ಸಚಿನ್ ಪೈಲಟ್‌ ಕಾಂಗ್ರೆಸ್‌ಗೆ ವಾಪಸ್‌? ಬಿಜೆಪಿಗಿಲ್ಲ ಅಧಿಕಾರದ ಅವಕಾಶ!

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದು, ಸರ್ಕಾರವನ್ನು ಉರುಳಿಸಲು ಮುಂಗಿದ್ದ ಸಚಿನ್ ಪೈಲಟ್ ಮತ್ತೆ ಕಾಂಗ್ರೆಸ್‌ಗೆ ವಾಪಸ್ಸಾಗುವ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಜಸ್ಥಾನ ಅಧಿವೇಶನಕ್ಕೆ ಮುಂಚಿತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಚರ್ಚೆ ನಡೆಸಲು ಸಚಿನ್ ಪೈಲಟ್ ಸಮಯ ಕೇಳಿರುವುದಾಗಿ ತಿಳಿದು ಬಂದಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ, ಬಿಜೆಪಿ ಅಧಿಕಾರಕ್ಕೆ ತಂದು ಆ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಯತ್ನಿಸಿದ್ದ ಸಚಿನ್ ಪೈಲಟ್‌, ಅದಕ್ಕಾಗಿ ತನ್ನ ಪಾಳಯದ ಕಾಂಗ್ರೆಸ್‌ನ 18 ಬಂಡಾಯ ಶಾಸಕರ ಜೊತೆಗೆ ಬಿಜೆಪಿ ಸೇರುವ ತವಕದಲ್ಲಿದ್ದರು. ಆದರೆ,  ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲು ಹೈಕಮಾಂಡ್ ನಾಯಕರ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ರಾಜಸ್ಥಾನದ ಅಧಿವೇಶನಕ್ಕೆ ಮುನ್ನ ಆಗಸ್ಟ್ 14ರಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಸಚಿನ್ ಪೈಲಟ್ ಸಮಯಾವಕಾಶ ಕೇಳಿದ್ದಾರೆ. ರಾಹುಲ್ ಗಾಂಧಿ ಈ ಭೇಟಿಗೆ ಇನ್ನೂ ಸಮಯವನ್ನು ನಿಗದಿಪಡಿಸಿಲ್ಲ. ಆದರೆ, ಆಗಸ್ಟ್ 14ರಂದು ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್ ಭೇಟಿ ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಡಿಸಿಎಂ ಹುದ್ದೆಯಿಂದ ಸಚಿನ್ ಪೈಲಟ್ ಅವರನ್ನು ವಜಾ ಮಾಡಿದ ನಂತರವೂ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಅವರ ಸಂಪರ್ಕ ಸಾಧಿಸಲು ವಿಫಲ ಯತ್ನ ಮಾಡಿದ್ದರು. ಆದರೆ, ಕಾಂಗ್ರೆಸ್ ಹಿರಿಯ ನಾಯಕರಾದ ಪಿ. ಚಿದಂಬರಂ ಮತ್ತು ಕೆ.ಸಿ. ವೇಣುಗೋಪಾಲ್ ಮಾತ್ರ ಸಚಿನ್ ಪೈಲಟ್ ಜೊತೆಗೆ ಮಾತುಕತೆ ನಡೆಸಿದ್ದರು. ಅಲ್ಲದೆ, ನಿರಂತರ ಸಂಪರ್ಕದಲ್ಲಿದ್ದರು. ಆ ಮೂಲಕ ಈ ರಾಜೀ ಸಂಧಾನಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಂಡಾಯ ಆರಂಭವಾಗಿ ಸಚಿನ್ ಪೈಲಟ್ ಒಂದು ಹೆಜ್ಜೆಯನ್ನು ಹೊರಗಿಟ್ಟಾಗಿನಿಂದ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಎಲ್ಲಾ ನಾಯಕರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಸಚಿನ್ ಪೈಲಟ್ ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆ ಮಾಡಿಕೊಂಡರೂ ಸಹ ಉಳಿದ 18 ಬಂಡಾಯ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂಬುದು ಉಳಿದ ಎಲ್ಲಾ ಕಾಂಗ್ರೆಸ್ ಶಾಸಕರು ಒತ್ತಾಯ.
ಆದರೆ, ಮುಂದಿನ ವಾರ ನಡೆಯಲಿರುವ ರಾಜಸ್ಥಾನ ಅಧಿವೇಶನದಲ್ಲಿ ಎಲ್ಲಾ ಬಂಡಾಯ ಶಾಸಕರೂ ಕಾಂಗ್ರೆಸ್ ಸರ್ಕಾರದ ಪರ ಮತ ಚಲಾಯಿಸಿದರೆ ಎಲ್ಲರನ್ನೂ ಕ್ಷಮಿಸಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಘುವೀರ್ ಮೀನಾ ಈಗಾಗಲೇ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲವು ಬಂಡಾಯ ಶಾಸಕರೊಂದಿಗೆ ರಾಜಸ್ಥಾನ ಕಾಂಗ್ರೆಸ್ ನಾಯಕರು ಈಗಾಗಲೇ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಸಚಿನ್ ಪೈಲಟ್ ಅವರ ಮುಂದಿನ ಯೋಜನೆಗಳು ಏನು? ಎಂಬುದು ಸೋಮವಾರ ರಾತ್ರಿಯ ಒಳಗಾಗಿ ಸ್ಪಷ್ಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿರಾಜಸ್ಥಾನದಲ್ಲಿ ಬಿಜೆಪಿಗೆ ಬಿಕ್ಕಟ್ಟು; ಬಿಜೆಪಿ ಶಾಸಕರು ಗುಜರಾತ್‌ ರೆಸಾರ್ಟ್‌ಗೆ ಶಿಫ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights