FACT CHECK | 2008ರ ಮುಂಬೈ ದಾಳಿಯ ನಂತರ ಪಾಕಿಸ್ತಾನಕ್ಕೆ ಸುಮೋ ವಾಹನಗಳನ್ನು ಮಾರಾಟ ಮಾಡಲ್ಲ ಅಂದಿದ್ರಾ ರತನ್ ಟಾಟಾ ?

2008 ರ 26/11  ಮುಂಬೈ ಭಯೋತ್ಪಾದನಾ ದಾಳಿಯ ನಂತರ ರತನ್ ಟಾಟಾ ಅವರು ಪಾಕಿಸ್ತಾನಕ್ಕೆ ಟಾಟಾ ಸುಮೋಗಳನ್ನು ಮಾರಾಟ ಮಾಡಲು ನಿರಾಕರಿಸಿದರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ಅನ್ನು ಹಂಚಿಕೊಳ್ಳುವ ಮೂಲಕ ರತನ್ ಟಾಟಾರವರ ದೇಶ ಭಕ್ತಿ ಕುರಿತು ನಾನಾ ಕಥೆಗಳನ್ನು ಕಟ್ಟಲಾಗುತ್ತಿದೆ.

26/11 ದಾಳಿಯ ನಂತರ ತಾಜ್ ಗ್ರೂಪ್ ತಾಜ್ ಹೋಟೆಲ್‌ಗಳನ್ನು ಪುನರ್‌ನಿರ್ಮಿಸಲು ಟೆಂಡರ್‌ ನೀಡಿದಾಗ ಪಾಕಿಸ್ತಾನದ ಕಂಪನಿಗಳು ಸಹ ಅದಕ್ಕೆ ಬಿಡ್ ಮಾಡಿದ್ದವು. ಪಾಕಿಸ್ತಾನದ ಕೈಗಾರಿಕೋದ್ಯಮಿಗಳು ತಮ್ಮ ಪ್ರಯತ್ನವನ್ನು ಬಲಪಡಿಸಿಕೊಳ್ಳಲು ಸಚಿವ ಆನಂದ್ ಶರ್ಮಾರವರ ಮೂಲಕ ರತನ್ ಟಾಟಾ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆನಂದ್ ಶರ್ಮಾರವರು ರತನ್ ಟಾಟಾರವರಿಗೆ ಕರೆ ಮಾಡಿ ತಮ್ಮ ಟೆಂಡರ್‌ನ್ನು ಪರಿಗಣಿಸುವಂತೆ ಮನವಿ ಮಾಡಿಕೊಂಡಾಗ, ರತನ್ ಟಾಟಾ “ನೀವು ನಾಚಿಕೆಯಿಲ್ಲದವರು, ನಾನು ಅಲ್ಲ” ಎಂದು ಹೇಳಿ ಕರೆಯನ್ನು ಕಟ್ ಮಾಡಿದ್ದರು ಎಂಬ ಬರಹದೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಟಾಟಾ ಮೋಟಾರ್ಸ್ 2019ರಲ್ಲಿ ತನ್ನ ಎಕ್ಟ್‌ ಖಾತೆ ಮೂಲಕ ಟ್ವೀಟ್‌ವೊಂದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್‌ಅನ್ನು ಹಂಚಿಕೊಂಡಿದೆ.

2019ರ ಅಕ್ಟೋಬರ್ 26ರಂದು ಟಾಟಾ ಮೋಟಾರ್ಸ್ ಪಾಕಿಸ್ತಾನಕ್ಕೆ ವಾಹನಗಳನ್ನು ರಫ್ತು ಮಾಡದಿರಲು ನಿಜವಾದ ಕಾರಣವನ್ನು ನೀಡಿದೆ. ಆ ದೇಶದ ನೀತಿಯು ಆಮದು ಮಾಡಿಕೊಳ್ಳಲು ಭಾರತದ ವಾಹನಗಳು ಋಣಾತ್ಮಕ ಪಟ್ಟಿಯಲ್ಲಿವೆ ಎಂದು ಹೇಳಿದೆ. 2013 ರಲ್ಲಿ ‘ಟಾಟಾ ಮೋಟಾರ್ಸ್’ ತಮ್ಮ ‘ಎಕ್ಸ್’ ಖಾತೆಯಲ್ಲಿ ಅದೇ ವಿಷಯವನ್ನು ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ನಿಯಮಗಳ ಪ್ರಕಾರ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳು ‘ನಿರ್ಬಂಧಿತ ಪಟ್ಟಿ’ಯಲ್ಲಿವೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ಪಾಕಿಸ್ತಾನ ಟಾಟಾ ಸುಮೋ ವಾಹನಗಳನ್ನು ಖರೀದಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಾಸ್ತವವೆಂದರೆ ರತನ್ ಟಾಟಾ ಅವರು ಅಂತಹ ನಿರಾಕರಣೆ ಮಾಡಿದ್ದಾರೆ ಎಂಬ ಸಮರ್ಥನೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಈ ನಿರೂಪಣೆ ಸುಳ್ಳು ಎಂದು ವಿವಿಧ ಸುದ್ದಿ ಮೂಲಗಳು ಖಚಿತಪಡಿಸುತ್ತವೆ. ಅಲ್ಲದೆ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ 2013ರಿಂದ ಸಾಮಾಜಿಕ ಮಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟಾಟಾ ಮೋಟಾರ್ಸ್‌ ಪಾಕಿಸ್ತಾನಕ್ಕೆ ಟಾಟಾ ಸುಮೋಗಳನ್ನು ಮಾರಾಟ ಮಾಡದಿರಲು 2008 ರ ಮುಂಬೈ ಭಯೋತ್ಪಾದಕ ದಾಳಿ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ತಪ್ಪಾಗಿದೆ. ವಾಸ್ತವವಾಗಿ 2022ರ ಪಾಕ್‌ನ ಆಮದು ನೀತಿಯ ಪ್ರಕಾರ ಭಾರತದಿಂದ ವಾಹನಗಳನ್ನು ಖರೀದಿ ಮಾಡುವಂತಿಲ್ಲ ಹಾಗಾಗಿ ಪಾಕಿಸ್ತಾನಕ್ಕೆ ದೇಶಭಕ್ತಿಯ ಕಾರಣಕ್ಕೆ ಟಾಟಾ ಸುಮೋಗಳನ್ನು ನೀಡಲಲು ರತನ್ ಟಾಟಾ ನಿರಾಕರಿಸಿದರು ಎಂಬುದು ಅವರ ಸಾವಿನ ಸಂದರ್ಭದಲ್ಲಿ ಕಥೆ ಕಟ್ಟಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಮಾಯಣ ಕಾಲದ ಕುಂಭಕರ್ಣನ ಖಡ್ಗ ಪತ್ತೆ ಎಂಬ ಪೋಸ್ಟ್‌ನ ಅಸಲೀಯತ್ತೇನು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights