BJP new slogan : ಬಿಜೆಪಿಯ ಹೊಸ ಸ್ಲೋಗನ್: ಅನರ್ಹರಿಗೆ ಆದ್ಯತೆ, ಪಕ್ಷನಿಷ್ಠರಿಗೆ ಬಾದ್ಯತೆ!

ಈಗ ಸರ್ಕಾರ ರಚನೆಯ ಮಟ್ಟಿಗೆ ಬಿಜೆಪಿ ಒಂದು ಹೊಸ ಸ್ಲೋಗನ್ನು ಹಾಕಿಕೊಂಡಂತಿದೆ. ಅದು ‘ಅನರ್ಹರಿಗೆ ಆದ್ಯತೆ, ಪಕ್ಷನಿಷ್ಠರಿಗೆ ಬಾದ್ಯತೆ’ ಎಂಬುದಾಗಿದೆ. ಬಾದ್ಯತೆಗೊಳಗಾದ ಎಲ್ಲ ಹಿರಿಯ ನಾಯಕರು ಇದನ್ನು ಒಪ್ಪಿಕೊಂಡು ಸುಮ್ಮನೆ ತೆಪ್ಪಗೆ ಬಿದ್ದಿದ್ದಾರೆ. ಆದರೆ ಕನಿಷ್ಠ ಅವರ ಅಭಿಮಾನಿಗಳಾದರೂ ಇದನ್ನೆಲ್ಲ ಪ್ರತಿಭಟಿಸಬಹುದಿತ್ತು. ಆದರೆ ಈ ಅತೃಪ್ತ ಸಚಿವರು ಅದಕ್ಕೂ ಅವಕಾಶ ನೀಡುತ್ತಿಲ್ಲ. ಆದರೆ ಮೋದಿಯ ಜಪದಲ್ಲಿ ಕಾಮನ್ ಸೆನ್ಸ್ ಕಳೆದುಕೊಂಡಿರುವ ಕಾರ್ಯಕರ್ತರು ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿದ್ದಾರೆ.

ಚುನಾವಣೆಯೇ ಗೊತ್ತಿಲ್ಲದ ಸಂತೋಷ್ ಕಾರುಬಾರು!

ಜೀವನದಲ್ಲಿ ಎಂದೂ ಒಂದೂ ಚುನಾವಣೆ ಎದುರಿಸದ ಬಿ.ಎಲ್ ಸಂತೋಷ್ ಎಂಬ ಆರೆಸ್ಸೆಸ್ ಮನುಷ್ಯ ಇತ್ತೀಚಿನವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡು ಸಭೆ ನಡೆಸಿದ ವ್ಯಕ್ತಿಯಲ್ಲ. ಆದರೆ ಈಗ ಈ ವ್ಯಕ್ತಿಯೇ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ. ಎಂದಾದರೂ ಒಂದಿನ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅದಮ್ಯ ಆಸೆಯನ್ನು ದಶಕದಿಂದ ಕಾಪಾಡಿಕೊಂಡು ಬಂದಿರುವ ಸಂತೋಷ್‍ರಿಗೆ ನೇರ ಚುನಾವಣೆ ಎದುರಿಸಿ ಗೆಲ್ಲುವ ಛಾತಿಯಂತೂ ಇಲ್ಲವೇ ಇಲ್ಲ. ಹಂತ ಹಂತವಾಗಿ ಮೇಲೇರಿ ರಾಜಕೀಯ ಅಧಿಕಾರ ಪಡೆಯುವ ತಾಳ್ಮೆಯೂ ಇಲ್ಲ. ಹೀಗಾಗಿ ಅವರು ಬಿಜೆಪಿಗೆ ಬಹುಮತ ಬಂದಾಗ ವಾಮಮಾರ್ಗದ ಮೂಲಕ ಮುಖ್ಯಮಂತ್ರಿಯಾಗುವ ದೀಕ್ಷೆ ತೊಟ್ಟಿದ್ದಾರೆ. ಆದರೆ ಪಾಪ ಅದಕ್ಕೆ ಕಾಲ ಕೂಡಿ ಬರುತ್ತಿಲ್ಲ.

ಇಲ್ಲಿ ಯಡಿಯೂರಪ್ಪ ಲಿಂಗಾಯತ ನಾಯಕ ಎಂದು ಬಿಂಬಿತವಾದ ಕಾರಣಕ್ಕೆ ಸಂತೋಷ್ ಸುಮ್ಮನಿದ್ದರು. ಅಮಿತ್ ಶಾ ಕೂಡ ಸುಮ್ಮನಿರ ಬೇಕಾಗಿತ್ತು. ಮುಂದೆ ಚುನಾವಣೆ ನಡೆದರೆ ಬಿಜೆಪಿಗೆ ಸ್ಪಷ್ಟ ಬಹುಮತ ಎಂದು ಲೆಕ್ಕ ಹಾಕಿರುವ ಇವರೀಗ ಮುಂದೆ ಅಡ್ಡಿ ಆಗಬಹುದಾದ ಯಡಿಯೂರಪ್ಪ ಅವರನ್ನು ಈಗಲೇ ಕುಗ್ಗಿಸಿ, ಅವರನ್ನು ತಮ್ಮ ಹಿಡಿತಕ್ಕೆ ತಂದುಕೊಂಡಿದ್ದಾರೆ. ಹಂತ ಹಂತವಾಗಿ ಯಡಿಯೂರಪ್ಪನವರ ರಾಜಕೀಯ ವರ್ಚಸ್ಸು ಹಾಳಾದಂತೆಲ್ಲ ತನಗೆ ಲಾಭ ಎಂದು ಸಂತೋಷ್ ನಂಬಿದಂತಿದೆ. ಅದಕ್ಕಾಗಿ ಈಗ ಯಡಿಯೂರಪ್ಪ ಮೇಲೇಳದಂತೆ ಮೂವರು ಡಿಸಿಎಂಗಳನ್ನು ಸುತ್ತುವರಿಸಲಾಗಿದೆ.

ಅನರ್ಹರಿಗಾಗಿ ಕಾದಿವೆ ಪ್ರಮುಖ ಖಾತೆಗಳು
ಸಮಾಜ ಕಲ್ಯಾಣ, ಬೆಂಗಳೂರು ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ಈಗ ಅನರ್ಹಗೊಂಡಿರುವ ಶಾಸಕರಿಗಾಗಿ ಮೀಸಲಿಟ್ಟಿದ್ದಾರೆ. ಅವರು ಸುಪ್ರಿಕೋರ್ಟಿನಿಂದ ಅರ್ಹಗೊಂಡು ಬಂದ ನಂತರವಷ್ಟೇ ಆ ಮಾತಲ್ಲವೇ? ಆದರೂ ಆ ಅನರ್ಹರಿಗಾಗಿ ಈಗ ಪಕ್ಷನಿಷ್ಠ ಅನೇಕ ಹಿರಿಯರನ್ನು ಕಡೆಗಣಿಸಲಾಗಿದೆ. ಚುನಾವಣೆಯಲ್ಲಿ ಸೋತ ಮತ್ತು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸದನದಲ್ಲೇ ಬ್ಲೂ ಫಿಲಂ ನೋಡಿ ಸಚಿವ ಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿ ಅವರಿಗೆ ಪ್ರಮುಖ ಖಾತೆಯ ಜೊತೆಗೇ ಡಿಸಿಎಂ ಹುದ್ದೆ ನೀಡುವ ಮೂಲಕ ‘ನಮ್ಮಲ್ಲಿ ಅನರ್ಹರಿಗಷ್ಟೇ ಅಲ್ಲ, ಅಯೋಗ್ಯರಿಗೂ ಆದ್ಯತೆ’ ಎಂದು ಸಂತೋಷ್ ನೇತೃತ್ವದ ಬಿಜೆಪಿ ಟೀಮ್ ಘೋಷಣೆ ಮಾಡಿದೆ.

ಧಮ್ಮೇ ಇಲ್ಲದ ರಾಜ್ಯದ ಪ್ರಮುಖ ನಾಯಕರು ಗಪ್‍ಚುಪ್ ಕೂಡುವ ಮೂಲಕ ತಮ್ಮನ್ನೂ ಅವಮಾನಿಸಿಕೊಂಡು, ಮತ ಹಾಕಿದ ಪ್ರಜೆಗಳನ್ನೂ ಅವಮಾನಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights