗಭೂಮಿಯನ್ನು ಮತ್ತೆ ಮುನ್ನಲೆಗೆ ತರಬೇಕು ಎಂಬ ಆಶಯದಲ್ಲಿ ‘ಪಾರಿಜಾತ‘ ಯುವಬಳಗವು ‘ಥೀಯೇಟರ್ ರೀಥೀಂಕಿಂಗ್’ ಎಂಬ ಪರಿಕಲ್ಪನೆಯ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಕೊರೊನಾ ಸಮಯದಲ್ಲಿ ರಂಗಭೂಮಿಯನ್ನು ಪ್ರತಿ ದಿನ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದ ನಿರ್ದೇಶಕರು, ನಟರು, ತಂತ್ರಜ್ಞರು ಒಟ್ಟಾರೆ ರಂಗತಂಡಗಳು ಎಲ್ಲರು ಸಹ ಹೈರಾಣಾಗಿ ಹೋದರು. ಇಂತಹ ಸಂಕಷ್ಟದ ಸಮಯದಲ್ಲಿ ರಂಗಭೂಮಿಯ ಜೊತೆಗೆ ನಿಲ್ಲಬೇಕಿದ್ದ ಸರ್ಕಾರ ತನ್ನ ಸಂಸ್ಕೃತಿ ಇಲಾಖೆ ಮತ್ತು ನಾಟಕ ಅಕಾಡೆಮಿ ಮೂಲಕ ಕಲಾವಿದರನ್ನು ಪಟ್ಟಿ ಮಾಡಿ 6 ತಿಂಗಳ ನಷ್ಟಕ್ಕೆ ತಲಾ 2000 ರೂ ಕೊಡುವ ಭರವಸೆ ನೀಡಿ ಕೆಲವರಿಗಷ್ಟೇ ನೀಡಿ ತನ್ನ ಬೇಜಾವಾಬ್ದಾರಿಯನ್ನು ತೋರಿತು.

ಯೋಚಿಸುವುದು ದಿನವೂ ಇರುತ್ತದೆ. ಆದರೆ ಇಂದಿನ ಅಸಹನೆ, ಸಿನಿಕತನಗಳ ನಡುವೆ ಕಳೆದುಕೊಳ್ಳುತ್ತಿರುವ ಸಾಂಸ್ಕೃತಿಕ ಪ್ರಜ್ಞೆಯನ್ನು ಮತ್ತೊಮ್ಮೆ ಮರುಪರಿಶೀಲಿಸುವ ರೀಥಿಂಕ್ ಇಂದಿನ ಅಗತ್ಯವಾಗಿದೆ. – ಮಹದೇವ ಹಡಪದ, ರಂಗನಿರ್ದೇಶಕರು.

ಕೊರೊನಾ ಪೆಟ್ಟಿನಿಂದ ಕಳೆದುಕೊಂಡ ಉತ್ಸಾಹವನ್ನು ರಂಗಭೂಮಿ ಮತ್ತೆ ಮುನ್ನೆಲೆಗೆ ತರಬೇಕಿದೆ. ಈಗಾಗಲೇ ಇರುವ ಸಿದ್ಧ ಮಾದರಿಯ ರಂಗಭೂಮಿಯ ಚಟುವಟಿಕೆಗಳಲ್ಲಿ ಹಲವು ತೊಡಕುಗಳಿವೆ. ಅವುಗಳನ್ನೇ ಇಟ್ಟಕೊಂಡು ಮತ್ತೆ ಶುರುಮಾಡುವುದು ಏಕತಾನತೆಯನ್ನು ಸೃಷ್ಟಿಸುತ್ತದೆ ಹೊರತು ಮತ್ತೇನು ಪ್ರಯೋಜನವಾಗಲಾರದು. ಜಗತ್ತೇ ಆನ್‍ಲೈನ್ ಹಿಂದೆ ಓಡುತ್ತಿರುವಾಗ ಆಫ್‌ಲೈನ್ ರಂಗಭೂಮಿಯ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ರಂಗಭೂಮಿಯಲ್ಲಿ ಹೊಸ ಬದಲಾವಣೆ, ಮರುಹಟ್ಟು ಹೇಗಿರಬೇಕೆಂಬ ಚಿಂತನೆಗಳಾಗಬೇಕಿದೆ. ರಂಗಭೂಮಿಯ ಹಿರಿಕಿರಿಯಿರೆಲ್ಲರೂ ಸೇರಿ ಈ ಚಿಂತನೆ ನಡೆಸಬೇಕೆಂಬುದು ಪಾರಿಜಾತ ಬಳಗದ ಅಭಿಮತವಾಗಿದೆ.

ನಾವು ಈಗ ಒಳಗೂ ಹೊರಗೂ ವಿಚಿತ್ರ ಬಗೆಯ ಬರ ಭಯ ರೋಗದ ಕಾಲವನ್ನು ಅನುಭವಿಸುತ್ತಿದ್ದೇನೆ. ಇದನ್ನು ನಾವು ಕಾಲದ ಎಚ್ಚರಿಕೆ ಅಂತಲೇ ಭಾವಿಸಿ, ನಮಗೆ ಕಾಲವು ನೀಡಿರುವ ಪಾಠಗಳನ್ನು ಸರಿಯಾಗಿ ಗ್ರಹಿಸಿ ನಮ್ಮ ಮುಂದಿನ ಸಾಂಸ್ಕೃತಿಕ ಮಾದರಿಗಳ ಕುರಿತು ‘ರೀ-ಥಿಂಕ್’ ಮಾಡಲೇಬೇಕಿದೆ. ಇದು ಸಾಂಸ್ಕೃತಿಕ ಸಮುದಾಯ – ಜನ ಸಮುದಾಯ- ಸರಕಾರ ಎಲ್ಲರೂ ಕೂಡಿ ಮಾಡಬೇಕಾದ ಕೆಲಸ. – ಲಕ್ಷ್ಮಣ್ ಕೆ ಪಿ, ಯುವ ರಂಗಕರ್ಮಿ.

ಮುಖ್ಯವಾಗಿ ಪರಿಜಾತ ಬಳಗ ಸದ್ಯಕ್ಕೆ ಈ ಕೆಳಗಿನ ಐದು ಪ್ರಮುಖ ಚಿಂತನೆಗಳನ್ನು ಬೇಡಿಕೆಯ ರೂಪದಲ್ಲಿ ಮುಂದಿಟ್ಟಿದೆ.

  1. ಕರ್ನಾಟಕದ ಎಲ್ಲ ಮುಖ್ಯ ಸಾಂಸ್ಕೃತಿಕ ಸಂಸ್ಥೆಗಳು, ರಂಗಶಾಲೆಗಳು, ರೆಪರ್ಟರಿಗಳು ತಮ್ಮ ಪಠ್ಯಕ್ರಮ ಮತ್ತು ಕೆಲಸದ ರೂಪುರೇಷೆಗಳನ್ನು ರೀಥಿಂಕ್ ಮಾಡಬೇಕು.
  2. ಅಲ್ಲಿಯ ತನಕ ರಂಗಶಾಲೆಗಳನ್ನು ತೆರೆಯಬಾರದು.
  3. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಅನುದಾನದ ನೀತಿಗಳ ಕುರಿತು ರೀಥಿಂಕ್‌ ಮಾಡಬೇಕು.
  4. ಹೊಸ ರಂಗಮಂದಿರಗಳನ್ನು ಕಟ್ಟುವ ಮೊದಲು ಈಗಿರುವ ಜಿಲ್ಲಾ ಮತ್ತು ತಾಲ್ಲೂಕು ರಂಗಮಂದಿರಗಳ ಸಾಂಸ್ಕೃತಿಕ ಜೀವಂತಿಕೆಯ ಬಗ್ಗೆ ರೀಥಿಂಕ್ ಮಾಡಬೇಕು.
  5. ನಗರ ಕೇಂದ್ರಿತ ಸಾಂಸ್ಕೃತಿಕ ಯಜಮಾನ್ಯವನ್ನು ನಿಲ್ಲಿಸಿ, ಸಾಂಸ್ಕೃತಿಕ ವಿಕೇಂದ್ರೀಕರಣ ಸಾಧಿಸಲು ಯೋಜನೆಗಳನ್ನು ರೂಪಿಸಬೇಕು.

ಈ  ಬೇಡಿಕೆಗಳನ್ನು ತಮ್ಮದು ಎಂದುಕೊಂಡಂತಹ ಎಲ್ಲಾ ರಂಗಕರ್ಮಿಗಳು ಈ ಕುರಿತು ಎಲ್ಲ ಜಿಲ್ಲೆಗಳಲ್ಲಿ ಅಕ್ಟೋಬರ್ 2 ರಂದು (ಗಾಂಧಿ ಜಯಂತಿ ದಿನ) ತಾವು ಇರುವಲ್ಲಿಯೇ ಪ್ರತಿಭಟನೆ ದಾಖಲಿಸಬೇಕಾಗಿ ‘ಪಾರಿಜಾತ ಬಳಗ’ ಕೋರಿದೆ.


ಇದನ್ನೂ ಓದಿ: ರೈತ ವಿರೋಧಿ ಮಸೂದೆ: ಬಿಜೆಪಿಗರು ಕಾಂಗ್ರೆಸ್ಸಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಹೀಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights