ನಿಷ್ಠೆ ಪರೀಕ್ಷೆಗಾಗಿ ಅಲ್ಯೂಮಿನಿಯಂ ದಾರದಿಂದ ಪತ್ನಿ ಗುಪ್ತಾಂಗ ಹೊಲಿದ ಪತಿ!
ಹೆಂಡತಿಯ ನಿಷ್ಠೆ ಪರೀಕ್ಷೆಗಾಗಿ ಪತಿಯೋರ್ವ ಅಲ್ಯೂಮಿನಿಯಂ ದಾರದಿಂದ ಆಕೆಯ ಗುಪ್ತಾಂಗ ಹೊಲಿದ ವಿಕೃತ ಘಟನೆ ಯುಪಿ ಯ ರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯ ಮಿಲಕ್ ಪ್ರದೇಶದ ಅಮನ್ ಎಂಬಾತ 24 ವರ್ಷದ ಪತ್ನಿ ಶೀಲ ಶಂಕಿಸಿ ಆಕೆಯ ನಿಷ್ಠೆ ಪರೀಕ್ಷೆಗಾಗಿ ಗುಪ್ತಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೊಲಿದಿದ್ದಾನೆ. ಮಹಿಳೆ ಎರಡು ವರ್ಷಗಳ ಹಿಂದೆ ಆರೋಪಿಯನ್ನು ಮದುವೆಯಾಗಿದ್ದಳು. ದಂಪತಿಗೆ ಮಗು ಜನಿಸಿದ್ದು ಹೆರಿಗೆಯಾದ ಕೂಡಲೇ ಸಾವನ್ನಪ್ಪಿತ್ತು.
ಚಾಲಕನಾಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ ತನ್ನ ಹೆಂಡತಿಯನ್ನು ನಿಷ್ಠೆ ಪರೀಕ್ಷೆಗೆ ಕೇಳಿಕೊಂಡಿದ್ದಾನೆ. ಅದಕ್ಕೆ ಅವಳೂ ಕೂಡ ಒಪ್ಪಿಕೊಂಡಿದ್ದಾಳೆ. ನಂತರ ಅವನು ಅವಳ ಕೈ ಕಾಲುಗಳನ್ನು ಕಟ್ಟಿ ಈ ಕಾರ್ಯ ಮಾಡಿದ್ದಾನೆ. ಇದಾದ ಬಳಿಕ ಪತ್ನಿಗೆ ಅಧಿಕ ರಕ್ತಸ್ರಾವವಾಗಿದೆ. ಗಾಬರಿಗೊಂಡ ಪತ್ನಿ ನಂತರ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ತಾಯಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ತಾಯಿ ಮಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಳಿಯನ ವಿರುದ್ಧ ಮಿಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪೊಲೀಸರ ಕೋರಿಕೆಯ ಮೇರೆಗೆ ರಾಂಪುರದ ಜಿಲ್ಲಾ ಆಸ್ಪತ್ರೆಯ ವೈದ್ಯರಿಂದ ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು.
ವೈದ್ಯರು ಈ ಕೃತ್ಯವನ್ನು ದೃಢಪಡಿಸಿದ್ದು ಪೊಲೀಸ್ ಅಧಿಕಾರಿಗಳು ಮಹಿಳೆ ಗಂಡನನ್ನು ಬಂಧಿಸಿದ್ದಾರೆ.
“ಮಹಿಳೆಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಗೆ ಗಂಭೀರ ಗಾಯಗಳಾಗಿವೆ ಎಂದು ದೃಢಪಡಿಸಲಾಗಿದೆ. ನಾವು ಅವಳ ಗಂಡನನ್ನು ಬಂಧಿಸಿದ್ದೇವೆ ಮತ್ತು ಅವರನ್ನು ಜೈಲಿಗೆ ಕಳುಹಿಸಲಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿ ಆಕೆಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ” ಎಂದು ರಾಂಪುರ್ ಎಸ್ಪಿ ಹೇಳಿದ್ದಾರೆ.