Lockdown ಸಮಯದಲ್ಲಿ ಆರೆಸ್ಸೆಸ್‌ ವಸೂಲಿಗೆ ಇಳಿದಿದೆ: ಡಿಕೆಶಿ

ಕೊರೊನಾ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶಾದ್ಯಂತ ವಿಧಿಸಲಾಗಿರುವ ಲಾಕ್‍ಡೌನ್ ಸಂದರ್ಭವನ್ನು ಆರೆಸ್ಸೆಸ್‌ ಹಣದ ವಸೂಲಿ ಮಾಡಲು ಬಳಿಸಿಕೊಳ್ಳುತ್ತಿದೆ. ದುಡಿಮೆ ಇಲ್ಲದವರಿಗೆ ಸಹಾಯ ಮಾಡುತ್ತೇವೆ ಎಂಬ ನೆಪವೊಡ್ಡಿ ಆರ್ ಎಸ್ ಎಸ್ ಜನರಿಂದ ದುಡ್ಡು ದೋಚಲು ಇಳಿದಿದ್ದು, ಎಲ್ಲೆಡೆ ಕಲೆಕ್ಷನ್ ಆರಂಭಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಬೆಂಗಳೂರಿನ ಸದಾಶಿವನಗರದ್ಲಲಿರುವ ತಮ್ಮ ಮನೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಡಿಕೆಶಿ, ಆರ್‍ಎಎಸ್‍ಎಸ್‍ನವರು ವಾಹನಗಳನ್ನು ತೆಗೆದುಕೊಂಡು ಹೋಗಿ ವಸೂಲಿ ಮಾಡುತ್ತಿದ್ದಾರೆ. ಅಕ್ಕಿ, ಬೆಳೆ, ಅಡುಗೆ ಎಣ್ಣೆ ಸೇರಿಂದತೆ ಎಲ್ಲವನ್ನು ದುಡಿಮೆ ಇಲ್ಲದ ಜನರಿಗೆ ಹಂಚುತ್ತೇವೆ ಎಂದು ಹೇಳಿಕೊಂಡು ದಬ್ಬಾಳಿಕೆ ಮೂಲಕ ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿಯವರು ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ. ಅದನ್ನು ಗೌರವಿಸಿ ಎಲ್ಲರೂ ಮನೆಯಲ್ಲೆ ಉಳಿದಿದ್ದಾರೆ. ಈ ಸಂದರ್ಭದಲ್ಲಿ ಆರ್‍ಎಸ್‍ಎಸ್‍ನವರು ಮುಖ್ಯಮಂತ್ರಿ ಮತ್ತು ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿಕೊಂಡು ಎಲ್ಲೆಡೆ ಓಡಾಡುತ್ತಿದ್ದಾರೆ. ಹೀಗೆ ಎಲ್ಲೆಂದರಲ್ಲಿ ಓಡಾಡುವುದು ಸರಿಯಲ್ಲ. ಕೊರೊನಾ ಒಂದು ಸರ್ಕಾರ ಅಥವಾ ಪಕ್ಷದ ಸಮಸ್ಯೆ ಅಲ್ಲ. ವಿಶ್ವದ ಸಮಸ್ಯೆ. ಇಂತಹ ಸಂದರ್ಭದಲ್ಲಿ ಒಂದು ಸಂಘಟನೆಗೆ ಮಾತ್ರ ಅವಕಾಶ ಕೊಟ್ಟು ಉಳಿದವರಿಗೆ ನಿರಾಕರಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಜನರ ಸೇವೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ನನಗೆ ರಾಜ್ಯದ ಮೂಲೆ ಮೂಲೆಗಳಿಂದಲೂ ಕರೆ ಮಾಡಿ ನಾವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ನಾವು ಸರ್ಕಾರದ ಆದೇಶ ಪಾಲಿಸಬೇಕು ಎಂದು ಹೇಳಿ ನಾನೇ ಅವರಿಗೆ ಸ್ವಲ್ಪ ದಿನ ಸುಮ್ಮನಿರಲು ಹೇಳುತ್ತಿದ್ದೇನೆ.

ಈಗ ನೋಡಿದರೆ ಸರ್ಕಾರ ಒಂದು ಸಂಘಟನೆಗೆ ಮಾತ್ರ ಅವಕಾಶ ನೀಡಿದೆ. ರೈತ ಸಂಘ ಸೇರಿ ಅನೇಕ ಸಂಘಟನೆಗಳು ತಾವು ಜನ ಸೇವೆ ಮಾಡುತ್ತೇವೆ ಎಂದು ಮುಂದಾಗಿದ್ದಾರೆ. ಎಲ್ಲರೂ ಕಾನೂನು ಪಾಲನೆ ಮಾಡುತ್ತಿರುವಾಗ ವಸೂಲಿ ವೀರರಾದ ಆರ್ ಎಸ್ ಎಸ್ ನವರು ಮಾತ್ರ ಜನ ಸೇವೆ ಮಾಡಲು ಹೋಗುವುದೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ತುರ್ತು ಸಂದರ್ಭದಲ್ಲಿ ಓಡಾಡಲು ಸರ್ಕಾರ ಅನುಕೂಲವಾಗುವಂತಹ ಸ್ಪಷ್ಟ ಮಾರ್ಗಸೂಚಿ ರೂಪಿಸುಬೇಕು. ರಾಜಾಸ್ತಾನದಲ್ಲಿ ಪತಿ ತೀರಿ ಹೋಗಿದ್ದಾನೆ. ಪತ್ನಿ ಬೆಂಗಳೂರಿನಲ್ಲಿದ್ದಾರೆ. ಔರಂಗಬಾದ್‍ನಲ್ಲಿ ಇರುವವರ ಪರಿಸ್ಥಿತಿಯೂ ಹೀಗೆ ಆಗಿದೆ.ಎರಡು ದಿನಗಳಾದರೂ ಸರಿ, ಶವಸಂಸ್ಕಾರ ಮಾಡದೆ ಕಾಯುತ್ತೇವೆ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಆದರೆ ಇಲ್ಲಿ ಹೊರಗೆ ಹೋಗಲು ಬಿಡುತ್ತಿಲ್ಲ. ಇಂತಹ ಸಂದರ್ಭಗಳಲ್ಲಿಯೂ ಸ್ಪಂಧಿಸುವುದು ಸರ್ಕಾರದ ಕರ್ತವ್ಯ ಎಂದಿದ್ದಾರೆ.

ನಾಡಿನ ನೆಲ, ಜಲ, ಗಡಿ ವಿಷಯ ಬಂದಾಗ ಪಕ್ಷಬೇಧ ಮರೆತು ನಾವೇಲ್ಲಾ ಒಂದಾಗಿ ಕೆಲಸ ಮಾಡಿದ್ದೇವೆ. ಕೊರೊನಾದಂತಹ ತುರ್ತು ಸಂದರ್ಭದಲ್ಲಿ ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ವಿದೇಶಗಳಿಂದ ಬಂದವರನ್ನು ಮೊದಲೇ ಕ್ವಾರೈಂಟನ್ ಮಾಡಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ.

ಕೊರೊನಾ ವಿಷಯದಲ್ಲಿ ಸರ್ಕಾರ ಏನು ಮಾಡಬೇಕು, ಏನು ಮಾಡಬಾರದು ಎಂದು ಸಣ್ಣಮಕ್ಕಳಿಗೂ ಗೋತ್ತಿದೆ. ಆದರೂ ಸರ್ಕಾರ ಸಾಕಷ್ಟು ತಪ್ಪುಗಳನ್ನು ಮಾಡಿದೆ. ಸದ್ಯಕ್ಕೆ ನಾವು ಆ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ, ಆದರೆ ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು.

ರಾಜಕೀಯ ಲಾಭ ಪಡೆಯಲು ಏಕಪಕ್ಷೀಯವಾಗಿ ನಡೆದುಕೊಂಡರೆ ನಾವು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಬೇಕಾಗುತ್ತದೆ. ಎಲ್ಲರಿಗೂ ಸೇವೆ ಮಾಡುವ ಆಸೆ ಇರುತ್ತೆ. ಸೇವೆಯನ್ನು ಕೆಲವರಷ್ಟೆ ಗುತ್ತಿಗೆ ಪಡೆಯಲು ಬಿಡಲಾಗುವುದಿಲ್ಲ, ರಾಜ್ಯ ಕೆಲವರ ಸ್ವತ್ತಲ್ಲ ಎಂದು ಕಿಡಿಕಾರಿದರು.

ಪೊಲೀಸರು ಲಾಠಿ ಹಿಡಿದು ಜನರನ್ನು ಥಳಿಸುತ್ತಿದ್ದಾರೆ. ಕೆಲವರನ್ನು ತುಳಿಯುತ್ತಿದ್ದಾರೆ. ತುಳಿಯುವಂತಹ ತಪ್ಪನ್ನು ಜನ ಮಾಡಿಲ್ಲ.  ಜನ ಸಾಮಾನ್ಯರು ಬ್ಯಾಂಕ್ ಹಾಗೂ ಇತರ ಆರ್ಥಿಕ ಸಂಸ್ಥೆಗಳಿಂದ ಪಡೆದ ಸಾಲದ ಬಡ್ಡಿ ಬೆಳೆಯುತ್ತಿರುತ್ತದೆ. ಮೊದಲು ಆ ಬಗ್ಗೆ ಗಮನ ಹರಿಸಿ ಎಂದು ಒತ್ತಾಯಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights