ಆತ್ಮ ನಿರ್ಭರ ಭಾರತಕ್ಕೆ ವೋಕಲ್ ಫಾರ್ ಲೋಕಲ್‌ಗೆ ಪಣತೊಡೋಣ: ಕೆಂಪುಕೋಟೆಯಲ್ಲಿ ಮೋದಿ

ಇಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ನೆನೆಯುವ ದಿನ. ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ನಿಂತಿರುವ ಸೈನಿಕರು ಹಾಗೂ ರಾಷ್ಟ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರು ಸೇರಿಂದತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನವಿದು. ಈ ದಿನವನ್ನು ಅವರಿಗೆ ಸಮರ್ಪಿಸೋಣ. ಆತ್ಮ ನಿರ್ಭರತೆ ಪಣತೊಡೋಣ ಎಂದು  ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ಹೇಳಿದರು.

ಮಾರಕ ಕೊರೊನಾದಿಂದಾಗಿ ಕೆಂಪುಕೋಟೆಯಲ್ಲಿ ಇಂದು ಮಕ್ಕಳ ಕಲರವ ಇಲ್ಲ. ಅವರು ಕೊರೋನಾದಿಂದಾಗಿ ಸ್ವಾತಂತ್ರ್ಯ ಸಂಭ್ರಮದಿಂದ ದೂರ ಉಳಿಯಬೇಕಾಯಿತು. ದೇಶಕ್ಕೆ ಕೊರೊನಾ ಬಂದ ನಂತರ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಕೊರೊನಾದಿಂದಾಗಿ ಅದೆಷ್ಟೋ ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿಗೆ ಬಲಿಯಾದವರಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಇಂದು ನಾವು ಕೊರೊನಾ ಜೊತೆಗೆ, ಪ್ರವಾಹ ಮತ್ತು ಭೂಕುಸಿತದಂತಹ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ನೈಸರ್ಗಿಕ ವಿಕೋಪಗಳು ಅನೇಕ ಜನರನ್ನು ಬಲಿಪಡೆದುಕೊಂಡಿದೆ. ಈ ವಿಪತ್ತುಗಳನ್ನು ಎದುರಿಸುತ್ತಿರುವ ದೇಶದ ಅನೇಕ ರಾಜ್ಯಗಳಿಗೆ ನಾವು ಸದಾ ಬೆಂಬಲ ನೀಡುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ನಡುವೆ ಭಾರತೀಯರು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು. ದೇಶದ ಪ್ರತಿಯೊಬ್ಬ ಪ್ರಜೆಯೂ ತಾನು ಸ್ವಾವಲಂಬಿಯಾಗಬೇಕೆಂದು ಸಂಕಲ್ಪ ಮಾಡಬೇಕು. ಇದು ರಾಷ್ಟ್ರದ ಜನರಿಗೆ ಕಡ್ಡಾಯ. ಆತ್ಮನಿರ್ಭರ್​ ಭಾರತ್ ಪರಿಕಲ್ಪನೆ ಭಾರತೀಯರ ಮನಸ್ಸಿನಲ್ಲಿದೆ. ಈ ಕನಸು ಪ್ರತಿಜ್ಞೆಯಾಗಿ ಬದಲಾಗುತ್ತಿದೆ. ಇಂದು 130 ಕೋಟಿ ಭಾರತೀಯರ ಮನಸಲ್ಲಿ ಆತ್ಮನಿರ್ಭರ್​ ಭಾರತದದ ಮಂತ್ರವಾಗಿ ಮಾರ್ಪಟ್ಟಿದೆ ಎಂದರು.

ಆತ್ಮನಿರ್ಭರ್ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಮತ್ತು ವಿಶ್ವಾಸದ ಬಗ್ಗೆ ನನಗೆ ನಂಬಿಕೆ ಇದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಆ ಗುರಿಯನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಮೋದಿ ಹೇಳಿದರು.

ಇಡೀ ಜಗತ್ತು ಒಂದೇ ಕುಟುಂಬ ಎಂದು ಭಾರತ ಯಾವಾಗಲೂ ನಂಬುತ್ತದೆ. ನಾವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವಾಗ, ಇದೇ ವೇಳೆ ನಮ್ಮ ಪಯಣದಲ್ಲಿ ಮಾನವೀಯತೆಯ ಗುಣವನ್ನೂ ಸಹ ಉಳಿಸಿಕೊಳ್ಳಬೇಕು ಎಂದರು.

ಆತ್ಮನಿರ್ಭರ್​ ಭಾರತ್​ ಸಾಧನೆಗೆ ಲಕ್ಷಾಂತರ ಸವಾಲುಗಳಿವೆ ಎಂದು ನಾನು ಕೂಡ ಒಪ್ಪುತ್ತೇನೆ. ಜಾಗತಿಕ ಸ್ಪರ್ಧೆಯಲ್ಲಿ ಇವೆಲ್ಲವೂ ಇದ್ದೇ ಇರುತ್ತದೆ. ನಮ್ಮ ದೇಸೀ ಉತ್ಪನ್ನಗಳನ್ನು ನಾವು ಉತ್ತೇಜಿಸಿ ಪ್ರಶಂಸಿಸಬೇಕು. ನಾವು ಇದನ್ನು ಮಾಡದಿದ್ದರೆ ನಮ್ಮ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಗುವುದಿಲ್ಲ ಎಂದರು.

ಮುಂದಿನ ವರ್ಷ 75ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಹೊಸ ಗುರಿಗಳನ್ನು ಇಟ್ಟುಕೊಳ್ಳಬೇಕು ಎಂದರು.


ಇದನ್ನೂ ಓದಿಮೋದಿ ಸರ್ಕಾರದ ಮಹಾದ್ರೋಹ – ಮಾರಾಟವಾಗುತ್ತಿರುವ “ಮಹಾರತ್ನಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights