ಅರ್ನಬ್ ಗೋಸ್ವಾಮಿ: ಎಫ್ ಐ ಆರ್ ವಜಾ ಮತ್ತು ತನಿಖೆ ಸಿಬಿಐಗೆ ವರ್ಗಾಯಿಸುವ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ರಿಪಬ್ಲಿಕ್ ಸುದ್ದಿವಾಹಿನಿಯ ಸಂಪಾದಕ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಕೋಮು ಸೌಹಾರ್ದ ಹಾಳುಗೆಡುವ ಪ್ರತಿಕ್ರಿಯೆ ನೀಡಿದ್ದ ಆರೋಪ ಎದುರಿಸುತ್ತಿರುವ ಅರ್ನಬ್ ಅವರು ತಮ್ಮ ವಿರುದ್ಧದ ಎಫ್ ಐ ಆರ್ ಅನ್ನು ವಜಾ ಮಾಡುವಂತೆ ಮತ್ತು ತನಿಖೆಯನ್ನು ಮಹಾರಾಷ್ಟ್ರ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಅದಾಗಿತ್ತು.

“ಆರ್ಟಿಕಲ್ 32 ರ ಪ್ರಕಾರ ಎಫ್ ಐ ಆರ್ ವಜಾ ಮಾಡಲು ಸಾಧ್ಯವಿಲ್ಲ. ಅರ್ಜಿದಾರ ಸೂಕ್ತ ಕೋರ್ಟ್ ನಲ್ಲಿ ಇದಕ್ಕೆ ಸೂಕ್ತ ಪರಿಹಾರ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು“ ಎಂದು ಕೋರ್ಟ್ ತಿಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿ ನೀಡಿದ್ದ ಆದೇಶವನ್ನು ನ್ಯಾಯಾಧೀಶ ಚಂದ್ರಚೂಡ್ ಮತ್ತು ನ್ಯಾಯಾಧೀಶ ಎಂ ಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ ಮೇ 11 ರಂದು ಕಾಯ್ದಿರಿಸಿತ್ತು. ಏಪ್ರಿಲ್ 24 ರಂದು ನೀಡಿದ್ದ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮೂರು ವಾರಗಳ ಕಾಲ ಕೋರ್ಟ್ ವಿಸ್ತರಿಸಿದೆ. ಹಾಗೆಯೆ ಅವರಿಗೆ ರಕ್ಷಣೆ ನೀಡಲು ಮುಂಬೈ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಗೋಸ್ವಾಮಿ ಮೇಲಿರುವ ಎಲ್ಲ ಎಫ್ ಐ ಆರ್ ಗಳನ್ನು ಒಂದೇ ಕಡೆ ವಿಚಾರಣೆ ಅಗಬೇಕು ಎಂಬ ತಮ್ಮ ಹಿಂದಿನ ಆದೇಶಕ್ಕೆ ಬದ್ಧವಾಗಿರಬೇಕು ಎಂದಿರುವ ಕೋರ್ಟ್ ಇದೇ ಆರೋಪದ ಸಲುವಾಗಿ ಮುಂದೆ ಯಾವುದೇ ಎಫ್ ಐ ಆರ್ ಗಳನ್ನು ದಾಖಲಿಸಿಕೊಳ್ಳದಂತೆ ಸೂಚಿಸಿದೆ.

ಮಹಾರಾಷ್ಟ್ರದ ಪಾಲ್ಘರ್‌ ಲಿಂಚಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅದನ್ನು ಕೋಮುವಾದೀಕರಣಗೊಳಿಸಲು ಅರ್ನಬ್‌ ಗೋಸ್ವಾಮಿ ಯತ್ನಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಹಿಂದೂಗಳ ಮೇಲೆ ಹಲ್ಲೆ, ಸಾಧುಗಳ ಮೇಲೆ ಹಲ್ಲೆ ಎಂದು ಅರ್ನಬ್‌ ಗೋಸ್ವಾಮಿ ಸುದ್ದಿ ನಿರೂಪಿಸಿದ್ದರು. ಆದರೆ ಪಾಲ್ಘರ್‌ನಲ್ಲಿ ಹಲ್ಲೆ ನಡೆಸಿದ ಆರೋಪಿಗಳು ಮತ್ತು ಹಲ್ಲೊಗೊಳಗಾದ ಸಂತ್ರಸ್ತರು ಇಬ್ಬರೂ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದ್ದವರು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದೇ ಸಮಯದಲ್ಲಿ ಅವರು ಸೋನಿಯಾ ಗಾಂಧಿಯವರ ಮೇಲೆ ಕೂಡ ಕ್ಷುಲ್ಲಕ ಆರೋಪಗಳನ್ನು ಮಾಡಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದರು. ಈ ವಿಷಯವಾಗಿಯೂ ಅವರ ವಿರುದ್ಧ ದೇಶದೆಲ್ಲೆಡೆ ಹಲವು ಪ್ರಕರಣಗಲು ದಾಖಲಾಗಿದ್ದವು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights