ಹೊಸ ಸಂಚಾರಿ ನಿಯಮ ಕೇಳಿದ ಮಂದಿ ಸುಸ್ತೋ ಸುಸ್ತು : ದಿನವೊಂದಕ್ಕೆ 3 ಪಟ್ಟು ಹೆಚ್ಚು ದಂಡ ಸಂಗ್ರಹ

ವಾಹನ ಸವಾರರೇ ಎಚ್ಚರ… ಎಚ್ಚರ…. ನೀವೇನಾದ್ರು ಕಾರು, ದ್ವಿಚಕ್ರ ಅಥವಾ ಇನ್ನಿತರ ಯಾವುದೇ ವಾಹನಗಳನ್ನ ತೆಗೆದುಕೊಂಡು ರಸ್ತೆಗಿಳಿಯಬೇಕೇದ್ರಾ ಒಮ್ಮೆ ಹೆಲ್ಮೆಟ್, ವಾಹನ ಪರವಾನಿಗೆ, ಸೀಟ್ ಬೆಲ್ಟ್ ಹಾಕಿದ್ದೀರಾ, ದಾಖಲಾತಿಗಳೆಲ್ಲವೂ ಸರಿಯಾಗಿಯಾ ಅನ್ನೋದನ್ನ ಚೆಕ್ ಮಾಡ್ಕೊಂಡ್ ಬಿಡಿ. ಯಾಕೆಂದ್ರೆ ಇಷ್ಟು ದಿನ ನಮ್ಮನ್ನ ಯಾರು ಕೇಳೋರು ಅಂದುಕೊಳ್ಳುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಅದ್ಯಾಕಪ್ಪಾ ಅಂತೀರಾ.. ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್ ವಾಹನ ಕಾಯ್ದೆಯ ತಿದ್ದು ಪಡಿಯ ಅನುಸಾರವಾಗಿ ಎಲ್ಲವೂ ದುಬಾರಿಯೋ ದುಬಾರಿಯಾಗಿದೆ.

ಹೌದು… ಸಂಚಾರಿ ನಿಯಮದ ಪ್ರಕಾರ ನಿಯಮ ಪಾಲಿಸದೇ ರಸ್ತೆಗಿಳಿದರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ. ವೀಕೆಂಡ್ ಮೋಜು ಮಸ್ತಿಗೆ ಮದ್ಯಪಾನ ಮಾಡಿ ರಸ್ತೆಗಿಳಿದರೆ, ಹೆಲ್ಮೆಟ್ ಧರಿಸಿದೇ ಹೋದರೆ, ಪರವಾನಿಗೆ ಇಲ್ಲದೇ ಇದ್ದರೇ, ಟ್ರಾಫಿಕ್  ಪೊಲೀಸರು ಸರಿಯಾಗೇ ಶಾಸ್ತಿ ಮಾಡ್ತಾರೆ.

ಟ್ರಾಫಿಕ್ ಫೈನ್ ಹೆಚ್ಚಿಗೆ ಮಾಡಿ ಆದೇಶ ಹೊರಡಿಸಿದ್ದ ಮೊದಲ ದಿನವೇ ಸರ್ಕಾರದ ಖಜಾನೆ ಬೋಂಬಾಟ್ ಭರ್ತಿಯಾಗಿದೆ. ಹೊಸ ನಿಯಮ ಬಂದ್ಮೇಲೆ ದಿನವೊಂದಕ್ಕೆ 3 ಪಟ್ಟು ಹೆಚ್ಚು ದಂಡ ಸಂಗ್ರಹವಾಗಿದ್ದು, ದಾಖಲೆ ಮಟ್ಟದಲ್ಲಿ ಕೇಸ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ವೇಳೆ  ಹೊಸ ರೂಲ್ಸ್ ಹಾಗೂ ಫೈನ್ ಅಮೌಂಟ್  ಕೇಳಿದ ಬೆಂಗಳೂರಿನ ಜನ ಅಕ್ಷರಷ: ಸುಸ್ತಾಗಿದ್ದಾರೆ.

ಹೌದು… ಹೊಸ ನಿಯಮ ಜಾರಿಯಾದ ಒಂದೇ ದಿನದಲ್ಲಿ ಹೆಲ್ಮೆಟ್ ರಹಿತ ಚಾಲನೆ ಪ್ರಕರಣ – 1518 ದಾಖಲಾಗಿದ್ದು, 15 ಲಕ್ಷ 18 ಸಾವಿರ ದಂಡ ವಸೂಲಾಗಿದೆ. ಇನ್ನೂ ಸೀಟ್  ಬೆಲ್ಟ್ ಹಾಕದೇ ಇರುವ ಪ್ರಕರಣಗಳ ಸಂಖ್ಯೆ 1141 ದಾಖಲಾಗಿದ್ದು, ಇದಕ್ಕೆ 41 ಸಾವಿರ ರೂಪಾಯಿ ದಂಡ ವಸೂಲಿಯಾಗಿದೆ. ನೋ ಪಾರ್ಕಿಂಗ್ ಗೆ 13 ಸಾವಿರ ದಂಡ ವಸೂಲಿಯಾದರೆ, ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆಗೆ 23 ಸಾವಿರ ರೂಪಾಯಿ ದಂಡ ವಸೂಲಿಯಾಗಿದೆ. ಇನ್ಸುರೆನ್ಸ್ ರಹಿತ ವಾಹನ ಚಾಲನೆಗೆ 26 ಸಾವಿರ, ಡ್ರಂಕ್ ಆಂಡ್ ಡ್ರೈವ್ ಗೆ 1 ಲಕ್ಷ 80 ಸಾವಿರ ದಂಡ ಸಂಗ್ರಹವಾಗಿದೆ. ಇದು ಕೇವಲ ಒಂದೇದಿನದಲ್ಲಿ ಸಂಗ್ರಹವಾದ ಹಣ. ಇದರ ಸಂಗ್ರಹ ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾಗಲಿದೆ.

ಇಷ್ಟೇಲ್ಲಾ ದಂಡ ವಿಧಿಸುವಂತಹ ಸರ್ಕಾರ ಸಂಪೂರ್ಣವಾಗಿ ರಸ್ತೆಗಳನ್ನ ಸರಿಪಡಿಸುವಂತಹ ಗೋಜಿಗೆ ಮಾತ್ರ ಕೈ ಹಾಕಿಲ್ಲ. ನಗರದಲ್ಲಿ ಪಾತಳಕ್ಕೆ ಇಳಿದಂತೆ ಭಾಸವಾಗುವ ಗುಂಡಿಗಳು, ಚರಂಡಿಗಳು, ಹಳ್ಳ, ಅಂಕು-ಡೊಂಕುಗಳು ಬಾಯಿ ಬಿಟ್ಟುಕೊಂಡು ಯಮನಂತೆ ಕಾಯುದು ಮಾತ್ರ ಸರ್ಕಾರದ ಕಣ್ಣಿಗೆ ಬೀಳುತ್ತಲೇ ಇಲ್ಲ. ಅದೆಷ್ಟೋ ಜನ ವಾಹನ ಸವಾರರು ರಸ್ತೆ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಣಿಗೆ ಈಗಲೂ ಕಟ್ಟಿದಂತಿವೆ.

ಹೀಗಿರುವಾಗ ಸಂಚಾರಿ ನಿಯಮದಂತೆ ರಸ್ತೆ ಸರಿಪಡಿಸುವಂತಹ ಕಾರ್ಯವನ್ನು ಅಷ್ಟೇ ತ್ವರಿತವಾಗಿ ಮಾಡಿ ಆನಂತರ ಹೊಸ ಹೊಸ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದರಲ್ಲಿ ಅರ್ಥವಿದೆ ಅಲ್ವಾ..? ಹಾಗಂತ ಸಂಚಾರಿ ನಿಯಮವನ್ನ ಪಾಲಿಸಬೇಡಿ ಎಂದು ನಾವು ಹೇಳುತ್ತಿಲ್ಲ. ವಾಹನ ಸವಾರರು ಸಂಚಾರಿ ನಿಯಮ ಪಾಲಿಸಲು ಹೇಳುವ ಸರ್ಕಾರ , ರಸ್ತೆ ಕಾಮಗಾರಿ ವಿಚಾರದಲ್ಲೂ ಅಷ್ಟೇ ಫಾಸ್ಟ್ ಆಗ್ಬೇಕಾಗಿದೆ.

ಸಂಚಾರಿ ನಿಯಮವನ್ನು ಪಾಲಿಸುವುದು ಎಷ್ಟು ಕಡ್ಡಾಯವೋ ರಸ್ತೆ ಸರಿಪಡಿಸುವುದು ಕೂಡ ಅಷ್ಟೇ ಕಡ್ಡಾಯವಾಗಬೇಕು ಅಲ್ವಾ.. ಅದನ್ನ ಬಿಟ್ಟು ಸಂಚಾರಿ ನಿಯಮ ಪಾಲಿಸದೇ ಇದ್ದಲ್ಲಿ ದಂಡ ವಸೂಲಿ ಮಾಡದರೆ ಅದು ಎಷ್ಟರ ಮಟ್ಟಿಗೆ ನ್ಯಾಯ ಅನ್ನೋದು ಪ್ರಶ್ನೆ..

ರೋಡ್ ಟ್ಯಾಕ್ಸ್, ಇನ್ ಕಂ ಟ್ಯಾಕ್ಸ್ ಪಾವತಿಸೋದಲ್ಲದೇ ಸಂಚಾರಿ ನಿಯಮ ಕೂಡ ಪಾಲನೆ ಮಾಡ್ತಾರೆ ಸವಾರರು. ಇದರಿಂದ ಸರ್ಕಾರಕ್ಕೆ ಆದಾಯ ಇದ್ದರೂ ರಸ್ತೆ ಕಾಮಗಾರಿ ವಿಚಾರದಲ್ಲಿ ಮಾತ್ರ ಸರ್ಕಾರ ಅಸಡ್ಡೆ ತೋರಿಸುತ್ತೇ ಅನ್ನೋದಕ್ಕೆ ರಸ್ತೆ ಮೇಲೆ ಇರುವ ಗುಂಡಿ, ಹಳ್ಳಗಳೇ ಸಾಕ್ಷಿ.

ಹೀಗಾಗಿ ಹೊಸ ಹೊಸ ಸಂಚಾರಿ ನಿಯಮಗಳು ಜಾರಿಗೆ ತರುವುದರ ಜೊತೆಜೊತೆಗೆ ರಸ್ತೆ ದುರಸ್ಥಿ ಕಾರ್ಯಗಳು, ರಸ್ತೆ ಅಗಲಿಕರಣ ಕೂಡ ತುರ್ತಾಗಿ ಆಗಬೇಕಿದೆ.

ಯಾವುದಕ್ಕೂ ನೀವು ದಾಖಲಾತಿಗಳಿಲ್ಲದೇ ಹೋದರೆ ಎಷ್ಟು ದಂಡ ವಿಧಿಸಬೇಕಾಗುತ್ತದೆ ಅನ್ನೋದರ ಬಗ್ಗೆ ಕೊಂಚ ಗಮನ ಹರಿಸಿ. ಆದಷ್ಟು ದಾಖಲಾತಿಗಳನ್ನಿಟ್ಟುಕೊಂಡು ಸಂಚಾರ ನಿಯಮವನ್ನು ಪಾಲಿಸಿದರೆ ಒಳಿತು.

Leave a Reply