ಏನಿದು ವಿಚಾರವಾದ? – ಎನ್ ಎಸ್ ಶಂಕರ್ ಅವರ ಲೇಖನ ಓದಿ

ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ದೇಶದ ಬೇರೆ ಬೇರೆ ಕಡೆಗಳಲ್ಲಿ ನಡೆದಂತೆಯೇ ಕರ್ನಾಟಕದಲ್ಲೂ ವಿಚಾರವಾದಿ ಆಂದೋಲನ ಬಹಳ ಪ್ರಬಲವಾಗಿಯೇ ಅರಳಿತು. ನಮ್ಮಲ್ಲಿನ ಚಳವಳಿಗೆ ತಮಿಳುನಾಡಿನ ದ್ರಾವಿಡ ಆಂದೋಲನವೇ ಪ್ರೇರಣೆಯಾದರೂ, ಕರ್ನಾಟಕದಲ್ಲಿ ಅದು ಅಲ್ಲಿನಂತೆ ಬಹುಮುಖಿ ಆಂದೋಲನವಾಗಲಿಲ್ಲ. ಪೆರಿಯಾರ್ ನೇತೃತ್ವದ ದ್ರಾವಿಡ ಚಳವಳಿ ಏಕಕಾಲಕ್ಕೆ ಭಾಷಾ ಚಳವಳಿ, ಮೂಢನಂಬಿಕೆಗಳ ವಿರುದ್ಧದ ವಿಚಾರವಾದಿ ಚಳವಳಿ ಹಾಗೆಯೇ ಪುರೋಹಿತಶಾಹಿ ಮತ್ತು ಜಾತಿಪದ್ಧತಿ ವಿರುದ್ದ ರೂಪುಗೊಂಡಂತಹ ಸಮಾನತೆಯ ಆಂದೋಲನ- ಎಲ್ಲವೂ ಒಗ್ಗೂಡಿದ ‘ಆತ್ಮಗೌರವ ಚಳವಳಿ’ ಆಗಿತ್ತು.

ಕರ್ನಾಟಕದಲ್ಲಿ ಹಾಗಾಗಲಿಲ್ಲ. ಇಲ್ಲಿ ಬೇರೆ ಬೇರೆ ಕಾಳಜಿಗಳನ್ನು ಇಟ್ಟುಕೊಂಡು ಬೇರೆ ಬೇರೆ ಚಳವಳಿಗಳು- ಅಂದರೆ ರೈತ ಚಳವಳಿ, ದಲಿತ ಚಳವಳಿ, ಸ್ತ್ರೀವಾದಿ ಚಳವಳಿ, ಪರಿಸರ ಚಳವಳಿ- ಹೀಗೆ ನಡೆದಿದ್ದು ನಿಮಗೆಲ್ಲ ಗೊತ್ತೇ ಇದೆ. ವಿಚಾರವಾದಿ ಆಂದೋಲನ ಮಾತ್ರ ಇತರೆ ಚಿಂತನೆಗಳ ಸಂಗಡ ಹಾಸುಹೊಕ್ಕಾಗದೆ ತನ್ನಷ್ಟಕ್ಕೇ ಪ್ರತ್ಯೇಕವಾದ ನಡುಗಡ್ಡೆಯಂಥ ಚಳವಳಿಯಾಯಿತು. ಹಾಗಾಗಿಯೇ ಗಾಢವಾದ ಸಾಂಸ್ಕೃತಿಕ ಆಯಾಮವನ್ನೂ ಪಡೆಯದೆ ಹೋಯಿತು. ಆದರೂ ನನ್ನ ತಲೆಮಾರು- ಆಗಿನ ಕಾಲಧರ್ಮವೋ ಎಂಬಂತೆ- ಒಮ್ಮನಸ್ಸಿನಿಂದ ವಿಚಾರವಾದಿ ಆಂದೋಲನವನ್ನು ಬೆಂಬಲಿಸಿತು. ಮತ್ತು ಅದರಿಂದ ನಾವು ‘ಪ್ರಶ್ನೆ ಕೇಳದೆ ಏನನ್ನೂ ಒಪ್ಪಬಾರದು’ ಎಂಬ ದೊಡ್ಡ ಪಾಠವನ್ನೂ ಕಲಿತೆವು. ಅಷ್ಟಾದರೂ ಇಡೀ ಆಂದೋಲನವೇ ತುಸು ಯಾಂತ್ರಿಕ ಸ್ವರೂಪದ್ದಾದ್ದರಿಂದ ನಮಗೆ ಸರಿಯಾದ ಫೋಕಸ್ ಸಿಗಲಿಲ್ಲ ಅಂತ ಈಗ ಅನಿಸುತ್ತಿದೆ. ಅಂದರೆ ನಾವು ಬಹಳ ಕುರುಡಾಗಿ ಒರಟಾಗಿ ಯಾವುದನ್ನು ಪ್ರಶ್ನೆ ಮಾಡಬೇಕು, ಯಾವುದನ್ನು ಪ್ರಶ್ನೆ ಮಾಡಬಾರದು ಎಂಬ ಪರಿಜ್ಞಾನವೇ ಇಲ್ಲದೆ ದನಿ ಎತ್ತುತ್ತಾ ಹೋದೆವು. ಪ್ರಶ್ನೆ ಮಾಡುವುದೇನೋ ಒಳ್ಳೆಯದೇ. ಆದರೆ ಅದಷ್ಟಕ್ಕೇ ಜೋತು ಬಿದ್ದಿದ್ದರಿಂದಾಗಿ ನಮಗೆ ಜೀವಮಾನ ಪೂರ್ತಿ ಉಳಿದು ಬರುವಂಥ ದೊಡ್ಡ ವಿವೇಕ ಸಿಗಲಿಲ್ಲ.

ಉದಾಹರಣೆಗೆ ನಮಗೆ ನಂಬಿಕೆಗೂ ಮೂಢನಂಬಿಕೆಗೂ ವ್ಯತ್ಯಾಸ ಗೊತ್ತಾಗಲಿಲ್ಲ. ಈವತ್ತು ನಾವು ಯೋಚನೆ ಮಾಡಿದರೆ ಈ ವ್ಯತ್ಯಾಸದ ಅರಿವು ನನಗೆ ಬಹಳ ಮುಖ್ಯ. ಈಗ ದೇವರಿದ್ದಾನೋ ಇಲ್ಲವೋ? ಈ ಪ್ರಶ್ನೆ ಒಂದು ಲಕ್ಷ ವರ್ಷ ಹೋದರೂ ಬಗೆಹರಿಯುವುದಿಲ್ಲ. ಆದರೂ ಅದನ್ನೇ ಹಿಡಿದುಕೊಂಡು ಜಗ್ಗಾಡೋದು. ಯಾರಿಗೇನು ಉಪಯೋಗ ಅದರಿಂದ? ಆಯ್ತಪ್ಪ, ನಾಳೆ ಬೆಳಗ್ಗೆ ದೇವರಿದ್ದಾನೆ ಅಂತ ಡಿಸೈಡ್ ಆಗಿಹೋಯ್ತು. ಅಥವಾ ಇಲ್ಲ ಅಂತಾನೇ ಡಿಸೈಡ್ ಆಯ್ತು. ಅದರಿಂದ ಜನಜೀವನಕ್ಕೂ, ಜನರ ಸಂಸ್ಕೃತಿಗೂ ಅಥವಾ ವಿಚಾರವಾದಿ ಆಂದೋಲನಕ್ಕೂ ಏನಾದರೂ ಉಪಯೋಗ ಇದೆಯೇ?

ಹಾಗಿದ್ರೆ ಯಾವುದು ನಂಬಿಕೆ, ಯಾವುದು ಮೂಢನಂಬಿಕೆ?

ಜನ ತಮ್ಮ ಪಾಡಿಗೆ ತಾವು ತಂತಮ್ಮ ನಂಬಿಕೆ ಮೇಲೆ ಬದುಕುತ್ತಾರೆ. ಜಗತ್ತಿನ ಎಲ್ಲ ಮೂಲೆಗಳಲ್ಲಿರುವ ಎಲ್ಲ ಸಂಸ್ಕೃತಿಗಳಲ್ಲಿಯೂ ಅದರದೇ ಆದ ನಂಬಿಕೆಯ ಹಂದರ, ಜನಸಮೂಹವನ್ನು ನಡೆಸಿಕೊಂಡು ಹೋಗುತ್ತೆ, ಇಲ್ಲಿ ನಂಬಿಕೆ ಎನ್ನುವುದು- ಬದುಕಿನ ಮೂಲ ಆಧಾರ. ಬೇಕಾದರೆ ಪಾರಂಪರಿಕ ವಿವೇಕ ಎನ್ನಿರಿ. ಅದರಿಂದ ಯಾರಿಗೂ ತೊಂದರೆಯಿಲ್ಲ. ಇದಕ್ಕೆ ವಿರುದ್ಧವಾಗಿ ಯಾವುದು ಮೂಢನಂಬಿಕೆ ಅಂದರೆ ಎಲ್ಲಿ ಶೋಷಣೆ ಇರುತ್ತೋ, ಎಲ್ಲಿ ಮೋಸ ಇರುತ್ತೋ, ಎಲ್ಲಿ ಅನ್ಯಾಯ ಇರುತ್ತೋ ಅದು. ಅದು ಮೂಢನಂಬಿಕೆ.

ಉದಾಹರಣೆ ನೋಡೋಣ. ಈಗ ಮಡೆಸ್ನಾನ. ಮಡೆಸ್ನಾನದ ಬಗ್ಗೆ ನಮ್ಮ ಘನತೆವೆತ್ತಂಥ ಸಚಿವರು- ಸ್ವತಃ ಪರಿಣತ ವೈದ್ಯರು, ಈಗವರು ಬದುಕಿಲ್ಲ, – ಅವರು ಮಡೆಸ್ನಾನ ಮಾಡಿದರೆ ಚರ್ಮರೋಗ ವಾಸಿಯಾಗುತ್ತೆ ಅಂತ ಹೇಳಿಕೆ ಕೊಟ್ಟರು. ಅವರು ಮೆಡಿಕಲ್ ಡಾಕ್ಟರ್. ಆದರೆ ಅವರು ಸ್ವತಃ ಮಡೆಸ್ನಾನ ಮಾಡಿ ಯಾವ ಚರ್ಮರೋಗ ವಾಸಿ ಮಾಡಿಕೊಂಡಿದ್ದನ್ನೂ ಯಾರೂ ಕಂಡಿಲ್ಲ. ತಮ್ಮ ಬಳಿ ಬಂದ  ಚರ್ಮರೋಗಿಗಳಿಗೆ ಮಡೆಸ್ನಾನದ ‘ಪ್ರಿಸ್ಕ್ರಿಪ್ಷನ್’ ಬರೆದು ಕೊಟ್ಟಿದ್ದರೋ ಏನೋ ಮಾಹಿತಿಯಿಲ್ಲ. ಇರಲಿ. ಇಂಥವರು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿ ಕೂತು ಇಂಥ ಹೇಳಿಕೆ ಕೊಡುವಂಥ ವಾತಾವರಣದಲ್ಲಿ ನಾವಿದ್ದೇವೆ!

ಅದೇ ಥರ ಬೆತ್ತಲೆಸೇವೆ. ಇಂಥವನ್ನು – ಅಂದರೆ ಎಲ್ಲಿ ಶೋಷಣೆ, ಅಸಮಾನತೆ, ಅನ್ಯಾಯ ಇದೆಯೋ- ಅಂಥವನ್ನು ಮೂಢನಂಬಿಕೆ ಅಂತ ಕರೆಯಬಹುದೇ ಹೊರತು, ಯಾವನೋ ಒಬ್ಬ ಪೂಜೆ ಮಾಡಿಕೋತಾನೆ, ದೇವರಿಗೆ ಎರಡು ಊದುಕಡ್ಡಿ ಬೆಳಗುತ್ತಾನೆ ಅಂದರೆ ಬೆಳಗಲಿ ಬಿಡಿ, ನಿಮಗೇನು ನಷ್ಟ, ನಮಗೇನು ನಷ್ಟ? ಅದಕ್ಕಾಗಿ ಅವನು ಸಾರ್ವಜನಿಕವಾಗಿ ಬಳಸಬೇಕಾದಂತಹ ಸಮಯವನ್ನು ದುರ್ಬಳಕೆ ಮಾಡಿದ್ರೆ ಅದು ಪ್ರಶ್ನಾರ್ಹ…. ಒಟ್ಟಿನಲ್ಲಿ ಜನಸಮೂಹವನ್ನು ಅವರವರ ನಂಬಿಕೆಗಳ ಜೊತೆ ಬದುಕಲು ಬಿಡಬೇಕು ಎನ್ನುವುದು ನನ್ನ ಈಚಿನ ಅನಿಸಿಕೆ.

ನಾವು ಕುವೆಂಪು ಅವರನ್ನು ನಮ್ಮ ಕಾಲದ ಬಹು ದೊಡ್ಡ ವೈಚಾರಿಕ ಗುರು ಅಂತ ಒಪ್ಪಿಕೊಂಡಿದ್ದೇವೆ. ‘ಗುಡಿ ಚರ್ಚು ಮಸೀದಿಗಳನ್ನೆಲ್ಲ ಬಿಟ್ಟು ಬನ್ನಿ’ ಅನ್ನೋದು, ‘ನೂರು ದೇವರನೆಲ್ಲ ನೂಕಾಚೆ ದೂರ’ ಅನ್ನೋದು ಇವೆಲ್ಲ ಸರಿ. ಆದರೆ ಅವರು ಹೇಳಿರೋದು ಅಷ್ಟೇ ಅಂದುಕೊಂಡು ನಾವು ಸುಮ್ಮನಾಗಿಬಿಟ್ಟೆವು. ಕುವೆಂಪು ಅಷ್ಟೇ ಹೇಳಲಿಲ್ಲ. ಅವರು ಹೇಳಿದರು: ನಾನು ಸಾಹಿತಿ ಮಾತ್ರವಲ್ಲ, ಬರೀ ಸಾಹಿತ್ಯ ಸೃಷ್ಟಿಗೋಸ್ಕರ ಸಾಹಿತ್ಯ ರಚನೆ ಮಾಡಲಿಲ್ಲ. ನನ್ನ ಆಧ್ಯಾತ್ಮ ಸಾಧನೆಗೋಸ್ಕರ ನಾನು ಸಾಹಿತ್ಯ ರಚನೆ ಮಾಡಿದ್ದೀನಿ ಎಂದು ಹೇಳಿದರು. ಯಾವುದದು ಆಧ್ಯಾತ್ಮ?

ವಿಮರ್ಶಕ ಗೆಳೆಯ ಡಿ.ಎಸ್. ನಾಗಭೂಷಣ, ಕುವೆಂಪು ಅವರ ನಿಲುವನ್ನು ‘ಆಧ್ಯಾತ್ಮಿಕ ವೈಚಾರಿಕತೆ’ ಎಂದು – ಬಹಳ ಸೂಕ್ತವಾಗಿಯೇ- ಬಣ್ಣಿಸಿದ್ದಾರೆ. 1974ರಲ್ಲಿ ಬರಹಗಾರರು ಮತ್ತು ಕಲಾವಿದರ ಒಕ್ಕೂಟದ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಕುವೆಂಪು ಒಂದು ಮಾತು ಹೇಳುತ್ತಾರೆ. ‘ಈಗ ನಮ್ಮ ಮನೆಯಲ್ಲಿ ಹಳೆಯ ಆಭರಣಗಳಿದ್ದಾವೆ. ಪುರಾತನ ಕಾಲದ್ದು. ಆ ಆಭರಣಗಳೆಲ್ಲ ಪುರಾತನ ಕಾಲದ್ದು ಅಂತ ಬಿಸಾಕಿಬಿಡ್ತೀರಾ? ಹಳೇ ವಿನ್ಯಾಸ ಈಗ ಹಾಕಿಕೊಳ್ಳಕ್ಕೆ ಆಗಲ್ಲ ಅಂತ ನಿಮಗನಿಸಿದರೆ ನೀವು ಅದನ್ನು ಕರಗಿಸಿ ಹೊಸದಾಗಿ ಡಿಸೈನ್ ಮಾಡಿ ಹಾಕ್ಕೋತೀರಿ. ಹಾಗೆಯೇ ನಾವು ಪರಂಪರೆಯಲ್ಲಿ ಏನಿದೆಯೋ, ಅದನ್ನು ಎಲ್ಲವನ್ನೂ ಬಿಸಾಕುವುದಲ್ಲ. ಶ್ರೇಷ್ಠವಾದದ್ದು ಏನಿದೆಯೋ ಅದನ್ನು ಕರಗಿಸಿ ಈಗಿನ ಕಾಲಕ್ಕೆ ಮರುವಿನ್ಯಾಸ ಮಾಡಿಕೊಳ್ಳಬೇಕು…’

ಹಾಗೆಯೇ ಕುವೆಂಪು ವೇದಗಳನ್ನೂ ತಿರಸ್ಕರಿಸಲಿಲ್ಲ. ಅವರು 1937ನೇ ಇಸವಿಯಲ್ಲಿ ಶ್ರೀರಂಗಪಟ್ಟಣದ ಯುವಜನಮೇಳದಲ್ಲಿ ಮಾಡಿದ ಭಾಷಣ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಸುಪ್ರಸಿದ್ಧವಾಯಿತು. ಅದರಲ್ಲಿ ಅವರು ಹೇಳುತ್ತಾರೆ. ‘ಆ ಚತುರ್ಮುಖ ಬ್ರಹ್ಮನೇ ಸಾಕ್ಷಾತ್ ನಿಮ್ಮ ಮುಂದೆ ಬಂದು ವೇದಗಳನ್ನು ನಾನೇ ರಚಿಸಿದ್ದು ಅಂದ್ರೆ ನಂಬಬೇಡಿ, ವೇದಗಳು ಅನಾದಿಯಾದರೆ ಅನಂತವೂ ಹೌದು. They are still in the process of making. ಅವು ಪೂರೈಸಿದ ಗ್ರಂಥವಲ್ಲ. ಹಿಂದೆ ಋಷಿಮುನಿಗಳಿದ್ದರು ಅಂದರೆ ಈಗಲೂ ಋಷಿ ಮುನಿಗಳಿದ್ದಾರೆ. ನಮ್ಮ ಕಾಲದಲ್ಲಿ ವಿಜ್ಞಾನಿಗಳೇ ನಮ್ಮ ಋಷಿಮುನಿಗಳು. ಗಾಂಧೀಜಿ ಕೂಡ ಒಬ್ಬ ಋಷಿ. ಇವರೆಲ್ಲರಿಂದ ನಾವು ಕಲಿತು ಮುಂದುವರೆಯಬೇಕು…..’

ನಮ್ಮ ವಿಚಾರವಾದ ಈ ಆಧ್ಯಾತ್ಮದ ಅಂಶವನ್ನು ಒಳಗೊಳ್ಳಲಿಲ್ಲ. ಅದಕ್ಕೇ ವಿಚಾರವಾದ ಎಂಬುದು ನಮ್ಮ ಪರಂಪರೆಯ ಲವಲೇಶ ಸಂಪರ್ಕವೂ ಇಲ್ಲದೆ ಕಣ್ಣುಪಟ್ಟಿ ಕಟ್ಟಿದಂತಹ ಬರಡು ಪ್ರಣಾಳಿಕೆ ಆಗಿಹೋಯಿತು. ನಮ್ಮ ಹಿಂದೆ ಲೋಕಾಯತ ಪರಂಪರೆ ಇತ್ತ. ಸಾಂಖ್ಯ ಸಿದ್ದಾಂತವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಬುದ್ಧನಿದ್ದ… ಇವೆಲ್ಲದರಿಂದ ಕೊಡವಿಕೊಂಡ ವಿಚಾರವಾದ, ಕೇವಲ ಪಾಶ್ಚಾತ್ಯ ಪ್ರೇರಣೆಯ ಕುರುಡು ನಕಲಾಯಿತು. ಅಂತರ ಪಿಶಾಚಿಯಾಯಿತು….

ಇಲ್ಲಿ ಅಂಬೇಡ್ಕರ್‌ರನ್ನು ಇಟ್ಟುಕೊಂಡು ಈ ವಿಷಯವನ್ನೆಲ್ಲ ಯಾಕೆ ಕೇಳಬೇಕು ಅಂತ ನೀವು ಯೋಚನೆ ಮಾಡುತ್ತಿದ್ದರೆ….

ಸರಿ ಈಗ ಮತ್ತೆ ಮೂಢನಂಬಿಕೆ ವಿಷಯಕ್ಕೆ ಬರೋಣ. ನಮ್ಮ ದೇಶದಲ್ಲಿ ನಿಮ್ಮೆಲ್ಲರ ಪ್ರಕಾರ ಅತಿ ದೊಡ್ಡ ಮೂಢನಂಬಿಕೆ ಯಾವುದು? (ಸಭಿಕರಲ್ಲೊಬ್ಬರು : ‘ದೇವರು’)

ನನ್ನ ಪ್ರಕಾರ ಜಾತಿಪದ್ಧತಿ. ಒಬ್ಬ ಮೇಲು, ಒಬ್ಬ ಕೀಳು… ಇದಕ್ಕಿಂತ ದೊಡ್ಡ ಮೂಢನಂಬಿಕೆ ಬಹುಶಃ ಪ್ರಪಂಚದಲ್ಲೇ ಎಲ್ಲೂ ಇಲ್ಲ. ಇದರ ವಿರುದ್ಧ ದನಿ ಎತ್ತಿದಂತಹ, ಮತ್ತು ಬಹಳ ವೈಜ್ಞಾನಿಕ ಹೋರಾಟವನ್ನು ರೂಪಿಸಿದಂತಹ ಅಂಬೇಡ್ಕರ್, ನನ್ನ ಪ್ರಕಾರ ನಮ್ಮ ದೇಶದ ಬಹಳ ದೊಡ್ಡ ಹಾಗೂ ಅಗ್ರಗಣ್ಯ ವಿಚಾರವಾದಿ. ಅವರು ತಮ್ಮ ಇಡೀ ಜೀವನ ಹಿಂದೂ ಧರ್ಮ ಎಂದರೇನು? ಅದರ ತತ್ವವೇನು? ಈ ಜಾತಿಪದ್ಧತಿಯ ಮೂಲವೇನು? ಆರು ಹೇಗೆ ಹುಟ್ಟಿತು? ಅದರ ತಂತ್ರ ಏನು? ಅದು ಯಾವ ಸ್ವರೂಪ ತಾಳಿದೆ? ಈಗೇನಾಗಿದೆ ಅದು? ಈ ತರಹದ ಅನೇಕ ಪ್ರಶ್ನೆಗಳನ್ನು ಸಂಶೋಧಿಸಿದರು. ತಾವು ಕಂಡುಕೊಂಡಿದ್ದನ್ನು ಸಾಕ್ಷ್ಯಧಾರಗಳ ಸಮೇತ ಮಂಡಿಸಿದರು. ಅವರು ಬಹಳ ದೊಡ್ಡ ಸಂಶೋಧಕ ಮತ್ತು ವಿದ್ವಾಂಸ. ಅದನ್ನು ಯಾರೂ ಗಮನಿಸುತ್ತಲೇ ಇಲ್ಲ. ಕೇವಲ ಅವರು ದೊಡ್ಡ ಹೋರಾಟಗಾರ, ಕ್ರಾಂತಿಕಾರಿ ಆಂತ ಹೇಳುತ್ತಾರೆ. ಹೆಚ್ಚು ಅಂದರೆ ಸಂವಿಧಾನ ಕೊಟ್ಟರು ಅನ್ನುತ್ತಾರೆ. ಅಲ್ಲಿಗೆ ಮುಗಿದುಹೋಗುತ್ತದೆ. ಆದರೆ ಅವರನ್ನು ದೊಡ್ಡ ಸಂಶೋಧಕ ಇನ್ನೊಬ್ಬರಿಲ್ಲ. ದುರದೃಷ್ಟ ಅಂದರೆ ಅವರ ಈ ಮುಖವನ್ನು ಮರೆಮಾಚುವುದರ ಮೂಲಕ ಈ ಬಗ್ಗೆ ಯಾವುದೇ ಚರ್ಚೆ ನಡೆಯದಿರುವ ಹಾಗೆ, ಅಲ್ಲಿಗೇ ಸಾರಿಸಿಬಿಡುವ ಕುತಂತ್ರವೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಡೆದುಕೊಂಡು ಬಂದಿದೆ.

ಆದ್ದರಿಂದ ವಿಚಾರವಾದದಲ್ಲಿ ಆಸಕ್ತಿ ಇರುವವರೆಲ್ಲರೂ ಕಡ್ಡಾಯವಾಗಿ ಅಂಬೇಡ್ಕರ್ ಸಂಶೋಧನೆಗಳನ್ನು ಓದಬೇಕು. ಎಲ್ಲಿಯವರೆಗೆ ಓದುವುದಿಲ್ಲವೋ, ಅಲ್ಲಿವರೆಗೂ ನಾವು ವಿಚಾರವಾದಿ ಆಗೋಲ್ಲ.

ಅದಕ್ಕಿಂತ ಮುಖ್ಯವಾಗಿ ಎಲ್ಲಿವರೆಗೂ ನಾವು ಜಾತಿಪದ್ಧತಿ ಎಂಬ ವಿರಾಟ್ ಮೂಢನಂಬಿಕೆಯಲ್ಲಿ ಮುಳುಗಿ ಪಾಲಿಸುತ್ತಾ ಇರುತ್ತೇವೋ, ಅಲ್ಲಿವರೆಗೂ ನಾವು ವಿಚಾರವಾದಿ ಆಗುವುದಿಲ್ಲ. ನೀವು ಎಷ್ಟೇ ಪವಾಡ ರಹಸ್ಯ ಬಯಲು ಮಾಡುತ್ತ, ಎಷ್ಟೇ ವಾಗ್ವಾದಗಳಲ್ಲಿ ಕಾಲಹರಣ ಮಾಡುತ್ತ ಬಂದರೂ ಅಷ್ಟೇ. ಜಾತಿಪದ್ಧತಿಯನ್ನು ಆಚರಣೆಯಲ್ಲಿ ಧಿಕ್ಕರಿಸಿ ಬಾಳುವವರೆಗೆ ಅವೆಲ್ಲ ನಿರರ್ಥಕ ಬಡಿವಾರ ಮಾತ್ರ.

[2012ರ ಮೇ ತಿಂಗಳಿನಲ್ಲಿ ‘ವಿಚಾರವಾದಿಗಳ ಒಕ್ಕೂಟ’ ಶ್ರವಣಬೆಳಗೊಳದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವೈಚಾರಿಕ ಅಧಿವೇಶನದಲ್ಲಿ ‘ವಿಚಾರವಾದ ಮತ್ತು ಅಂಬೇಡ್ಕರ್‌’ ವಿಷಯವಾಗಿ ಆಡಿದ ಮಾತುಗಳ ಪರಿಷ್ಕೃತ ರೂಪ]

  • ಎನ್ ಎಸ್ ಶಂಕರ್ ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ, ವ್ಯಂಗ್ಯ ಚಿಕ್ರಕಾರ. ಉಲ್ಟಾ ಪಲ್ಟ ಶಂಕರ್ ನಿರ್ದೇಶಿಸಿದ ಜನಪ್ರಿಯ ಚಲನಚಿತ್ರ. ಚಂಚಲೆ, ಮಾಯಾಬಜಾರ್, ಮೇಲೋಗರ, ಆವರಣ ಅನಾವರಣ, ಪೂಲನ್ ದೇವಿ (ಜೀವನ ಕಥನ), ಗೋಹತ್ಯೆ ಪಾಪವೇ?, ರೂಢಿ ಮತ್ತಿತರ ಕತೆಗಳು, ಲಂಕೇಶ್- ಇಂತಿ ಕೆಲ ಪ್ರಶ್ನೆಗಳು (ವಿಮರ್ಶೆ), ಅರಸ ಯುಗ (ದೇವರಾಜ ಅರಸು ಜೀವನ ಚರಿತ್ರೆ), ಚಿತ್ರಕಥೆ- ಹಾಗೆಂದರೇನು? ಅಳುವವರೂ ಇಲ್ಲ (ದಲಿತ ರೈತ ಚಳವಳಿಗಳು: ಒಂದು ಮೆಲುಕು), ಹುಡುಕಾಟ (ಸಮಕಾಲೀನ ಬರಹಗಳು), ಉಸಾಬರಿ ಶಂಕರ್ ಅವರ ಕೆಲವು ಪುಸ್ತಕಗಳು. ರಾಮ ಕೃಷ್ಣ, ಮಾಂತರ ಯಾಕೆ? ಮತ್ತು ಬ್ರಾಹ್ಮಣಧರ್ಮದ ದ್ವಿಜಯ, ರಾಜಮೋಹನ ಗಾಂಧಿಯವರ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ (ಅಂಬೇಡ್ಕರ್ ಗಾಂಧಿ ವಾಗ್ವಾದ: ಒಂದು ಗ್ರಹಿಕೆ) ಶಂಕರ್ ಅನುವಾದಿಸಿರುವ ಅಂಬೇಡ್ಕರ್ ಅವರ ಬರಹಗಳು.

ಪ್ರಸಕ್ತ ಲೇಖನವನ್ನು ಶಂಕರ್ ಅವರ ‘ಉಸಾಬರಿ‘ (ಮತ್ತಷ್ಟು ಸಮಕಾಲೀನ ಬರಹಗಳು) ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. 2019  ರಲ್ಲಿ ಮೊದಲು ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಈ ಲೇಖನಗಳ ಸಂಗ್ರಹವನ್ನು  ಅಕ್ಷರ ಮಂಟಪ ಪ್ರಕಾಶನ ಪ್ರಕಟಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights