ಗಾಳಿಯಲ್ಲಿನ ವೈರಸ್ ಕೊಲ್ಲುತ್ತಾ ‘ಕೊರೊನಾ ಕಿಲ್ಲರ್’ ಯಂತ್ರ: ಪುಣೆಯ ಖಾಸಗಿ ಕಂಪನಿಯಿಂದ ಅಭಿವೃದ್ಧಿ!
ಕರೋನಾ ಮಹಾಮಾರಿ ದಿನೇ ದಿನೇ ತನ್ನ ಕಬಂಧ ಬಾಹುಗಳನ್ನು ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿದೆ. ಹಾಗೆಯೇ, ಇದನ್ನು ತಡೆಗಟ್ಟಲು ಹೊಸ ಹೊಸ ವಿಧಾನಗಳನ್ನು ಆವಿಷ್ಕರಿಸುವ ಹಾಗೂ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವೂ ಅಷ್ಟೇ ವ್ಯಾಪಕವಾಗಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪುಣೆಯ ಇಂಡೋಟೆಕ್ ಇಂಡಸ್ಟ್ರೀಯಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಹೊಸ ಯಂತ್ರವೊಂದನ್ನು ಆವಿಷ್ಕರಿಸಿದೆ.
ಅದು ಗಾಳಿಯಲ್ಲಿರುವ ಹಾನಿಕಾರ ಕರೋನಾ ವೈರಸ್ ನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಇನ್ನೂ ಅದು ವೈದ್ಯಕೀಯ ಪ್ರಯೋಗ ಒಳಪಟ್ಟಿಲ್ಲ. ಅಲ್ಲದೆ, ಆರೋಗ್ಯ ಇಲಾಖೆಯು ಅದಕ್ಕೆ ಅನುಮೋದನೆಯನ್ನೂ ನೀಡಿಲ್ಲ.
ಹೆಚ್ಚು ಗಾಳಿ ಆಡದೇ ಇರುವ ಕೋಣೆಗಳಲ್ಲಿ ಕೊರೊನಾ ವೈರಸ್ ಗಾಳಿಯ ಮೂಲಕವೂ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಅದಕ್ಕಾಗಿ ಕೊಣೆಯ ಒಳಗೆ ವೈರಸ್ ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಪುಣೆಯ ಇಂಡೋಟೆಕ್ ಇಂಡಸ್ಟ್ರೀಯಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ – ಕೊರೊನಾ ಕಿಲ್ಲರ್ ಎಲೆಕ್ಟ್ರಾನಿಕ್ ಯಂತ್ರವನ್ನು ಸಿದ್ದಪಡಿಸಿದೆ.
ಮನೆ, ಆಫೀಸ್, ಮಾಲ್ ಗಳಂತ ಜನಸಂದಣಿ ಇರುವ ಪ್ರದೇಶಗಳಲ್ಲಿ ಗಾಳಿಯಲ್ಲಿನ ಕೊರೊನಾ ವೈರಸನ್ನು ಇದು ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಈ ಯಂತ್ರವು ಅಯಾನ್ ಗಳನ್ನು ಉತ್ಪತ್ತಿಸುತ್ತದೆ. ಈ ಮೂಲಕ ಗಾಳಿ ತಲುಪುವ ಎಲ್ಲಾ ಜಾಗದಲ್ಲೂ ಕೊರೊನಾ ವೈರಸ್, ಬ್ಯಾಕ್ಟೀರಿಯಾ, ಫಂಗಸ್ ಹಾನಿಕಾರಕ ವೈರಸ್ ಗಳನ್ನು ಕೊಲ್ಲುತ್ತದೆ. ಮನೆ, ದೇವಾಲಯ, ಜಿಮ್, ಬೋಗಿಗಳು, ಏರ್ ಕ್ರಾಫ್ಟ್, ಕಾರ್ಖಾನೆಗಳಲ್ಲಿ ಇದನ್ನು ಬಳಸಬಹುದಾಗಿದೆ. ಆಯಾ ಕೋಣೆಯ ಏರಿಯಾ ಗೆ ತಕ್ಕಂತೆ ಇದನ್ನು ತಯಾರು ಮಾಡಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಬಾಹುಸಾಹೇಬ್ ಜಂಜಿರೆ ತಿಳಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಮೂಲಕ ತಯಾರಿಸಲಾಗಿರುವ ಈ ಯಂತ್ರದಲ್ಲಿ ಸ್ವದೇಶಿ ನಿರ್ಮಿತ ಬಿಡಿ ಭಾಗಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಆರೋಗ್ಯ ಸಚಿವಾಲಯವು ಇದನ್ನು ಪ್ರಯೋಗಕ್ಕೆ ಒಳಪಡಿಸಬೇಕಾಗಿದ್ದು, ನಂತರದಲ್ಲಿ ಇದರ ಸಾಮರ್ಥ್ಯ ಹಾಗೂ ಬಳಕೆಗೆ ಯೋಗ್ಯವೇ ಎಂದು ತಿಳಿಯಲಿದೆ.
ಇದನ್ನೂ ಓದಿ: ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು: ಆರ್ ಧರ್ಮಸೇನಾ

