ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯು ರೈತ ವಿನಾಶಕಾರಿಯಾಗಿದೆ: ಕಾಂಗ್ರೆಸ್‌ ಆರೋಪ

ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗಳನ್ನು ತರಲು ಬಿಜೆಪಿ ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರವನ್ನು ಕರ್ನಾಟಕ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ. ತಿದ್ದುಪಡಿಯ ಮೂಲಕ ಅಲ್ಪ ಮತ್ತು ಸಣ್ಣ ಭೂ ಹಿಡುವಳಿದಾರರನ್ನು ಕೃಷಿ ಕಾರ್ಮಿಕರನ್ನಾಗಿಸುವ ವಿನಾಶಕಾರಿ ನೀತಿಯನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಸಭೆ ನಡೆಸಿದೆ. ಸಭೆಯಲ್ಲಿ, ಜಾರಿಯಲ್ಲಿರುವ ಶಾಸನಗಳಲ್ಲಿ 63 ಎ, 79 ಎ, ಬಿ ಮತ್ತು ಸಿ, ಮತ್ತು 80 ರ ವಿಭಾಗಗಳನ್ನು ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವು ಕೃಷಿ ಸಮುದಾಯದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಚರ್ಚಿಸಲಾಗಿದೆ. ಪ್ರಸ್ತಾಪಿಸಲಾಗಿರುವ ತಿದ್ದುಪಡಿಗಳು ಕೃಷಿಯೇತರ ಕಾರ್ಪೋರೇಟ್‌ಗಳು ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಡುವುದರ ಜೊತೆಗೆ, ರೈತರ ಭೂಮಾಲೀಕತ್ವವನ್ನು ಕಸಿದುಕೊಳ್ಳಲಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

Image

ಕೃಷಿ ಭೂಮಿಯನ್ನು ಖರೀದಿಸಲು ಆದಾಯ ಮಿತಿಯನ್ನು ನಿಗದಿಪಡಿಸುವ ಸೆಕ್ಷನ್ 79 ಎ, ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಖರೀದಿಸುವುದನ್ನು ನಿಷೇಧಿಸುವ 79 ಬಿ, ನಕಲಿ ಅಫಿಡವಿಟ್ ಸಲ್ಲಿಸಿದರೆ ದಂಡ ವಿಧಿಸುವ 79 ಸಿ, ಮತ್ತು ಕೃಷಿಕರಲ್ಲದವರಿಗೆ ಕೃಷಿ ಭೂಮಿಯ ವರ್ಗಾವಣೆಯನ್ನು ನಿಷೇಧಿಸುವ ಸೆಕ್ಷನ್ 80 ರನ್ನು ರದ್ದುಗೊಳಿಸುವ ಮೂಲಕ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

“ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್‌ ಅವರು ಎಲ್ಲಾ ರೈತರೂ ಭೂಮಿಯನ್ನು ಹೊಂದಿರಬೇಕು ಎಂದು ನಿಬಂಧನೆಗಳನ್ನು ಮಾಡಿದ್ದರು. ಆದರೆ ಈಗ ಬಿಜೆಪಿ ಸರ್ಕಾರವು ಉಳ್ಳವರು ಮಾತ್ರ ಭೂಮಿಯನ್ನು ಹೊಂದಿರಬೇಕೆಂದು ಬಯಸಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಈ ತಿದ್ದುಪಡಿಯು ಭೂ ಮಾಫಿಯಾ ಮತ್ತು ರಿಯಲ್‌ ಎಸ್ಟೇಟ್‌ ನಡೆಸುವವರು ಸಣ್ಣ ಮತ್ತು ಅತಿಸಣ್ಣ ರೈತರಿಂದ ಭೂಮಿಯನ್ನು ಕಸಿದುಕೊಂಡು ಭೂ ಬ್ಯಾಂಕು ಮತ್ತು ಆಸ್ತಿ ವ್ಯವಹಾರಗಳನ್ನಾಗಿಸಲು ಖರೀದಿಸಲು ದಾರಿ ಮಾಡಿಕೊಡುತ್ತದೆ” ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ರೈತರು ಮತ್ತು ಕೃಷಿ ಕಾರ್ಮಿಕರು ಜಮೀನುಗಳನ್ನು ಮಾರಾಟ ಮಾಡಿ, ನಂತರ ನಗರ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರಾಗಿ ಹಿಂಸೆ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದರು.ಪಕ್ಷದ ಮುಖಂಡರು ರೈತ ಸಮುದಾಯದೊಂದಿಗೆ ಸಮಾಲೋಚನೆ ನಡೆಸಬೇಕು. ಮುಂದಿನ ಕ್ರಮ ಮತ್ತು ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಎಂ.ಮಲ್ಲಿಕರ್ಜುನ್ ಖರ್ಗೆ, ದಿನೇಶ್ ಗುಂಡು ರಾವ್, ಕೆ.ಆರ್.ರಮೇಶ್ ಕುಮಾರ್ ಮತ್ತು ಇತರರು ಹಾಜರಿದ್ದರು.

“ವಿಧಾನಸಭೆಯ ಒಳಗೆ ಮತ್ತು ಹೊರಗೆ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ನಾವು ಈ ವಿಷಯವನ್ನು ಜನಸಾಮಾನ್ಯರಲ್ಲಿಗೆ ಕೊಂಡೊಯ್ಯುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಇದನ್ನು ಎಲ್ಲಾ ರೈತರಿಗೆ ವಿವರಿಸುತ್ತಾರೆ. @bjp4India ದ ಎಲ್ಲಾ ರೈತ ವಿರೋಧಿ ನೀತಿಗಳನ್ನು ನಾವು ಬಹಿರಂಗಪಡಿಸುತ್ತೇವೆ ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ 2015ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಿ, ಕೃಷಿಯೇತರ ಮೂಲಗಳಿಂದ ಕೃಷಿ ಭೂಮಿಯನ್ನು ಖರೀದಿಸಲು ಆದಾಯ ಮಿತಿಯನ್ನು 2 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಿತ್ತು. ಕೃಷಿ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ.

2015ರಲ್ಲಿ ಕಾಂಗ್ರೆಸ್‌ ಸರ್ಕಾರದ ಭೂ ಸುಧಾರಣಾ ತಿದ್ದುಪಡಿಯನ್ನು ವಿರೋಧ ಪಕ್ಷವಾಗಿದ್ದ ಬಿಜೆಪಿ ತಿದ್ದುಪಡಿಯ ಉದ್ದೇಶಗಳು ರೈತವಿರೋಧಿಯಾಗಿವೆ ಎಂದು ಮಸೂದೆಯನ್ನು ವಿರೋಧಿಸಿತ್ತು.  ಆದರೆ ಈಗ ಬಿಜೆಪಿ ಸರ್ಕಾರವೇ ರೈತ ಕತ್ತು ಹಿಸುಕುವಂತಹ ತಿದ್ದುಪಡಿಗಳನ್ನು ತರಲು ಮುಂದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights