ಫ್ಯಾಕ್ಟ್‌ಚೆಕ್ : ಮಹಿಳೆ ಬೆತ್ತಲೆ ಪ್ರಕರಣ ರಾಜ್ಯ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿದ ಪ್ರಹ್ಲಾದ್ ಜೋಶಿ

“ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಪ್ರವೇಶಿಸಿದ ನಂತರ ಸರ್ಕಾರ ಮತ್ತು ಪೊಲೀಸರು ಕ್ರಮ ಕೈಗೊಂಡಿದ್ದಾರೆ” ಅದುವರೆಗೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತು ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ
ANI ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆದ ಮಹಿಳಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವವರೆಗೂ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಏಕೆ ಸುಮ್ಮನಿತ್ತು? ರಾಜ್ಯ ಸರ್ಕಾರ ಮಧ್ಯಪ್ರವೇಶಿಸಲಿಲ್ಲವೇಕೆ? ” ಎಂದು ಪ್ರಹ್ಲಾದ್ ಜೋಶಿ ಎಎನ್‌ಐಗೆ ತಿಳಿಸಿದ್ದಾರೆ.

ಬೆಳಗಾವಿ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ ನಂತರ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಏಕೆ ಹೆದರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ. “ಇದರಲ್ಲಿ ರಾಜಕೀಯ ಏನು? ಅಲ್ಲಿಗೆ ನಿಯೋಗ ಕಳುಹಿಸಿದ್ದೇವೆ. ಎನ್‌ಎಚ್‌ಆರ್‌ಸಿ ತಂಡವೂ ಇದೆ. ಮಣಿಪುರದ ಸಮಸ್ಯೆಯನ್ನು ಇದರೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಜೋಶಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋದರು ಎಂಬ ಕಾರಣಕ್ಕೆ, ಯುವಕನ ತಾಯಿ ಮೇಲೆ ದೌರ್ಜನ್ಯ ಎಸಗಲಾಗಿದೆ ಬುಡಕಟ್ಟು ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು. ಹಾಗಿದ್ದರೆ ಈ ಪ್ರಕರಣಕ್ಕೆ ಸಂಬಧಿಸಿದಂತೆ  ಹೈಕೋರ್ಟ್ ಸುಮೋಟೋ ದಾಖಲಿಸಿದ ನಂತರವೇ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿತ್ತೆ? ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತ್ರಸ್ಥೆಯನ್ನು ಭೇಟಿ ಮಾಡಿದರೆ? ಅಲ್ಲಿಯವರೆಗೂ ಏನು ಕ್ರಮ ತೆಗೆದುಕೊಂಡಿರಲಿಲ್ಲವೇ?  ಪ್ರಹ್ಲಾದ್ ಜೋಶಿ ಮಾಡಿರುವ ಆರೋಪದಲ್ಲಿ ಸತ್ಯವಿದೆಯೇ ಎಂದು ಪರಿಶೀಲಿಸೋಣ.

ಫ್ತಾಕ್ಟ್‌ಚೆಕ್ :

ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ  ANI ಸುದ್ದಿ ಸಂಸ್ಥೆಗೆ ಬೆಳಗಾವಿಯಲ್ಲಿ ನಡೆದ ಬೆತ್ತಲೆ ಪ್ರಕರಣ ಸಂಬಂಧ ಹೇಳಿಕೆಯನ್ನು ನೀಡಿದ್ದು,  ಹೈಕೋರ್ಟ್ ಮಧ್ಯಪ್ರವೇಶಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ನಂತರ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಾರ್ಯವೃತ್ತವಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಪ್ರಹ್ಲಾದ್ ಜೋಷಿ ಹೇಳಿಕೆ ಜನರನ್ನು ದಾರಿತಪ್ಪಿಸುವಂತಿದೆ ಎಂಬುದು ಸ್ಪಷ್ಟವಾಗಿದೆ.

ಬೆತ್ತಲೆ ಪ್ರಕರಣ ಬೆಳಕಿಗೆ ಬಂದ ದಿನವೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂದಿಸಲಾಗಿತ್ತು. ಅದನ್ನು ಸ್ವತಃ ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ಹಂಚಿಕೊಂಡಿರುವುದನ್ನು ಕಾಣಬಹುದು.

“ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ. ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್‌ ಮಾಡಿದ್ದಾರೆ.

ಇದೇ ಘಟನೆ ಬಗ್ಗೆ ಗೃಹ ಸಚಿವರಾದ ಜಿ.ಪರಮೇಶ್ವರ್  ಸಂತ್ರಸ್ಥೆ ಮೇಲೆ ಹಲ್ಲೆ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಬೆಳಗಾವಿಯಲ್ಲಿ ಪ್ರೀತಿಸುತ್ತಿದ್ದ ಯುವಕ-ಯುವತಿ ಮನೆ ಬಿಟ್ಟು ಹೋಗಿರುವ ಕಾರಣಕ್ಕೆ ಯುವಕನ ತಾಯಿಯ ಮೇಲೆ ಹಲ್ಲೆ ಮಾಡಿ, ಅಮಾನುಷವಾಗಿ ನಡೆದುಕೊಂಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ”

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದೆನು. ಸಂತ್ರಸ್ತ ಕುಟುಂಬದ ಸಂಪೂರ್ಣ ರಕ್ಷಣೆ ಹಾಗೂ ನೆರವಿಗೆ ನಾವಿದ್ದೇವೆ. ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ. ಇಂತಹ ಅಕ್ಷಮ್ಯ ಅಪರಾಧಗಳನ್ನು ನಾವು ಸಹಿಸುವುದಿಲ್ಲ.” ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘಟನೆ ಆದ ದಿನವೇ ಸಂತ್ರಸ್ಥೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿರುವುದನ್ನು ಮೊಹಮದ್ ಜುಬೇರ್ ತಮ್ಮ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜೋಷಿ ಮಾಡಿರುವ ಆರೋಪ ಸುಳ್ಳು

ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಅಕೆಯೊಂದಿಗೆ ಪರಾರಿಯಾಗಿದ್ದ ಎನ್ನುವ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

ಆದರೆ ಇದಕ್ಕೂ ಮೊದಲೇ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಈ ಪ್ರಕರಣದ ಕುರಿತು ಬಿಜೆಪಿ ಸುಳ್ಳು ಹೇಳಿಕೆಗಳನ್ನು ಕೊಡುವ ಮೂಲಕ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಹವಣಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : CM ಸಿದ್ದರಾಮಯ್ಯ ಬಗ್ಗೆ ಸುಳ್ಳು ಪೋಸ್ಟ್‌ ಹಂಚಿಕೊಂಡ BJP ನಾಯಕರು! ಎಡಿಟ್ ಮಾಡಿದ ವಿಡಿಯೋ ಡಿಲೀಟ್ ಮಾಡಿದ ಸಿ.ಟಿ.ರವಿ ಮತ್ತು ಅಶ್ವತ್‌ನಾರಾಯಣ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights