ಫ್ಯಾಕ್ಟ್‌ಚೆಕ್ : CM ಸಿದ್ದರಾಮಯ್ಯ ಬಗ್ಗೆ ಸುಳ್ಳು ಪೋಸ್ಟ್‌ ಹಂಚಿಕೊಂಡ BJP ನಾಯಕರು! ಎಡಿಟ್ ಮಾಡಿದ ವಿಡಿಯೋ ಡಿಲೀಟ್ ಮಾಡಿದ ಸಿ.ಟಿ.ರವಿ ಮತ್ತು ಅಶ್ವತ್‌ನಾರಾಯಣ್

ನಾವು ನೋಟ್ ಪ್ರಿಂಟ್ ಮಾಡುವ ಯಂತ್ರ ಇಟ್ಟಿಲ್ಲ, ಎಲ್ಲಿಂದ ತರ್ಲಿ ದುಡ್ಡು, ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುತ್ತೇವೆ ಹಾಗಂತ ಹೇಳಿದ್ದೆಲ್ಲವನ್ನು ಮಾಡೋಕೆ ಆಗತ್ತಾ, ಸಾಲ ಮನ್ನ ಮಾಡ್ತೀವಿ ಅಂತ ಹೇಳಿದ್ವಿ ಅದರಂತೆ ನಡೆಯೋಕೆ ಆಗೋದಿಲ್ಲ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಹಲವು BJP ನಾಯಕರು ಇದೇ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಚುನಾವಣೆಯಲ್ಲಿ ಹೇಳಿದ ಮಾತಿಗೆ ತಪ್ಪಿದ್ದಾರೆ, ಅವರೇ ಅದನ್ನು ಒಪ್ಪಿಕೊಳ್ಳುವ ಮೂಲಕ ರಾಜ್ಯದ ಜನರಿಗೆ ವಂಚಿಸಿದ್ದಾರೆ ಎಂಬ ಹೇಳಿಕೆಗಳೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

Image

ಓಟ್ ಹಾಕಿದವರು ಸರಿಯಾಗಿ ಕೆಳಸ್ಕೊಳ್ರಿ..
ಎಲ್ಲಿಂದ ತರ್ಲಿ ದುದ್ದು…?
ಎಲ್ಲಿಂದ ತರೋದು ದುಡ್ನ…?
ನಾವು ಏನೋ ಚುನಾವಣೆಗೆ ಹೇಳಿರ್ತೀವಪ್ಪ ಹೇಳ್ದಂತೆ ನಡ್ಕೊಳ್ಳೋಕೆ ಆಗುತ್ತಾ..? ಎಂದು ಸಿದ್ದರಾಯಮ್ಮಯ ಹೇಳಿದ್ದಾರೆ ಎಂದು ಪ್ರತಿಪಾಸಿ ಫೇಸ್‌ ಬುಕ್ ಟ್ವಿಟರ್ ಮತ್ತು ವಾಟ್ಸಾಪ್ ಗುಂಪುಗಳಲ್ಲು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಈ BJP ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಲ್ಲಿ ಹೇಳಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಲ್ಲಿ ಹೇಳಿದ್ದಾರೆ ಎಂದು ಪ್ರಸಾರ ಮಾಡುತ್ತಿರುವ ವೈರಲ್ ವಿಡಿಯೋವನ್ನು ಪರಿಶೀಲಿಸಿದಾಗ ಇದು ಎಡಿಟ್ ಮಾಡಿರುವ ವಿಡಿಯೋ ಎಂಬುದು ಸ್ಪಷ್ಟವಾಗಿದೆ.

ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶದ ಸಂದರ್ಭದಲ್ಲಿ ರೈತರ ಸಾಲ ಮನ್ನ ಮಾಡುವ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಯ ವೇಳೆ, ವಿರೋಧ ಪಕ್ಷಗಳು ರೈತರ ಸಾಲವನ್ನು ಮನ್ನ ಮಾಡಬೇಕು ಎಂದು ಒತ್ತಾಯಿದ್ದವು ಆಗ ಸಿಎಂ ಸಿದ್ದರಾಮಯ್ಯ ‘ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ವಿಚಾರವಾಗಿ ಸದನದಲ್ಲಿ ಘೋಷಿಸಿದರು ಅದಕ್ಕೆ ಸುಮ್ಮನಾಗದ ವಿರೋಧ ಪಕ್ಷಗಳು ರೈತರ ಸಾಲ ಮನ್ನ ಮಾಡಬೇಕೆಂದು ಒತ್ತಾಯಿಸಿದ್ದವು.

‘ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಭರವಸೆಯನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರಲಿಲ್ಲ. ಆದರೆ ಬರ ಮತ್ತು ರೈತರ ಸಂಕಷ್ಟದ ಕಾರಣದಿಂದ ಬಡ್ಡಿ ಮನ್ನಾ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದರು.

‘2018ರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ₹1 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಕೃಷಿ ಸಾಲ ಮನ್ನಾ ಮಾಡಲಿಲ್ಲ. ವಿಧಾನಪರಿಷತ್‌ನಲ್ಲಿ ವಿ.ಎಸ್‌. ಉಗ್ರಪ್ಪ ಅವರು ಈ ವಿಷಯ ಪ್ರಸ್ತಾಪಿಸಿದಾಗ, ‘ನಾವು ನೋಟು ಪ್ರಿಂಟ್‌ ಮಾಡುವ ಯಂತ್ರ ಇಟ್ಟಿಲ್ಲ’ ಎಂದು ಯಡಿಯೂರಪ್ಪ ಉತ್ತರ ಕೊಟ್ಟಿದ್ದರು’ ಎಂದು ಸಿದ್ದರಾಮಯ್ಯ ಹೇಳಿರುವುದನ್ನು ಈ ವಿಡಿಯೋದಲ್ಲಿ ಕೇಳಬಹುದು.

 

 

ಸಿದ್ದರಾಮಯ್ಯ ಸದನದಲ್ಲಿ ರೈತರ ಸಾಲದ ಮೇಲಿನ ಬಡ್ಡಿ ಮನ್ನ ವಿಚಾರವಾಗಿ ಮಾತನಾಡುತ್ತ, 2018ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದನ್ನು ವ್ಯಂಗ್ಯವಾಗಿ ಹೇಳಿದ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ಸ್ವತಃ ಸಿದ್ದರಾಮಯ್ಯನವರೇ ಹೀಗೆ ಹೇಳುವ ಮೂಲಕ ತಾವು ಮಾತಿಗೆ ತಪ್ಪಿದ್ದೇವೆಂದು ಒಪ್ಪಿಕೊಂಡಿದ್ದಾರೆ ಎಂದು ಬಿಂಬಿಸಲು ಹೋಗಿ ಬಿಜೆಪಿ ನಾಯಕರು ಮುಗ್ಗರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್ :

ಎಡಿಟೆಡ್ ವಿಡಿಯೋವನ್ನು ಹಂಚಿಕೊಂಡಿದ್ದ ಸಿ ಟಿ ರವಿ ಮತ್ತು ಅಶ್ವತ್‌ನಾರಾಯಣ್‌ ಅವರನ್ನು ಟ್ಯಾಗ್ ಮಾಡಿರುವ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್‌ ಅಕೌಂಟ್‌ನಲ್ಲಿ ಇಬ್ಬರು ಬಿಜೆಪಿ ನಾಯಕರ ಕುರಿತು ಹೀಗೆ ಬರೆದಿದ್ದಾರೆ.

ಆದರೆ @drashwathcn  ಕೂಡ ಇದೇ ರೀತಿ ವೀಡಿಯೋ ಶೇರ್ ಮಾಡಿದ್ದು ನೋಡಿ ಆಶ್ಚರ್ಯವಾಗುತ್ತಿದೆ. ಹಾಲಿ ಶಾಸಕರಾಗಿರುವವರು ಸದನದಲ್ಲಿ ಕೂತು ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು, ಆದರೆ ಅವರ ಗಮನವೆಲ್ಲ ವಿರೋಧ ಪಕ್ಷದ ನಾಯಕನ ಕುರ್ಚಿಯ ಮೇಲೆ ಇದೆಯೆಂದು ಕಾಣುತ್ತೆ. ನೀವು ಶೇರ್ ಮಾಡಿರುವ ತಿರುಚಿದ ವಿಡಿಯೋಗಳನ್ನು ನಂಬುವಷ್ಟು ರಾಜ್ಯದ ಜನ ಮೂರ್ಖರಲ್ಲ. ನಿಮ್ಮ ಗಮನಕ್ಕೆ ಇರಲಿ ಎಂದು ಪೂರ್ತಿ ವಿಡಿಯೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

@BJP4Karnataka ನಾಯಕರೇ, ನಿಮ್ಮ ಮಾನ ಮರ್ಯಾದೆ ಬಗ್ಗೆ ನಿಮಗೆ ಕನಿಷ್ಠ ಕಾಳಜಿ ಇದ್ದರೆ ನೀವು ಶೇರ್ ಮಾಡಿರುವ ವೀಡಿಯೋ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. ಬಿಜೆಪಿ ನಾಯಕರ ಇಂತಹ ನಡವಳಿಕೆಗಳು ಬಿಜೆಪಿ ಎಂದರೆ “ಬೊಗಳೆ ಜನತಾ ಪಾರ್ಟಿ” ಎಂಬ ಕುಖ್ಯಾತಿಯನ್ನು ದೃಡೀಕರಿಸುವಂತಿದೆ. ಫೇಕ್ ನ್ಯೂಸ್ ಗಳ ಸೃಷ್ಟಿ ಮತ್ತು ಪ್ರಸಾರವನ್ನೇ ನಂಬಿ ರಾಜಕಾರಣ ಮಾಡುವ ಬಿಜೆಪಿಯವರಿಗೆ ನನ್ನ ವಚನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆಯೇ ಇಲ್ಲ.

@narendramodi ಅವರು ಮೌಲ್ಯಾಧಾರಿತ ರಾಜಕಾರಣ ಮತ್ತು ಸತ್ಯದ ಪರವಾಗಿದ್ದರೆ ಈ ಕೂಡಲೇ “ಫೇಕ್ ನ್ಯೂಸ್ ಪೆಡ್ಲರ್” ಗಳಾದ @CTRavi_BJP ಮತ್ತು ಅಶ್ವತ್ಥ ನಾರಾಯಣ ಅವರನ್ನು ಪಕ್ಷದಿಂದ ಆಚೆಗಟ್ಟಲಿ ಎಂದಿದ್ದಾರೆ.

 

ಗೌರವಾನ್ವಿತ ಮಾಜಿ ಶಾಸಕರಾದ @CTRavi_BJP ಅವರೇ, ನೀವು ಮತ್ತು ನಿಮ್ಮ ಪಕ್ಷ ಇಂಥಾ ಅಗ್ಗದ ಚೇಷ್ಠೆಗಳನ್ನು ಮಾಡಿದ್ದರ ಫಲವೇ ಇಂದು ಜನ ನಿಮ್ಮನ್ನು ಮನೆಯಲ್ಲಿ‌ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪರದಾಡಬೇಕಾದ ದುಸ್ಥಿತಿಯಲ್ಲಿ ನಿಮ್ಮ ಪಕ್ಷ ಇದೆ. ಆದರೂ ನಿಮಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ.

ನಾವು ನುಡಿದಂತೆ ನಡೆಯುವವರು, ಹಿಂದೆ 2013 – 18 ರ ಐದು ವರ್ಷಗಳ ಅವಧಿಯಲ್ಲಿ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು, ಇದರ ಜೊತೆಗೆ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಸೇರಿದಂತೆ 30ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಭರವಸೆ ನೀಡದ ಹೊರತಾಗಿಯೂ ಜಾರಿಗೆ ತಂದು ಬದ್ಧತೆ ಪ್ರಸರ್ಶಿಸಿದ್ದೆವು. 2018ರಲ್ಲಿ ಜನತೆಗೆ ನೀಡಿದ್ದ ಶೇ.90 ಭರವಸೆಗಳನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈಡೇರಿಸದೆ ಜನ ದ್ರೋಹ ಎಸಗಿತ್ತು.

ನಮ್ಮ ಪಕ್ಷದ ನಾಯಕರಾದ ಉಗ್ರಪ್ಪನವರು 2009ರಲ್ಲಿ ಸಾಲ ಮನ್ನಾ ಮಾಡುವಂತೆ ಸದನದಲ್ಲಿ ಒತ್ತಾಯಿಸಿದ್ದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಏನು ಉತ್ತರ ಕೊಟ್ಟಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಿ. ರೈತರ ಸಾಲ ಮನ್ನಾ ಮಾಡಲು ನಾವೇನು ನೋಟು ಪ್ರಿಟಿಂಗ್ ಮೆಷಿನ್ ಇಟ್ಟಿದ್ದೇವೆಯೇ? ಎಂದು ಅವರು ಹೇಳಿಲ್ಲವೇ? ಈಗ ಮೊನ್ನೆ ವಿಧಾನಸಭೆಯಲ್ಲಿ ನಾನು ಹೇಳಿದ ವೀಡಿಯೋವನ್ನು ತಪ್ಪು ಅರ್ಥ ಬರುವಂತೆ ನಿಮಗೆ ಬೇಕಾದಷ್ಟೆ ಕಟ್ ಮಾಡಿ ಹಾಕಿ ವಿಕೃತ ಸಂತೋಷ ಪಡುತ್ತಿದ್ದೀರಿ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ರೈತರ ಸಾಲ ಮನ್ನ ವಿಚಾರವಾಗಿ ಪ್ರತಿಕ್ರಿಯಿಸುತ್ತ 2009ರಲ್ಲಿ ಚುನಾವಣೆಗೂ ಮುನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಒಂದು ಲಕ್ಷವರೆಗಿನ ರೈತರ ಸಾಲಾ ಮನ್ನ ಮಾಡಬೇಕು ಎಂದು ಉಗ್ರಪ್ಪ ವಿಧಾನ ಪರಿಷತ್‌ನಲ್ಲಿ ಕೇಳಿದ್ದಾಗ, ಯಡಿಯೂರಪ್ಪ ನೀಡಿದ ಪ್ರತಿಕ್ರಿಯೆಯನ್ನು ವ್ಯಂಗ್ಯವಾಗಿ ಸದನಲ್ಲಿ ಹೇಳಿದ ವಿಡಿಯೋವನ್ನು ಎಡಿಟ್ ಮಾಡಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಹೇಳಿದ ಮಾತಿಗೆ ತಪ್ಪಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈಗ ಸಿಟಿ ರವಿ ಮತ್ತು ಅಶ್ವತ್‌ನಾರಾಯ್ ತಾವು ಹಂಚಿಕೊಂಡಿದ್ದ ಸಿಎಂ ಸಿದ್ದರಾಮಯ್ಯರವರ ಎಡಿಟೆಡ್ ವಿಡಿಯೋವನ್ನು ಒಳಗೊಂಡಿದ್ದ ಫೇಕ್ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights