ರೈತ ವಿರೋಧಿ ಮಸೂದೆ: ಬಿಜೆಪಿಗರು ಕಾಂಗ್ರೆಸ್ಸಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಹೀಗೆ!

ವಿಧಾನಸಭಾ ಅಧಿವೇಶನದಲ್ಲಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರವಾಗಿ ಮಾತನಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯನವರು “ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ಯಾವ ರೈತರ ಹಿತದೃಷ್ಟಿಯೂ ಇಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ಚರ್ಚೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸಿಗರ ನಡುವೆ ಜಟಾಪಟಿ ನಡೆದು, ಬಿಜೆಪಿಗರು ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಸದನದ ಚರ್ಚೆ ಹೀಗಿದೆ.

ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತಂದು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು, ರಾಜ್ಯ ಬಿಜೆಪಿ ಸರ್ಕಾರ ಉಳ್ಳವನನ್ನೇ ಭೂ ಒಡೆಯನನ್ನಾಗಿ ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

ಕೃಷಿ ಭೂಮಿ ಖರೀದಿಗೆ ಆದಾಯದ ಮಿತಿಯ ಸೆಕ್ಷನ್ 79ಎ, ಕೃಷಿಕರೇತರರಿಗೆ ಭೂಮಿ ಖರೀದಿ ನಿಷೇಧಿಸಿದ್ದ ಸೆಕ್ಷನ್ 79ಬಿ, ಸುಳ್ಳು ಪ್ರಮಾಣಪತ್ರಕ್ಕೆ ದಂಡ ವಿಧಿಸುವ ಸೆಕ್ಷನ್ 79 ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80, ಗರಿಷ್ಠ ಭೂಮಿತಿಯ ಸೆಕ್ಷನ್ 63ರ ರದ್ದತಿ ಭೂತಾಯಿಗೆ ಬಗೆವ ದ್ರೋಹ ಎಂದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ “ಈ ತಿದ್ದುಪಡಿಯನ್ನು ಬಿಜೆಪಿ ತಂದಿದೆ ಎಂದು ಎಲ್ಲರೂ ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 03-01-2014 ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಒಂದು ಉಪಸಮಿತಿ ರಚಿಸಿದ್ದರು. ವಾಸ್ತವಿಕವಾಗ ಸದರಿ ಕಾಯ್ದೆಯು ಕಾಲಕ್ರಮೇಣ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಪ್ರಸಕ್ತ ಸ್ಥಿತಿಯಲ್ಲಿ ಇದನ್ನು ಜಾರಿಗೊಳಿಸಲು ಸಾಧ್ಯವಿಲ್ಲದ ಕಾರಣ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ ರದ್ದುಗೊಳಿಸಬೇಕೆಂದು ಉಪಸಮಿತಿ ನಿರ್ಣಯ ಮಾಡಿತ್ತು’ ಎಂದರು.

ಆಗ ಕಾಂಗ್ರೆಸ್ ಪಕ್ಷದ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತವಿರೋಧಿ ಸರ್ಕಾರ ಎಂದು ಜರಿದು ಗದ್ದಲವೆಬ್ಬಿಸಿ ತಿದ್ದುಪಡಿ ಮಸೂದೆಯ ಪ್ರತಿಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿ ಸದನದಿಂದ ಹೊರನಡೆದರು.

Karnataka: Siddaramaiah seeks strict action against those involved in drug  peddling

“ಭೂ ಸುಧಾರಣಗೆ ಸಂಬಂಧಿಸಿದಂತೆ ಟೌನ್ ಅಂಡ್ ಕಂಟ್ರಿ ಪ್ಲಾನ್ ಅಡಿಯಲ್ಲಿ 20 ಯೂನಿಟ್‌ಗಳಿಂದ 40 ಯೂನಿಟ್‌ಗೆ 2015ರಲ್ಲಿ ಹೆಚ್ಚಿಸಲಾಗಿದೆ. ಅವರ ಕಾಂಗ್ರೆಸ್‌ಗೆ ಇದು ರೈತವಿರೋಧಿ ಎಂದು ಜ್ಞಾಪಕ ಇರಲಿಲ್ಲವೇ? 4 ಯೂನಿಟ್‌ನಿಂದ ಕಾಂಗ್ರೆಸ್ 8ಕ್ಕೆ ಹೆಚ್ಚಿಸಿದೆ. ಪದೇ ಪದೇ ಈ ಸುಧಾರಣೆಗಳನ್ನು ತಿದ್ದುಪಡಿಮಾಡಬೇಕೆಂದು ತಂದವರು ಅವರೆ, ನಾವಲ್ಲ. ಈಗ ನಾನು 2014ರ ಸ್ಯಾಂಪಲ್ ಕೊಟ್ಟಿದ್ದಕ್ಕೆ ಓಡಿ ಹೋದರು. ಇವರು ಭ್ರಷ್ಟಾಚಾರಿಗಳ ಪರ, ಇವರ ನಾಟಕ ಬಯಲಾಯಿತು” ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.

“ಕಾಯ್ದೆಯನ್ನು ಯಾರು ತಂದಿತ್ತು? ಕಾಂಗ್ರೆಸ್ ಪಕ್ಷವೇ ಪ್ರಸ್ತಾಪ ಮಾಡಿತ್ತು. ನಾಚಿಕೆಯಾಗಬೇಕು ಅದಕ್ಕೆ. 109 ಅಡಿಯಲ್ಲಿ 1973, 74 ರ ಅಧಿವೇಶನದಲ್ಲಿ 79 ಎ, ಬಿ ಬೇಕಾ ಬೇಡವೇ ಎಂಬ ಚರ್ಚೆ ನಡೆಯುತ್ತಿತ್ತು. ವಿಶ್ವನಾಥ್ ರೆಡ್ಡಿಯವರು, ಎಚ್.ಎಸ್ ಸಿದ್ದಪ್ಪನವರು, ಮಲ್ಲಿಕಾರ್ಜುನ ಖರ್ಗೆ, ಎಂ.ಡಿ ನಂಜುಂಡಸ್ವಾಮಿಯವರು, ಏಕಾಂತಯ್ಯನವರು ಸೇರಿದಂತೆ ಹಲವರು ಇದನ್ನು ತೆಗೆಯಬೇಕೆಂದು ಒತ್ತಾಯಿಸಿದ್ದರು. ಆಗ ಭೂಮಿತಿ ಕೇವಲ 54 ಎಕರೆ ಇರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಭೂಮಿ ಖರೀದಿಗೆ 50,000 ವಾರ್ಷಿಕ ಆದಾಯ ಮಿತಿಯನ್ನು ತೆಗೆದುಹಾಕಬೇಕೆಂದು ಕಾಂಗ್ರೆಸ್ ಸದಸ್ಯರು ವಾದಿಸಿದ್ದರು. ಆದರೆ ಈಗ ಮಾತ್ರ ರೈತಗರ ಪರ ಎಂದು ಪೋಸು ಕೊಡುತ್ತಿದ್ದಾರೆ” ಆರ್ ಅಶೋಕ್ ಕಿಡಿಕಾರಿದರು. ಆದರೆ ಉತ್ತರಿಸಲು ಕಾಂಗ್ರೆಸ್ ಸದಸ್ಯರಾರೂ ಇರಲಿಲ್ಲ..


ಇದನ್ನೂ ಓದಿ: ಸಿಎಂ ಬಿಎಸ್‌ವೈ, ಪುತ್ರ ವಿಜಯೇಂದ್ರ ವಿರುದ್ಧ ಸಿದ್ದು, ಡಿಕೆಶಿ ಗಂಭೀರ ಆರೋಪ! ಮಾಧ್ಯಮಗಳಿಂದ ಮರೆಯಾಯಿತು ಆ ಸುದ್ದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights