ಕೊರೊನ ಸಾಂಕ್ರಾಮಿಕ ತೊಲಗಿಸುವುದಕ್ಕೆ ಸಾಮೂಹಿಕ ರಾಷ್ಟ್ರೀಯ ಪ್ರಯತ್ನ ಅವಶ್ಯಕ

ಪ್ರಪಂಚದ ಅತಿದೊಡ್ಡ ಲಾಕ್‍ಡೌನನ್ನು ಮತ್ತೆ ವಿಸ್ತರಿಸಲಾಗಿದೆ. ಅದು ಕೋವಿಡ್-19 ಹರಡುವುದನ್ನು ತಡೆಯಲು ಸಹಾಯ ಮಾಡಿದೆಯೇ ಎನ್ನುವುದು ನಿಜವಾಗಿ ನಮಗೆ ಗೊತ್ತಿಲ್ಲ. ನಾವು ಲಾಕ್‍ಡೌನ್ ಮಾಡದಿದ್ದಲ್ಲಿ ಈಗ ಇರುವ 8000ದಷ್ಟು ರೋಗಿಗಳಿಗೆ ಬದಲಾಗಿ ಏಪ್ರಿಲ್ 15ರ ಹೊತ್ತಿಗೆ 800,000 ಲಕ್ಷ ಸೋಂಕಿತರು ಇರುತ್ತಿದ್ದರು ಎನ್ನುತ್ತದೆ ಕೇಂದ್ರ ಸರ್ಕಾರ. ಈ ಊಹೆಗಳನ್ನು ಅವರು ಹೇಗೆ ಮಾಡಿದರು ಎನ್ನುವುದನ್ನು ನಮಗೆ ತಿಳಿಸಿಲ್ಲ. ಈ ಲಾಕ್‍ಡೌನ್ ಸಮರ್ಥಿಸಿಕೊಳ್ಳಲು ಅವುಗಳನ್ನು  ನಾಟಕೀಯ ರೀತಿಯಲ್ಲಿ ಜಾದೂ ಮಾಡಿ ನಮ್ಮ ಮುಂದಿಟ್ಟಿದ್ದಾರೆ. ಕೊನೆಗೆ ನಾವು ವೈರಸ್ಸನ್ನು ಹಿಮ್ಮೆಟ್ಟಿಸಿ ಗೆಲ್ಲುತ್ತೇವೆ ಆದರೆ ಹೇಗೆ ಮತ್ತು ಅದಕ್ಕೆ ನಾವು ತೆರುವ ಬೆಲೆ ಎಷ್ಟು? ಕೋವಿಡ್-19ರ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದಕ್ಕೆ ನಮ್ಮಲ್ಲಿ ಯಾವ ಸಿದ್ಧ ತಂತ್ರವೂ ಇಲ್ಲ. ತಪ್ಪುಗಳಾಗುತ್ತವೆ. ಆದರೆ ಸೋಲನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಾಗಬೇಕು ಮತ್ತು ಅವಶ್ಯಕವಾದಾಗ ನಮ್ಮ ತಂತ್ರವನ್ನು ಬದಲಿಸಿಕೊಳ್ಳುವುದಕ್ಕೂ ಆಗಬೇಕು.

ನಿಜವಾದ ಅರ್ಥದಲ್ಲಿ ರಾಷ್ಟ್ರಿಯ ಸರ್ಕಾರ ಎನ್ನುವುದೊಂದು ಸಾಧ್ಯವಿದೆ ಎಂದಾದರೆ ಅದು ಈ ಹೊತ್ತಿನಲ್ಲಿ. ನಾವೆಲ್ಲರೂ ಅದರಲ್ಲಿದ್ದೇವೆ. ಸ್ವಾತಂತ್ರ್ಯೋತ್ತರ ಕಾಲದ ಅತಿದೊಡ್ಡ ಬಿಕ್ಕಟ್ಟು ಎನ್ನಲಾಗುವ ಈ ಮಹಾಮಾರಿಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈಗ ಒಂದೇ ಮನಸ್ಸಿನಿಂದ ಕೆಲಸಮಾಡಬೇಕಿದೆ. ಇದು ರಾಜಕೀಯ ಲಾಭವನ್ನು ಮಾಡಿಕೊಳ್ಳಲು ಹೊರಡುವ ಕಾಲವಲ್ಲ. ಬದಲಾಗಿ ಪ್ರತಿಯೊಬ್ಬರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಈ ಅಪಾಯವನ್ನು  ಎದುರಿಸಲು ಬಯಸುವ ಕಾಲ. ಈ ಪ್ರಕ್ತಿಯೆಯನ್ನು ಆಳುವ ಪಕ್ಷವೇ ಆರಂಭಿಸಬೇಕು.

ಇಂಥದ್ದೊಂದು ರಾಷ್ಟ್ರೀಯ ಸರ್ಕಾರ ಭಾರತೀಯ ಜನತಾ ಪಾರ್ಟಿಗೆ ಒಪ್ಪಿಗೆ ಇಲ್ಲ ಅಂತಾದರೆ, ಆಗ ನಾವೆಲ್ಲರೂ ಒಟ್ಟಿಗೆ ಸೇರಿ ಒಂದು ಸಾಮೂಹಿಕ ಪ್ರಯತ್ನವನ್ನು ಮಾಡಬೇಕು. ನಾವೆಲ್ಲರೂ ನಮ್ಮ ಮನಸ್ಸಿನ ಬಾಗಿಲುಗಳನ್ನು ಎಷ್ಟು ವಿಶಾಲವಾಗಿ ತೆರೆದಿಡಲು ಸಾಧ್ಯವೋ ಅಷ್ಟು ವಿಶಾಲವಾಗಿ ತೆರೆದಿಟ್ಟುಕೊಂಡು ಅತ್ಯುತ್ತಮ ಮನಸ್ಸುಗಳು ಮತ್ತು ಪರಿಣತರು ನೀಡುವ ಸಲಹೆಗಳನ್ನು ತೋಳ್ತೆರೆದು ತಬ್ಬಬೇಕು. ಅವರು ಸರ್ಕಾರದ ಒಳಗಿನವರು ಅಥವಾ ಹೊರಗಿನವರು, ರಾಜಕೀಯ ಮಿತ್ರರು ಅಥವಾ ಶತ್ರುಗಳ ಹೀಗೆ ಯಾರು ಬೇಕಾದರೂ ಆಗಿರಲಿ.

ಎರಡನೆಯದಾಗಿ ಕೇಂದ್ರವು ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಮೊದಲು ರಾಜ್ಯ ಸರ್ಕಾರಗಳನ್ನು ಸಮಾನ ಪಾಲುದಾರರನ್ನಾಗಿ ಪರಿಗಣಿಸಲೇಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮಾನ ಪಾಲುದಾರಿಕೆ ನಿಜವಾಗಿಯೂ ಅತ್ಯಂತ ಫಲಪ್ರದವಾದ ಪ್ರಯತ್ನವಾಗಬಲ್ಲದು. ಕೋವಿಡ್-19ರ ಭೀಕರತೆಯನ್ನು ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕಿಂತ ತುಂಬಾ ಮೊದಲೇ ಅರಿತು, ಅದನ್ನೆದುರಿಸಲು ಆರಂಭಿಸಿದವು. ರಾಜ್ಯಗಳಿಗೆ ಕೇಂದ್ರದಿಂದ ಕಲಿಯುವುದಕ್ಕೆ ಏನೂ ಇಲ್ಲ. ಆದರೆ ರಾಜ್ಯಗಳಿಂದ ಕೇಂದ್ರ ಕಲಿಯಬೇಕಾದ್ದು ಮತ್ತು ರಾಜ್ಯಗಳು ಪರಸ್ಪರ ಒಬ್ಬರಿಂದ ಇನ್ನೊಬ್ಬರು ಕಲಿಯಬೇಕಾದ್ದು ತುಂಬಾ ಇದೆ. ಪ್ರಧಾನ ಮಂತ್ರಿಗಳು ಮೂರು ವಾರಗಳ ಲಾಕ್‍ಡೌನ್ ಹೇರುವಿಕೆಯನ್ನು ಏಕಪಕ್ಷೀಯವಾಗಿ ನಿರ್ಧರಿಸಿದರು. ಆದರೆ ಈಗ ಹೇಳುತ್ತಿದ್ದಾರೆ ರಾಜ್ಯಗಳೇ ಲಾಕ್‍ಡೌನನ್ನು ಮುಂದುವರಿಸ ಬಯಸುತ್ತಿವೆ ಎಂದು. ಹಾಗಾದರೆ ಈಗ ಈ ತಂತ್ರ ಯಶಸ್ವಿಯಾಗದಿದ್ದಲ್ಲಿ ರಾಜ್ಯಗಳು ಅದರ ಹೊಣೆಯನ್ನು ಹೊರಬೇಕೇ?

ಕೇಂದ್ರೀಕರಣವನ್ನು ತಿರಸ್ಕರಿಸಬೇಕು

ಮೂರನೆಯದಾಗಿ, ಇಡೀ ದೇಶ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಧಾನಮಂತ್ರಿಗಳ ಕಚೇರಿಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿಕೊಳ್ಳುವುದು ತುಂಬಾ ತಪ್ಪು. ಈವರಗೆ ಎಲ್ಲವೂ ಪ್ರಧಾನಮಂತ್ರಿ ಕೇಂದ್ರಿತವಾಗಿಯೇ ಇದೆ. ಪ್ರಧಾನಮಂತ್ರಿಗಳಿಗೆ ಬೆಂಬಲ ವ್ಯಕ್ತಪಡಿಸುತ್ತಾ ಟ್ವೀಟ್ ಮಾಡುವುದೇ ಕ್ಯಾಬಿನೆಟ್ಟಿನ ಮುಖ್ಯ ಉದ್ಯೋಗವಾಗಿದೆ. ಆರೋಗ್ಯಮಂತ್ರಿಗಳು ಎಲ್ಲೋ ಅದೃಶ್ಯರಾಗಿಬಿಟ್ಟಿದ್ದಾರೆ. ಕೆಲವು ಆಯ್ದ ಅಧಿಕಾರಿಗಳು ಎಲ್ಲಾ ಪ್ರಮುಖ ತೀರ್ಮಾನಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಪ್ರತಿಕ್ರಿಯೆಗಳನ್ನು ನಿರ್ದೇಶಿಸುತ್ತಿದ್ದಾರೆ. ಇದು ಹೀಗಾಗಬಾರದು.

ನಾಲ್ಕನೆಯದಾಗಿ, ಇಂತಹ ಭಾರಿ ಘಟನೆಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸ್ವಲ್ಪ ಮುಂದಾಲೋಚನೆ ಇರಬೇಕು. ಲಾಕ್‍ಡೌನ್ ಹೇರುವ ಮೊದಲೇ ನಾವು ಬದುಕು ಮತ್ತು ಆರ್ಥಿಕತೆ ಎರಡೂ ಮುಖ್ಯವೆಂದು ಯೋಚಿಸಬೇಕಿತ್ತು, ಮೂರು ವಾರದ ನಂತರವಲ್ಲ. ನಾವು ಲಾಕ್‍ಡೌನ್ ಎನ್ನುವುದನ್ನು ಭೀತಿಯಿಂದ ಜಾರಿಗೊಳಿಸಿದ್ದೇವೆ, ಅಥವಾ ಒಂದು ಕರ್ಫೂ ಎಂದು ಹೇರಿದ್ದೇವೆ ಎನ್ನುವ ಸಂದೇಶವನ್ನು ಜನತೆಗೆ ಕಳುಹಿಸಬಾರದಿತ್ತು. ಬದಲಾಗಿ ಇದೊಂದು ತೀರಾ ಕಷ್ಟದ ತೀರ್ಮಾನ ಆದರೆ ಸರ್ಕಾರ ಉದ್ದಕ್ಕೂ ಜನರ ಜೊತೆಗೆ ಇರುತ್ತದೆ ಎನ್ನುವ ಸಂದೇಶವನ್ನು ಕಳುಹಿಸಬೇಕಿತ್ತು. ಲಾಕ್‍ಡೌನ್ ಸಂದರ್ಭದಲ್ಲಿ ವಲಸಿಗರನ್ನು ಪೊರೆಯುತ್ತೇವೆ ಎಂಬ ಭರವಸೆಯನ್ನು ಮೊದಲು ನೀಡದೇ ಇದ್ದದ್ದು ಒಂದು ಕ್ರೌರ್ಯ. ನಂತರದಲ್ಲಿ ಆ ತಪ್ಪನ್ನು ಬೇಗ ತಿದ್ದಿಕೊಂಡು ಬೇಕಾದ್ದನ್ನು ಮಾಡದಿದ್ದುದು ಇನ್ನೂ ಹೆಚ್ಚಿನ ಕ್ರೌರ್ಯ.

ಅನುದಾನದ ಹೊಳೆ ಹರಿಸಿ

ಐದನೆಯದಾಗಿ, ಯಾವುದೇ ಆರ್ಥಿಕ ಚಟುವಟಿಯಲ್ಲಿಯೂ ತೊಡಗದಂತೆ ನಿರ್ಬಂಧಕ್ಕೆ ಸಿಲುಕಿ, ಅತ್ಯಂತ ಭೀಕರ ಪರಿಣಾಮಗಳನ್ನು ಎದುರಿಸುತ್ತಿರುವ ಕೋಟ್ಯಂತರ ಜನಗಳೊಡನೆ ನಾವು ಇನ್ನೂ ತುಂಬಾ ಉದಾರವಾಗಿ ವರ್ತಿಸಬಹುದಿತ್ತು. ಹಾಗಿದ್ದಾಗ್ಯೂ ಕೇಂದ್ರವು ಪರಿಹಾರ ಕಾರ್ಯಕ್ರಮಗಳಲ್ಲಿ ಅದೆಂತಹ ಜಿಪುಣತನ ತೋರುತ್ತಿದೆ ಎನ್ನುವುದು ಅಚ್ಚರಿ ಹುಟ್ಟಿಸುತ್ತಿದೆ. ಆರೋಗ್ಯ ಸೇವೆಗಳಿಗೆ ಮತ್ತು ವ್ಯಾಪಕಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕೇಂದ್ರವು ರಾಜ್ಯಗಳಿಗೆ ಇನ್ನೂ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಬೇಕಿತ್ತು. ಆದರೆ ಈ ಕ್ಷಣಕ್ಕೂ ಕೇಂದ್ರವು ಜಿಎಸ್‍ಟಿ ಆದಾಯದಲ್ಲಿ ರಾಜ್ಯಗಳಿಗೆ ಸಲ್ಲಬೇಕಾಗಿರುವ ಪಾಲನ್ನು ನೀಡಲು ತಿರಸ್ಕರಿಸುತ್ತಿದೆ ಎನ್ನುವುದನ್ನು ನಂಬಲಿಕ್ಕೇ ಆಗುವುದಿಲ್ಲ. ಈಗ ತೀವ್ರವಾಗಿ ಕಾಡುತ್ತಿರುವ ಹತಾಶೆಯನ್ನು ಹೇಗೆ ಪರಿಹರಿಸಬೇಕು, ಸರಬರಾಜಿನ ತೊಂದರೆಗಳನ್ನು ಹೇಗೆ ಸರಿಪಡಿಸಬೇಕು, ಈಗ ಏನು ಮಾಡಬೇಕಿದೆಯೋ ಅದಕ್ಕೆ ಈಗ ಮತ್ತು ಭವಿಷ್ಯದಲ್ಲಿ ಯಾವ ರೀತಿಯಲ್ಲಿ ಅನುದಾನವನ್ನು ಒದಗಿಸಬೇಕು ಎನ್ನುವುದಕ್ಕೆ ಹಲವು ಸಲಹೆಗಳಿವೆ. ಕೇಂದ್ರ ಸರ್ಕಾರದ ಮನಸ್ಸು ಮುಕ್ತವಾಗಿಬೇಕು ಅಷ್ಟೆ.

ಆರನೆಯದಾಗಿ ಜನರಲ್ಲಿರುವ ಅನಿಶ್ಚಿತತೆ ಮತ್ತು ಹೆದರಿಕೆಯನ್ನು ಕಡಿಮೆ ಮಾಡಲು ಏನೇನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವುದರ ಬಗ್ಗೆ ದಿನನಿತ್ಯವೂ ತಪ್ಪದೇ ಜನರಿಗೆ ತಿಳಿಸುತ್ತಾ ಇರಬೇಕು. ಆಗ ಜನ ಏನೇನು ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದರ ಸೂಕ್ಷ್ಮ ಅರಿವು ಕೇಂದ್ರಕ್ಕೆ ಇದೆ ಎನ್ನುವುದು ಜನರಿಗೆ ಅರಿವಾಗುತ್ತದೆ. ಪತ್ರಿಕೆಗಳ ಬಗ್ಗೆ ಕೇಂದ್ರವು ತನಗಿರುವ ದ್ವೇಷವನ್ನು ಬಿಟ್ಟಾಗ ಮಾತ್ರ ಇದನ್ನು ಮಾಡುವುದಕ್ಕೆ ಕೇಂದ್ರಕ್ಕೆ ಸಾಧ್ಯವಾಗುತ್ತದೆ. ಈಗ ಮಧ್ಯಮ ದರ್ಜೆಯ ಅಧಿಕಾರಿಗಳು ಜನರನ್ನು ತಬ್ಬಿಬ್ಬುಗೊಳಿಸುತ್ತಿದ್ದಾರೆ. ಹಾಗೆ ಮಾಡಿದರೆ ಜನರಲ್ಲಿ ಆ ಭಾವವನ್ನು ಮೂಡಿಸಲಾಗುವುದಿಲ್ಲ.  ಹೀಗಿದ್ದಾಗ್ಯೂ ಕೇಂದ್ರವು ಸುಪ್ರೀಂ ಕೋರ್ಟಿನ ಮೊರೆಹೊಕ್ಕು, ಕೋವಿಡ್-19ರ ಮಾಹಿತಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬೇಕೆಂದು ಕೇಳಿಕೊಂಡಿತು. ಕೇಂದ್ರದ ಈ ಧೋರಣೆಯನ್ನು ಕೇರಳದ ಮುಖ್ಯ ಮಂತ್ರಿಗಳ ಧೋರಣೆಯೊಂದಿಗೆ ಹೋಲಿಸಿ ನೋಡಿ. ಪ್ರತಿದಿನವೂ ಪತ್ರಿಕೆಗಳಿಗೆ ನೀಡುತ್ತಿರುವ ವಿವರಗಳಿಂದ ರಾಜ್ಯ ಸರ್ಕಾರವು ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವುದರ ಬಗ್ಗೆ ಜನರಲ್ಲಿ ಗಂಭೀರವಾದ ನಂಬಿಕೆ ಮೂಡಿದೆ. ಎಷ್ಟರ ಮಟ್ಟಿಗೆ ಎಂದರೆ, ಈಗ ಅಲ್ಲಿನ ಪ್ರಜೆಗಳಲ್ಲಿ ಹೆದರಿಕೆ ಸಂಪೂರ್ಣ ಮರೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಈ ಮೊದಲು ರಾಜ್ಯದಲ್ಲಿ ಧ್ರುವೀಕರಣ ಉಂಟುಮಾಡುತ್ತಾರೆ ಎಂದು ಟೀಕಿಸಲಾಗುತ್ತಿದ್ದ ಮುಖ್ಯಮಂತ್ರಿ ಇಂದು ಈ ಬಿಕ್ಕಟ್ಟಿನ ಹೊತ್ತಿನಲ್ಲಿ ರಾಜ್ಯದಲ್ಲಿ ಐಕಮತ್ಯವನ್ನು ಉಂಟುಮಾಡಿದ್ದಾರೆ. ಈಗ ಅವರನ್ನು ಎಲ್ಲರೂ ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

ಸಾಮಾಜಿಕ ಉದ್ವಿಗ್ನತೆಗಳನ್ನು ನಿಗ್ರಹಿಸಬೇಕು

ಏಳನೆಯದಾಗಿ, ಇಂತಹ ಹೊತ್ತಿನಲ್ಲಿ ಸಾಮಾಜಿಕ ಉದ್ವಿಗ್ನತೆಗಳನ್ನು ಹೆಚ್ಚಿಸುವುದರಲ್ಲಿ ಇಡೀ ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷ ಸ್ಥಾನವಿದೆ. ದೆಹಲಿಯ ತಬ್ಲಿಘೀ ಜಮಾತ್ ಕೂಟದ ಹೆಚ್ಚಿನ ಸದಸ್ಯರು ಸೋಂಕಿಗೆ ಒಳಗಾದರು ಎನ್ನುವುದು ತಿಳಿದ ಕೂಡಲೆ ಟಿ. ವಿ. ಛಾನಲ್ಲುಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರತರವಾದ ಇಸ್ಲಾಮೋಫೋಭಿಯ ಹರಿದಾಡಿತು. ಮುಸ್ಲಿಂ ಸಮುದಾಯ ಕರೋನಾ ಜಿಹಾದ್ ನಡೆಸುತ್ತಿದೆ ಎಂದು ಆಪಾದಿಲಾಯಿತು. ಇದರ ಪರಿಣಾಮವೆಂದರೆ ದೇಶದ ಹಲವು ಭಾಗಗಳಲ್ಲಿ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಲಾಯಿತು ಮತ್ತು ದ್ವೇಷವನ್ನು ಯಾವುದೇ ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಲಾಯಿತು. ಈ ಪ್ರವೃತ್ತಿಯ ವಿರುದ್ಧ ಬಲವಾಗಿ ದನಿಯೆತ್ತಲು ಒಂದು ವೇಳೆ ಬಿಜೆಪಿ ನಾಯಕತ್ವವು ತನ್ನ ಅಗಾಧ ರಾಜಕೀಯ ಅಧಿಕಾರವನ್ನು ಬಳಸಿಕೊಂಡಿದ್ದಲ್ಲಿ ದೊಂಬಿಪ್ರೇರಕರು ಈ ನಾಯಕರ ಹಾದಿಯಲ್ಲಿಯೇ ಸಾಗುತ್ತಿದ್ದರು.  ಆದರೆ ಸರ್ಕಾರದ ಮೌನ, ಮುಂದೇನಾಗುತ್ತದೋ ಎಂದು ನಮ್ಮಲ್ಲಿ ಹೆದರಿಕೆ ಹುಟ್ಟಿಸುತ್ತಿದೆ,

ಎಂಟನೆಯದಾಗಿ ಈಗ ಕೋವಿಡ್-19ರ ಹರಡುವಿಕೆಯನ್ನು ನಿಧಾನಗೊಳಿಸಲು ನಾವು ಆರಿಸಿಕೊಂಡಿರುವುದು ಲಾಕ್‍ಡೌನ್ ಮತ್ತು ನಿಯಂತ್ರಣ. ಇದರಿಂದ ಇನ್ನು ಮುಂದೆಯೂ ಲಾಕ್‍ಡೌನ್‍ಗಳನ್ನು (ಸಣ್ಣ ಅವಧಿಯದೇ ಆಗಿರಬಹುದು) ಮಾಡುತ್ತಲೇ ಇರಬೇಕಾಗುತ್ತದೆ. ಅಭಿವೃದ್ಧಿ ಹೊಂದಿರುವ ಆರ್ಥಿಕತೆಗಳಲ್ಲಿ ಸಂಘಟಿತ ಆರ್ಥಿಕತೆ ಒಟ್ಟು ವ್ಯವಸ್ಥೆಯ ಒಂದು ಲಕ್ಷಣ. ಅಲ್ಲಿ ಲಾಕ್‍ಡೌನನ್ನು ವಿಸ್ತರಿಸುವುದಕ್ಕೆ ಅರ್ಥವಿದೆ. ಆದರೆ ಜೀವನೋಪಾಯಕ್ಕೆ ದಿನದಿನದ ದುಡಿಮೆಯನ್ನೇ ಅವಲಂಬಿಸಿರುವ ಮತ್ತು ಸಾಮಾಜಿಕ ಸುರಕ್ಷತೆಯೇ ಇಲ್ಲದಿರುವ ಭಾರತದಂತಹ ದೇಶದ ಕಥೆ ಏನು? ಜೀವನೋಪಾಯದ ಮಾರ್ಗಗಳ ಮೇಲೆ ಇಂತಹ ಹೊಡೆತವನ್ನು ನಮ್ಮ ಸಾಮಾಜಿಕ ವ್ಯವಸ್ಥೆ ತಡೆದುಕೊಳ್ಳಬಲ್ಲುದೇ? ಈಗ ನಾವು ನೀಡುತ್ತಿರುವ ಪರಿಹಾರಗಳು ಖಾಯಿಲೆಗಿಂತಲೂ ಭಯಂಕರವಾಗಿಲ್ಲವೇ? ಬೇರೆ ಪರ್ಯಾಯಗಳನ್ನು ಕುರಿತು ಚಿಂತಿಸಲು ಪ್ರಾರಂಭಿಸಬೇಕಲ್ಲವೇ?

ಮರುನಿರ್ಮಾಣಕ್ಕಾಗಿ ಒಂದಾಗೋಣ

ಆರ್ಥಿಕತೆಯನ್ನು ಆಫ್ ಮತ್ತು ಆನ್ ಅದುಮುಗುಂಡಿಗಳ ಮೂಲಕ ನಡೆಸುವುದಕ್ಕೆ ಸಾಧ್ಯವಿಲ್ಲ. ಒಂದು ಆರ್ಥಿಕ ವ್ಯವಸ್ಥೆಯನ್ನು ಮತ್ತೆ ನಿರ್ಮಿಸುವುದು, ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗಂಭೀರ ಸ್ವರೂಪದ ಹಾನಿಗೊಳಗಾಗಿರುವ ಬದುಕುಗಳನ್ನು ಕಾಪಾಡುವುದು ತುಂಬಾ ದೀರ್ಘವಾದ ಮತ್ತು ಕಠಿಣತರವಾದ ಪ್ರಕ್ರಿಯೆ. ಹಾಗಾಗಿಯೇ ಮರುನಿರ್ಮಿಸಬೇಕಾದರೆ ಒಂದು ರಾಷ್ಟ್ರೀಯ ಸಾಮೂಹಿಕ ಪ್ರಯತ್ನದ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಒಳ್ಳೆಯ ಪಾತ್ರೆಪಡಗಗಳನ್ನು ಬಳಸುತ್ತಾ, ಒಳ್ಳೆಯ ದೀಪಗಳ ಬೆಳಕಿನಲ್ಲಿ ಜೀವಿಸುತ್ತಿರುವ ನಮ್ಮಂತಹ ಉಳ್ಳವರ ಜೀವಗಳನ್ನು ಉಳಿಸಲು ಕೋಟ್ಯಾಂತರ ಜನರ ದಿನದ ಆದಾಯವನ್ನೇ ಬಲಿಕೊಡಬೇಕೇ?

ಕೊರೋನಾ ವೈರಸ್ ಕೇಸುಗಳು ವೇಗವಾಗಿ ಹೆಚ್ಚುತ್ತಿದೆ – ಸರ್ಕಾರ

ದೇಶದ ಉದ್ದಗಲಕ್ಕೂ ವೈದ್ಯರು, ಪ್ಯಾರಾ ಮೆಡಿಕಲ್, ನೋಂದಾಯಿತ ಆರೋಗ್ಯ ಕಾರ್ಯಕರ್ತರು ಅಥವಾ ಆಶಾ ಕಾರ್ಯಕರ್ತರು ದಣಿವರಿಯದೆ ಕಾರ್ಯೋನ್ಮುಖರಾಗಿದ್ದಾರೆ. ಕೋವಿಡ್-19ರ ವಾರ್ಡುಗಳಲ್ಲಿ ಕೆಲಸ ಮಾಡಲು ಯುವ ಡಾಕ್ಟರುಗಳನ್ನು ಕಳುಹಿಸಿದ್ದಾರೆ. ಕೋರೋನಾ ಸೋಂಕನ್ನು ಪತ್ತೆಹಚ್ಚಿ, ತಡೆಗಟ್ಟಲು ರಾಜ್ಯದ ಅಧಿಕಾರಿಗಳು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೇರಳದಲ್ಲಿ ಕೋವಿಡ್‍ಪೀಡಿತ ವೃದ್ಧದಂಪತಿಗಳ ಆರೈಕೆಯಲ್ಲಿ ತೊಡಗಿದ್ದ ದಾದಿ, ಸ್ವತಃ ಕೋವಿಡ್‍ಗೆ ಸೋಂಕಿಗೆ ಒಳಗಾಗಿ ಈಗ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಲು ತುದಿಗಾಲಿನಲ್ಲಿ ನಿಂತಿದ್ದಾಳೆ. ಅಂತಹ ಹಲವು ನಾಯಕಿಯರು ಇಂದು ನಮ್ಮ ಕಣ್ಮುಂದೆ ಇದ್ದಾರೆ. ಆದರೆ ಉಳಿದಂತೆ ನಾವೆಲ್ಲರೂ ಯಾವ ರೀತಿಯಲ್ಲಿ ಸ್ಪಂದಿಸಿದ್ದೀವಿ ಎನ್ನುವುದನ್ನು ಗಮನಿಸಿದರೆ ಮಾನವೀಯತೆ ಸೋತುಹೋಗಿದೆ ಎನ್ನುವುದು ಎದ್ದು ಕಾಣುತ್ತದೆ. ಆದರೆ ರಾಜಕೀಯ ನಾಯಕತ್ವ ಒಂದು ಯುಕ್ತವಾದ ದಾರಿ ತೋರಿದರೆ ಮತ್ತೆ ನಾವು ಮಾನವೀಯತೆಯನ್ನು ಪುನಶ್ಚೇತನಗೊಳಿಸಬಹುದು.

ಪ್ರಚಾರ ವ್ಯವಸ್ಥೆಯು ನಾವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದೀವಿ ಎಂದು ಹೇಳುತ್ತಿದೆ. ಆದರೆ ಆ ಮಾತುಗಳಿಂದ ನಾವು ಮೋಸ ಹೋಗಬಾರದು. ರಾಜ್ಯ ಸರ್ಕಾರಗಳ ಪ್ರಯತ್ನಗಳು ಇಲ್ಲದೇ ಹೋಗಿದ್ದಲ್ಲಿ ಮಾನವಲೋಕಕ್ಕೆ ಅಪ್ಪಳಿಸಿರುವ ಈ ವಿಪತ್ತು ಇನ್ನಷ್ಟು ಕೆಟ್ಟದಾಗಿರುತ್ತಿತ್ತು. ನಾವು ಬಯಸಿದಲ್ಲಿ ಈಗಲೂ ಈ ಬಿಕ್ಕಟ್ಟಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬಹುದು. ಆದರೆ ಅದಕ್ಕೆ ಸರ್ಕಾರದ ಎಲ್ಲಾ ಹಂತಗಳಲ್ಲಿ ಮತ್ತು ಸಮಾಜದ ಎಲ್ಲಾ ವರ್ಗಗಳಲ್ಲಿ ಒಂದು ನೈಜವಾದ ಸಾಮೂಹಿಕ ಪ್ರಯತ್ನವನ್ನು ಆಗುಮಾಡುವಂತಹ ಒಂದು ವಿಶಾಲವಾದ ರಾಜಕೀಯ ಕಾಣ್ಕೆ ನಮಗೆ ಬೇಕು.

  • (ಕೃಪೆ): ದ ಹಿಂದು
  • (ಮೂಲ): ಸಿ ರಾಮಮನೋಹರ್ ರೆಡ್ಡಿ
  • (ಅನುವಾದ): ಶೈಲಜ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights