FACT CHECK | ಭಜನೆ ಮಾಡುತ್ತಿದ್ದ ಮಹಿಳೆಯಿಂದ ಚಿನ್ನದ ಸರ ಕದ್ದು ಓಡಿ ಹೋದ ಘಟನೆ ನಡೆದಿದ್ದು ಎಲ್ಲಿ ಗೊತ್ತೇ?
ಸಾಮೂಹಿಕ ಭಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಕಿಟಿಕಿ ಪಕ್ಕ ಕುಳಿತು ಭಜನೆ ಮಾಡುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರಕದ್ದಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈ ಘಟನೆಯ ವಿಡಿಯೋ ದೃಶ್ಯಗಳು ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹೆಸರಿನಲ್ಲಿಹಂಚಿಕೊಳ್ಳಲಾಗುತ್ತಿದೆ.
Share this video with your family members and please ask them to be careful about these chain snatchers. pic.twitter.com/21UynXo2zO
— yaarivanu_unknownu (@memesmaadonu) October 14, 2024
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹತ್ತಾರು ಮಹಿಳೆಯರು ನವರಾತ್ರಿಯ ಅಂಗನವಾಗಿ ಸಾಮೂಹಿಕ ಭಜನೆ ಮಾಡುತ್ತಿರುತ್ತಾರೆ. ಈ ದೃಶ್ಯವನ್ನು ಅಲ್ಲಿದ್ದವರು ಒಬ್ಬರು ಚಿತ್ರೀಕರಿಸುತ್ತಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಯಾರೋ ಎಳೆದಂತಾಗಿ ಕೂಗಿದ್ಧಾರೆ. ಎಲ್ಲರ ಗಮನ ಅತ್ತ ಸೆಳೆದಾಗ, ಕಿಟಕಿಯ ಹೊರಗಿನಿಂದ ಯಾರೋ ದುಷ್ಕರ್ಮಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರಕದ್ದಿರುವುದು ಗೊತ್ತಾಗುತ್ತದೆ. ಅಯ್ಯೋ ಸರ ಕದ್ದುಬಿಟ್ರು, ಅಂತಾ ಮಹಿಳೆ ಕೂಗಿಕೊಂಡ ಬೆನ್ನಲ್ಲೆ ಮಹಿಳೆಯರು ಸಹಾಯಕ್ಕಾಗಿ ಯಾಚಿಸಿದ್ದಾರೆ. ಈ ಘಟನೆ ಹಾಸದಲ್ಲಿ ನಡೆದಿದೆ ಎಂದು ಕೆಲವರು,ಇನ್ನು ಕೆಲವರು ಶಿವಮೊಗ್ಗದಲ್ಲಿ ನಡೆದಿದೆ ಎಂದು ಪೋಸ್ಟ್ಅನ್ನು ಹಂಚಿಕೊಳ್ಳುತ್ತಿದ್ದಾರೆ.
ದೇವಸ್ಥಾನದಲ್ಲಿ ಭಜನೆ ವೇಳೆ ಸರಗಳ್ಳತನವಾಗಿದೆ. ಬೆಂಗಳೂರು ನಗರದ ದೇವಸ್ಥಾನವೊಂದರಲ್ಲಿ ಕಿಟಕಿ ಪಕ್ಕ ಕುಳಿತು ಭಜನೆ / ಪಾರಾಯಣ ಮಾಡುತ್ತಿದ್ದ ಮಹಿಳೆಯ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ದಯವಿಟ್ಟು ಜಾಗೃತೆ ವಹಿಸಿ ಎಂದು ಬನವಾಸಿ ಕನ್ನಡಿಗರು ಎಂಬ ಫೇಸ್ಬುಕ್ನಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.ಕೆಲವು ಜಿಲ್ಲಾ ಮಟ್ಟದ ವಾಟ್ಸಾಪ್ ಗ್ರೂಪ್ಗಳಲ್ಲಿ ಬೇರೆ ಬೇರೆ ಸ್ಥಳಗಳ ಹೆಸರಿನಲ್ಲಿ ಶೇರ್ ಆಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿನ ದೃಶ್ಯಗಳು ಎಲ್ಲಿ ನಡೆದಿದೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಗಳ ಘಟನೆ ಎಲ್ಲಿ ನಡೆದಿದೆ ಎಂದು ಪರಿಶೀಲಿಸಲು ಭಜನೆ ವೇಳೆ ಸರಗಳತನ ಎಂಬ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ಹಲವು ಮಾಧ್ಯಮಗಳ ವರದಿ ಲಭ್ಯವಾಗಿದೆ.
ವರದಿಯ ಪ್ರಕಾರ,ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯ ಸರವನ್ನು ಕಿಟಿಕಿಯಿಂದ ಕದ್ದು ಖತರ್ನಕ್ ಕಳ್ಳ ಪರಾರಿಯಾಗಿರುವಂತಹ ಘಟನೆ ನಗರದ ನಂದಿನಿ ಲೇಔಟ್ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 10ರಂದು ನಡೆದ ಘಟನೆಯ ವಿಡಿಯೋ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆ ಆಗಿದೆ. ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಹೇಳಲಾಗಿದೆ.
ನಂದಿನಿ ಲೇಔಟ್ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ಓರ್ವ ಮಹಿಳೆ ದೇವರ ಭಜನೆಯಲ್ಲಿ ಮಗ್ನರಾಗಿದ್ದರು, ಈ ವೇಳೆ ಕಳ್ಳ ಬಂದಿದ್ದು, ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿ ಎಳೆದಿದ್ದಾನೆ.
ಅತ್ತ ಕಳ್ಳ ಸರ ಎಳೆಯುತ್ತಿದ್ದಂತೆ ಮಹಿಳೆ ಜೋರಾಗಿ ಕೂಗಿಕೊಳ್ಳುತಾ, ತಪ್ಪಿಸಿಕೊಳ್ಳುವಾಗ ಕಟ್ಟಾಗಿ ಅರ್ಧ ಸರ ಕಳ್ಳನ ಕೈಸೇರಿದೆ. ಸುಮಾರು ಮೂವತ್ತು ಗ್ರಾಂ ಕಿತ್ತುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲು ಮಾಡಿದ ನಂದಿನಿ ಲೇಔಟ್ ಪೊಲೀಸ್ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ನಗರದ ನಂದಿನಿ ಲೇಔಟ್ನ ಶಂಕರಪುರದ ವಿನಾಯಕ ದೇವಸ್ಥಾನದಲ್ಲಿ ಕಿಟಕಿ ಕುಳಿತು ಮಹಿಳೆ ಭಜನೆ ಮಾಡುವ ವೇಳೆ ಕಳ್ಳನೊಬ್ಬ ಕಿಟಕಿಯಿಂದಲೇ ಕುತ್ತಿಗೆಗೆ ಕೈಹಾಕಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಮಹಿಳೆ ಜೋರಾಗಿ ಕಿರುಚಿಕೊಂಡಿದ್ದರಿಂದ ಭಜನೆ ಮಾಡುತ್ತಿದ್ದ ಮಹಿಳೆಯರು ಹೊರ ಬಂದು ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರು. ಅಷ್ಟರಲ್ಲಿ ಆತ ಓಡಿ ಹೋಗಿದ್ದ. ಕಿತ್ತುಕೊಳ್ಳುವ ವೇಳೆ ಬಿಗಿಯಾಗಿ ಹಿಡಿದುಕೊಂಡಿದ್ದ ಪರಿಣಾಮ 70 ಗ್ರಾಂ. ಸರ ತುಂಡಾಗಿ 30 ಗ್ರಾಂ.ನ ಸರದ ತುಂಡು ಕಳ್ಳನ ಪಾಲಾಗಿದೆ. ಮಂಗಳಾ ಅವರ ದೂರು ಆಧರಿಸಿ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹಾಗಾಗಿ ಈ ಘಟನೆ ನಡೆದಿರುವುದು, ಬೆಂಗಳೂರಿನ ನಂದಿನಿ ಲೇಔಟ್ನ ಶಂಕರಪುರದ ವಿನಾಯಕ ದೇವಸ್ಥಾನದಲ್ಲಿ ಎಂಬುದು ಸ್ಪಷ್ಟವಾಗಿದೆ. ಆಭರಣಗಳನ್ನು ಧರಿಸುವ ಮಹಿಳೆಯರು ಹೆಚ್ಚಿನ ಜಾಗೃತಿ ವಹಿಸಿ ಇಂತಹ ಕಳ್ಳರ ಬಗ್ಗೆ ಎಚ್ಚರಿಕೆಯಿಂದಿರಬೇಕು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಹೊಡೆದ ಹಿಂದೂ ಯುವತಿ ಎಂದು ಸ್ಕ್ರಿಪ್ಟ್ ವಿಡಿಯೋ ಹಂಚಿಕೆ

