ಭಾರತದ ಲಾಕ್‌ಡೌನ್ ವೈಫಲ್ಯವನ್ನು ಗ್ರಾಫ್‌ನಲ್ಲಿ ವಿವರಿಸಿದ ರಾಹುಲ್‌ಗಾಂಧಿ

ಕೊರೋನಾ ವೈರಸ್ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಲಾಕ್‌ಡೌನ್‌ನಿಂದ ಮತ್ತುಷ್ಟು ಸಂಕಷ್ಟಗಳು ಎದುರಾದವೇ ಹೊರತು, ಅದರಿಂದ ಯಾವುದೇ ರೀತಿಯ ಉಪಯೋಗವೂ ದೇಶದ ಪ್ರಜೆಗಳಿಗೆ ಆಗಿಲ್ಲ ಎಂದು ರಾಹುಲ್‌ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ.

ಅಲ್ಲದೆ, ವಿವಿಧ ಕ್ಷೇತ್ರದ ತಜ್ಞರೊಂದಿಗೆ ವಿಡಿಯೋ ಸಂವಾದ ನಡೆಸಿ, ಸರ್ಕಾರದ ಲೋಪಗಳ ಕುರಿತ ಜನರ ಗಮನ ಸೆಳೆಯುತ್ತಿರುವ ರಾಹುಲ್‌ಗಾಂಧಿ ಈಗ ಹೊಸದೊಂದು ಹೋಲಿಕೆಯನ್ನು ಮುಂದಿಟ್ಟಿದ್ದಾರೆ.

ನಾಲ್ಕು ದೇಶಗಳ ಲಾಕ್ ಡೌನ್ ಸಂದರ್ಭವನ್ನು ಭಾರತದ ಲಾಕ್‌ಡೌನ್‌ಗೆ ಹೋಲಿಕೆ ಮಾಡಿರುವ ಗ್ರಾಫ್ ಅನ್ನು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹೇಗೆ ಭಾರತದಲ್ಲಿ ಲಾಕ್ ಡೌನ್ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್‌ಗೆ ತತ್ತರಿಸಿದ್ದ ಸ್ಪೇನ್, ಜರ್ಮನಿ, ಇಟಲಿ ಹಾಗೂ ಬ್ರಿಟನ್ ನಲ್ಲಿ ಲಾಕ್ ಡೌನ್ ನಂತರ ಪ್ರಕರಣಗಳು ಇಳಿದಿವೆ. ಆದರೆ ಭಾರತದಲ್ಲಿ ಲಾಕ್ ಡೌನ್ ಸಮಯದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ಟ್ವೀಟಿಸಿದ್ದಾರೆ.

ಈ ನಾಲ್ಕೂ ದೇಶಗಳಲ್ಲಿಯೂ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಹೇರಲಾಗಿತ್ತು. ಲಾಕ್‌ಡೌನ್‌ ಸಂದರ್ಭದಲ್ಲಿ ಸೋಂಕು ನಿಧಾನಗತಿಯಲ್ಲಿ ಹರಡಲಾರಂಭಿಸಿತ್ತು. ಆದಾದ ಬಳಿಕ ಲಾಕ್‌ಡೌನ್ ತೆರವುಗೊಳಿಲಾಗಿದ್ದು, ಅನ್‌ಲಾಕ್‌ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಆದರೆ, ಭಾರತದಲ್ಲಿ ಸೋಂಕಿತರ ಪ್ರಮಾಣ ತೀವ್ರಗತಿಯಲ್ಲಿ ಏರಿಯಾಗುತ್ತಿದೆ. ಲಾಕ್‌ಡೌನ್ ಸಡಿಲಗೊಂಡ ಮೊದಲ ವಾರದಲ್ಲಿ ಭಾರತದಲ್ಲಿ ಸೋಂಕಿತರ ಸರಾಸರಿ ಪ್ರಮಾಣ ದಿನಕ್ಕೆ ಮೂರು ಸಾವಿರ ಇತ್ತು. ಈಗ ಅದು ಸರಾಸರಿ ದಿನಕ್ಕೆ 9,000 ಪ್ರಕರಣಗಳು ದಾಖಲಾಗುತ್ತಿವೆ.

ಭಾರತದಲ್ಲಿ ಇಂದು ಒಂದೇ ದಿನ 9,887 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2.36 ಲಕ್ಷ ದಾಟಿದೆ. ಇನ್ನು ದೇಶದಲ್ಲಿ ಇಂದು 278 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 6,641ಕ್ಕೆ ಏರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights