ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರಿಗೆ ಕೊಲೆ ಬೆದರಿಕೆ ಪತ್ರ..!

ತಮಗೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ಇಂದು ತುಂಬಿದ ಸಭೆಯಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು ಹೇಳಿಕೊಂಡಿದ್ದ ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಸಚಿವ ಎಚ್‌.ಎಂ. ರೇವಣ್ಣ ಅವರಿಗೆ ನಲವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲಲಿತಾ ನಾಯಕ್, ತಮಗೆ ಸೇರಿದಂತೆ ಹಲವು ಗಣ್ಯರಿಗೆ ಕೊಲೆ ಬೆದರಿಕೆ ಹಾಕಿ ಬಂದಿರುವ ಪತ್ರವನ್ನು ಉಲ್ಲೇಖಿಸಿ ಮಾತನಾಡಿದರು.

ಬ್ರಾಹ್ಮಣ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಡಾ. ಬಿಟಿ ಲಲಿತಾ ನಾಯಕ್, ಮಹಿಳಾ ಬಂಡಾಯ ಸಾಹಿತಿಯಾಗಿ, ಪತ್ರಕರ್ತೆಯಾಗಿ, ರಾಜಕಾರಣಿಯಾಗಿ ಹಾಗೂ ದಲಿತ ಮಹಿಳೆಯರ ಪರ ಧ್ವನಿಯೆತ್ತುವ ಮೂಲಕ ಪರಿಚಿತರು.

”ನನ್ನನ್ನು ಮೇ. 1 ರಂದು ಕೊಲೆ ಮಾಡುತ್ತೇವೆ ಎಂದು ನನಗೆ ಪತ್ರ ಬಂದಿದೆ. ಜೊತೆಗೆ ಬಿಜೆಪಿ ಶಾಸಕ ಸಿ.ಟಿ. ರವಿ, ಸಂಪಾದಕ ರಂಗನಾಥ್(ಪಬ್ಲಿಕ್ ಟಿವಿ), ನಟ ಶಿವರಾಜ್ ಕುಮಾರ್ ಕೊಲೆ ಮಾಡುತ್ತಾರಂತೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಅದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಬೆದರಿಕೆಗಳಿಗೆ ನಾನು ಹೆದರುವಳು ಅಲ್ಲ. ಸಿ.ಟಿ. ರವಿಯನ್ನು ಕೊಲೆ ಮಾಡಿದರೆ ನಾನು ಉಳಿಯುತ್ತೇನೆ. ನನ್ನ ಕೊಲೆ ಮಾಡಿದರೆ ಸಿಟಿ ರವಿ ಉಳಿಯುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಕೊಲೆ ಮಾಡುವರು ಎಲ್ಲಿದ್ದರೂ ಕೊಲೆ ಮಾಡುತ್ತಾರೆ. ಹಾಗಾಗಿ ನಾನು ಹೆದರಿಕೆಯಿಲ್ಲದೇ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ” ಎಂದು ಲಲಿತಾ ನಾಯಕ್ ತಿಳಿಸಿದರು.

ಬ್ರಾಹ್ಮಣ ಹುಡುಗಿಯರು ಅಂತರ್ಜಾತಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಎಚ್‌.ಎಂ. ರೇವಣ್ಣ ಅವರು ಕೂಡ ಬ್ರಾಹ್ಮಣ ಸಮುದಾಯದ ಹುಡುಗಿಯನ್ನು ಮದುವೆಯಾಗಿದ್ದಾರೆ. ಅವರು ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯದವರು ಹೆಣ್ಣು ಮಕ್ಕಳು ಋತುಮತಿಯಾದ ವೇಳೆ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದರು. ಆಗ ಅಲೆಮಾರಿ ಸಮುದಾಯ ಅವರನ್ನು ಮದುವೆ ಆಗುತ್ತಿದ್ದರು. ಈಗ ಅಂತರ್ಜಾತಿ ವಿವಾಹಗಳು ಪ್ರೀತಿ ಆಧಾರದ ಮೇಲೆ ನಡೆಯುತ್ತಿವೆ. ಪ್ರೀತಿ ಇರೋದ್ರಿಂದ ಜಾತಿ ಮೀರಿ ಮದುವೆಗಳಾಗುತ್ತಿವೆ. ಇದನ್ನು ಸ್ವಾಮೀಜಿ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights