ಹೈದರಾಬಾದ್ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಎನ್ಕೌಂಟರ್ ಗೂ ಮುನ್ನ ಆರೋಪಿ ಶವ ಪತ್ತೆ!
ಹೈದರಾಬಾದ್ ನ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿ ಶವ ಪತ್ತೆಯಾಗಿದೆ.
ಹೈದರಾಬಾದ್ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು “ಎನ್ಕೌಂಟರ್ನಲ್ಲಿ ಕೊಲ್ಲಲಾಗುವುದು” ಎಂದು ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಹೇಳಿ ಎರಡು ದಿನಗಳ ನಂತರ ರೈಲು ಹಳಿ ಮೇಲೆ ಆರೋಪಿ ಶವ ಪತ್ತೆಯಾಗಿದೆ.
ಹೈದರಾಬಾದಿನ ಸೈದಾಬಾದ್ ನಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕೇಳಿದಾಗ, “ನಾವು ಆರೋಪಿಗಳನ್ನು ಖಂಡಿತವಾಗಿಯೂ ಬಂಧಿಸುತ್ತೇವೆ ಮತ್ತು ಎನ್ಕೌಂಟರ್ ಮಾಡುತ್ತೇವೆ” ಎಂದು ಮಲ್ಲಾ ರೆಡ್ಡಿ ಹೇಳಿದ್ದರು. ಮಾತ್ರವಲ್ಲದೇ ಮಲ್ಲಾ ರೆಡ್ಡಿ ಹೈದರಾಬಾದ್ ಅತ್ಯಾಚಾರ ಪ್ರಕರಣದಲ್ಲಿ 6 ವರ್ಷದ ಸಂತ್ರಸ್ತೆಗೆ ಶೀಘ್ರ ನ್ಯಾಯ ಒದಗಿಸುವ ಭರವಸೆ ನೀಡಿದ್ದರು.
“ನಾವು ಖಂಡಿತವಾಗಿಯೂ ಕುಟುಂಬ ಸದಸ್ಯರನ್ನು ಭೇಟಿಯಾಗುತ್ತೇವೆ ಮತ್ತು ಅವರಿಗೆ ಪರಿಹಾರ ನೀಡುತ್ತೇವೆ. ನಾವು ಕುಟುಂಬಕ್ಕೆ ಸಹಾಯ ಮಾಡುತ್ತೇವೆ” ಎಂದು ಮಂಗಳವಾರ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಾ ರೆಡ್ಡಿ ಹೇಳಿದ್ದಾರೆ.
ಸೆಪ್ಟೆಂಬರ್ 9 ರಂದು ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದು ಕೊಲೆ ಮಾಡಲಾಗಿತ್ತು. ಆಕೆಯ ದೇಹವು ಬೀಗ ಹಾಕಿದ ಮನೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತೆಯ ನೆರೆಹೊರೆಯ 30 ವರ್ಷಹರೆಯದ ಆರೋಪಿಯನ್ನು ಹುಡುಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದರು. ಮಾತ್ರವಲ್ಲದೆ 15 ತಂಡಗಳನ್ನು ರಚಿಸಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಇದರ ಜೊತೆಗೆ 6 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಹೈದರಾಬಾದ್ ಪೊಲೀಸರು 10 ಲಕ್ಷ ಬಹುಮಾನವನ್ನು ಘೋಷಿಸಿದ್ದರು.
ಜೊತೆಗೆ ಹೈದರಾಬಾದ್ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ ವಿಶಾಖಪಟ್ಟಣದಲ್ಲಿ ಮೇಣದ ಬತ್ತಿ ರ್ಯಾಲಿಯನ್ನು ಆಯೋಜಿಸಲಾಗಿತ್ತು.