ಫ್ಯಾಕ್ಟ್‌ಚೆಕ್ : ₹100 ಮುಖ ಬೆಲೆಯ ಹಳೆಯ ನೋಟುಗಳನ್ನು RBI ರದ್ದು ಮಾಡಿದೆಯೇ?

2016ರಲ್ಲಿ ₹ 1000 ಮತ್ತು ₹ 500 ಮುಖಬೆಲೆಯ ನೋಟುಗಳ ಅಮಾನ್ಯ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ರಾತ್ರೋ ರಾತ್ರಿ ಘೋಷಿಸಿದ್ದರು. ಇದರಿಂದ ಜನಸಾಮಾನ್ಯರಿಗಾದ  ತೊಂದರೆ ಒಂದಾ ಎರಡಾ? 2016ರ ನ.8 ರಂದು ಪ್ರಧಾನಿ ಮೋದಿ ಪ್ರಕಟಿಸಿದ ನಿರ್ಧಾರದ ಗುರಿ ಕಪ್ಪುಹಣ ಬಯಲಿಗೆಳೆಯುವುದು, ಖೋಟಾನೋಟು ದಂಧೆ ಮಟ್ಟ ಹಾಕುವುದು ಹಾಗೂ ಇವೆಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನಾ ಕೃತ್ಯಗಳ ನಿಧಿಗೆ ಹಣದ ಹರಿಯುವಿಕೆ ತಡೆಗಟ್ಟುವುದಾಗಿತ್ತು. ಅದರಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂದೇ ಜನರನ್ನು ನಂಬಿಸಲಾಗಿತ್ತು. ಆದರೆ 7 ವರ್ಷದ ನಂತರವೂ ಮೇಲೆ ತಿಳಿಸಿದ ಸಮಸ್ಯೆಗಳೇನು ಕಡಿಮೆ ಆಗಿಲ್ಲ.

ಆದರೆ ಈಗ ₹ 100 ಮುಖ ಬೆಲಯ ಹಳೆಯ ನೋಟುಗಳನ್ನು ಅಮಾನ್ಯೀಕರಣ ಮಾಡಲಾಗುವುದು ಎಂದು RBI ಘೋಷಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಳೆಯ ₹100 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ’ ಎಂಬಂಥ ಪೋಸ್ಟ್‌ಗಳು ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ‘₹100, ₹10 ಹಾಗೂ ₹5 ಮುಖಬೆಲೆಯ ನೋಟುಗಳನ್ನು RBI ಹಿಂಪಡೆಯಲಿದೆ. ಇದು ಎರಡನೇ ನೋಟು ರದ್ದತಿಯಾಗಲಿದೆ’ ಎಂಬಂಥ ಪೋಸ್ಟ್‌ಗಳು 2019ರಲ್ಲಿ ಹಾಗೂ 2021ರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈಗ ಮತ್ತೊಮ್ಮೆ ₹100 ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆಯಲಾಗುತ್ತದೆ ಎಂಬಂತೆ ಪೋಸ್ಟ್‌ಗಳು ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಪೋಸ್ಟ್‌ಗಳ ಕುರಿತು ಆರ್‌ಬಿಐ 2021ರಲ್ಲಿ ಸ್ಪಷ್ಟನೆ ನೀಡಿತ್ತು. ‘ಪ್ರಸ್ತುತ ಚಲಾವಣೆಯಲ್ಲಿರುವ ₹100, ₹10 ಹಾಗೂ ₹5 ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆಯಲಾಗುವುದು ಎಂಬಂಥ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ, ಇಂಥ ವರದಿಗಳು ತಪ್ಪು ಮಾಹಿತಿಯಿಂದ ಕೂಡಿವೆ. ನಾವು ಇಂಥ ಯಾವುದೇ ಪ್ರಕಟಣೆ ಹೊರಡಿಸಿಲ್ಲ’ ಎಂದು ಆರ್‌ಬಿಐ ಸ್ಪಷ್ಟನೆ ನೀಡಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗೆ ಸಂಬಂಧಿಸಿದಂತೆ RBI ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಹಿಳೆ ಬೆತ್ತಲೆ ಪ್ರಕರಣ ರಾಜ್ಯ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿದ ಪ್ರಹ್ಲಾದ್ ಜೋಶಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights