ಫ್ಯಾಕ್ಟ್‌ಚೆಕ್: ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಮಿತಿ ಮೀರುತ್ತಿದೆ ಎಂದು ತಪ್ಪಾಗಿ ಬಾಂಗ್ಲಾದೇಶದ ಫೋಟೋ ಹಂಚಿಕೆ

ಸಾಮಾಜಿಕ ಮಾಧ್ಯಮದಲ್ಲಿ ಕೊಲಾಜ್ ಮಾಡಲಾದ ಫೋಟೋವನ್ನು ಹಂಚಿಕೊಂಡಿದ್ದು, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಮಿತಿ ಮೀರುತ್ತಿದೆ ಎಂದು ಪ್ರತಿಪಾದಿಸಲಾಗಿದೆ.  ಒಂದು ಫೋಟೋದಲ್ಲಿ ಕೆಲವರು ಖಾಲಿ ರಸ್ತೆಯಲ್ಲಿ ನಡೆಯುತ್ತಿರುವುದು ಕಂಡುಬಂದರೆ, ಎರಡನೇ ಫೋಟೋದಲ್ಲಿ “ನೈನಿತಾಲ್ 2022” ಎಂದು ಬರೆಯಲಾಗಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದಾರೆ. ಆ ಮೂಲಕ ಮುಸ್ಲಿಮ್ ಸಮುದಾಯದ ಜನ ಹೆಚ್ಚಾಗುತ್ತಿದ್ದಾರೆ, ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸೂಚಿಸಲಾಗಿದೆ.

ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕರು ಇದೇ ಫೋಟೋವನ್ನು ಹಂಚಿಕೊಂಡಿದ್ದಾರೆ,  2010 ರಿಂದ 2022 ರ ವರೆಗೆ ನೈನಿತಾಲ್‌ನ ಫೋಟೋಗಳಲ್ಲಿ ಕಂಡುಬರುವಂತೆ ಮುಸ್ಲಿಂ ಜನಸಂಖ್ಯೆಯಲ್ಲಿನ ಹಚ್ಚಳವಾಗಿದೆ  ಎಂದು ಹೇಳಲಾಗಿದ್ದು, ಈ ಪೋಸ್ಟ್‌ನ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ನೈನಿತಾಲ್‌ನ 2010 ರ ಚಿತ್ರವೆಂದು ಹೇಳಲಾಗಿರುವ ಫೋಟೋವನ್ನು ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್ ಮಾಡಲಾಗಿದ್ದು, ವೈರಲ್ ಫೊಟೋವನ್ನು ನೈನಿತಾಲ್‌ನ ಅಪ್ಪರ್ ಮಾಲ್ ರಸ್ತೆಯಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದೆ. ಮೆಟಾಡೇಟಾ ಪ್ರಕಾರ, ಚಿತ್ರವನ್ನು ಜೂನ್ 2019 ರಲ್ಲಿ ಸೆರೆಹಿಡಿಯಲಾಗಿದೆ.

ವೈರಲ್ ಆದ ಚಿತ್ರದಲ್ಲಿ ‘ಅಲ್ಕಾ’ ಎಂಬ ನಾಮಫಲಕವಿದೆ. ನೈನಿತಾಲ್‌ನ ಅಪ್ಪರ್ ಮಾಲ್ ರೋಡ್‌ನಲ್ಲಿರುವ ಅಲ್ಕಾ ಬಗ್ಗೆ ಗೂಗಲ್‌ನಲ್ಲಿ ಹುಡುಕಿದಾಗ ಆ ಸ್ಥಳದಲ್ಲಿ ಅಲ್ಕಾ ಹೋಟೆಲ್ ಪತ್ತೆಯಾಗಿದೆ. ಹೋಟೆಲ್ ಪಕ್ಕದಲ್ಲಿರುವ ಡೊಮಿನೊಸ್ ಪಿಜ್ಜಾ ಔಟ್‌ಲೆಟ್‌ನ ಚಿತ್ರವು ‘ಅಲ್ಕಾ’ ದ ಇದೇ ರೀತಿಯ ಚಿತ್ರವನ್ನು ಸೂಚಿಸಿದೆ.

ನೈನಿತಾಲ್‌ನ 2022 ರ ಫೋಟೋ ಎಂದು ಹೇಳಲಾಗಿರುವ ಚಿತ್ರವನ್ನು ಗೂಗಲ್ ರವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಬಾಂಗ್ಲಾದೇಶದ ಕಾರ್ಯಕ್ರಮದ ಕುರಿತು 2018 ರ ಲೇಖನದಲ್ಲಿ ಅದೇ ಚಿತ್ರ ಕಂಡುಬಂದಿದೆ. ಇದು ಬಾಂಗ್ಲಾದೇಶದ  ರಾಜಧಾನಿ ಢಾಕಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ತುರಾಗ್ ನದಿಯ ದಡದಲ್ಲಿ ವಾರ್ಷಿಕವಾಗಿ ನಡೆಯುವ ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಕೂಟವಾದ ‘ಬಿಶ್ವಾ ಇಜ್ತೆಮಾ’ ಸಮಯದಲ್ಲಿ ಸೆರೆಹಿಡಿಯಲಾದ ಸಾಮೂಹಿಕ ಪ್ರಾರ್ಥನೆ ಎಂದು ಹೇಳಲಾಗಿದೆ. ಹಾಗಾಗಿ ಇದು ಉತ್ತರಖಂಡದ ನೈನಿತಾಲ್‌ನ ಫೋಟೋ ಅಲ್ಲ ಎಂದು ಖಚಿತವಾಗಿದೆ.

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ ಎಂಬುದು ನಿಜವೇ?

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುವ ಮೂಲಕ ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡಲು ಯತ್ನಿಸುತ್ತಿದ್ದಾರೆ. ಹಾಗಾಗಿ ಹಿಂದೂಗಳು ಸಹ 10 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಕೆಲವು ಸ್ವಾಮೀಜಿಗಳು, ರಾಜಕಾರಣಿಗಳೂ ಬಿಟ್ಟಿ ಉಪದೇಶ ಕೊಡುತ್ತಿರುತ್ತಾರೆ. ಆದರೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಸಮೀಕ್ಷೆಗಳು ಇದಕ್ಕೆ ವ್ಯತಿರಿಕ್ತವಾದ ಅಂಕಿ ಅಂಶಗಳನ್ನು ಹೊರಚೆಲ್ಲಿವೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ವರದಿಯಂತೆ ಹಿಂದೂ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ (ಮಹಿಳೆ ತಮ್ಮ ಜೀವಮಾನದಲ್ಲಿ ಹೆರುವ ಮಕ್ಕಳ ಸರಾಸರಿ ಸಂಖ್ಯೆ) ತೀವ್ರವಾಗಿ ಇಳಿಕೆಯಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಇತರ ಧರ್ಮಗಳ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರ ಫಲವತ್ತೆತ ದರ ತೀವ್ರವಾಗಿ ಕುಸಿದಿದೆ. 1992-93 ರಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆಯ ದರ 4.4 ಇದ್ದಿದ್ದು 2015-16ರಲ್ಲಿ ಅದು 2.6 ಗೆ ಕುಸಿದಿತ್ತು. 2019-2021ರಲ್ಲಿ ಮತ್ತಷ್ಟು ಕುಸಿದು 2.3 ಗೆ ಇಳಿದಿದೆ.

ಅದೇ ರೀತಿ ಹಿಂದೂ ಮಹಿಳೆಯರ ಫಲವತ್ತೆತೆಯ ದರ 1992-93 ರಲ್ಲಿ3.3 ಇದ್ದುದ್ದು 2015-16 ರಲ್ಲಿ ಅದು 2.1ಕ್ಕೆ ಕುಸಿದಿತ್ತು. 2019-2021ರಲ್ಲಿ ಮತ್ತಷ್ಟು ಕುಸಿದು 1.94 ಗೆ ಇಳಿದಿದೆ. ಹಿಂದೂಗಳಲ್ಲಿ ಅದು 41.2% ಇಳಿಕೆಯಾದರೆ, ಮುಸ್ಲಿಮರಲ್ಲಿ 46.5% ಇಳಿಕೆಯಾಗಿದೆ. ಈ ಎಲ್ಲಾ ಅಂಶಗಳು ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ ಎಂಬ ವಾದವನ್ನು ತಳ್ಳಿ ಹಾಕುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಎರಡು ಬೇರೆ ಬೇರೆ ಸಂದರ್ಭದಲ್ಲಿ ಪ್ರಕಟವಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಲಾಜ್ ಮಾಡಿ ಶೇರ್ ಮಾಡುವ ಮೂಲಕ ದ್ವೇಷ ಹರಡುತ್ತಿರುವುದು ಸ್ಪಷ್ಟವಾಗಿದೆ. ನೈನಿತಾಲ್‌ನ ಚಿತ್ರವನ್ನು ಬಾಂಗ್ಲಾದೇಶದ ಚಿತ್ರದೊಂದಿಗೆ ತಪ್ಪಾಗಿ ಹೋಲಿಸಿ ಮುಸ್ಲಿಂ ದ್ವೇಷ ಹರಡಿ ಸಮಾಜದ ಸ್ವಾಸ್ಥವನ್ನು ಹಾಳು ಮಾಡುವಂತಹ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಬಡವರಿಗೆ ಕೇಂದ್ರ ಸರ್ಕಾರ ರೂ 30,628 ನೀಡುತ್ತದೆ ಎಂಬ ಸಂದೇಶ ನಕಲಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights