ಕೊರೊನಾ 2ನೇ ಅಲೆ: ಭಾರತದ ಪ್ರಯಾಣಿಕರಿಗೆ ನಿತ್ಯಾನಂದನ ‘ಕೈಲಾಸ’ ದೇಶಕ್ಕೆ ನೋ ಎಂಟ್ರಿ!
ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ತೀವ್ರತೆ ಪಡೆದುಕೊಂಡಿದೆ. ಪ್ರತಿದಿನ ಕೊರೊನಾ ಸೋಂಕಿತ ಹೊಸ ಪ್ರಕರಣಗಳ ಸಂಖ್ಯೆ ಮೂರು ಲಕ್ಷ ದಾಟುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಭಾರತದ ಪ್ರಯಾಣಿಕರಿಗೆ ನಿರ್ಬಂಧ ಹೇರಿವೆ. ಅದೇ ರೀತಿಯಲ್ಲಿ ಸ್ವಯಂ ಘೋಷಿತ ದೇವಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ನಿರ್ಮಿಸಿಕೊಂಡಿರುವ ತನ್ನದೇ ದೇಶ ‘ಕೈಲಾಸ’ಕ್ಕೂ ಭಾರತೀಯರಿಗೆ ಪ್ರವೇಶವಿಲ್ಲ ಎಂದು ಘೋಷಿಸಿದ್ದು, ಭಾರತೀಯರಿಗೆ ನಿರ್ಬಂಧ ಹೇರಲಾಗಿದೆ.
ಕೈಲಾಸಕ್ಕೆ ಪ್ರವೇಶಿಸದಂತೆ ಭಾರತಕ್ಕೆ ಮಾತ್ರವಲ್ಲದೆ, ಬ್ರೆಜಿಲ್, ಯೂರೋಪಿಯನ್ ಯೂನಿಯನ್, ಮಲೇಷ್ಯಾದಿಂದ ಬರುವವರಿಗೂ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ಕೈಲಾಸದ ಎಲ್ಲಾ ರಾಯಭಾರಿ ಕಚೇರಿಗಳೂ ಸಹ ಮುಚ್ಚಲ್ಪಟ್ಟಿವೆ ಎಂದು ಅಧಿಕೃತ ಟ್ವೀಟ್ ಹ್ಯಾಂಡಲ್ ನಲ್ಲಿ ಬರೆಯಲಾಗಿದೆ.
ಏ.22 ರಂದು ಒಂದೇ ದಿನದಲ್ಲಿ ಭಾರತದಲ್ಲಿ 3.32 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಒಂದೇ ದಿನದಲ್ಲಿ 2,263 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

