ದೇಶದೆಲ್ಲೆಡೆ ಕೊರೊನಾ ಕಾರ್ಮೋಡ : 1ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ!
ದೇಶದಲ್ಲಿ ಕೊರೊನಾ ಕಾರ್ಮೋಡ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ದೊಡ್ಡ ಆತಂಕ ಸೃಷ್ಟಿಸಿದೆ. ಇಂದಿಗೆ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದ್ದು, ಸಾವಿನ ಸಂಖ್ಯೆ 3,000ರ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ.
ಹೌದು… ಭಾನುವಾರದಿಂದ ದೇಶದಲ್ಲಿ 4ನೇ ಲಾಕ್ ಡೌನ್ ಆರಂಭವಾಗಿದೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಒಂದು ನೆಮ್ಮದಿಯ ವಿಚಾರ ಅಂದರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾವಿನ ಸಂಖ್ಯೆ ಕೊಂಚ ಕಡಿಮೆ ಇದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಕೊಂಚ ಸುಧಾರಿಸಿದೆ. ಆದರೆ ನಮ್ಮಲ್ಲಿ ಹೆಚ್ಚೆಚ್ಚು ಪರೀಕ್ಷೆಗಳು ಆಗದ ಹಿನ್ನೆಲೆ ಸೋಂಕಿತರ ಸಂಖ್ಯೆ ಇನ್ನೂ ಅಧಿಕವಾಗಿರಬಹುದು ಎಂದು ಅನುಮಾನಿಸಲಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ವೈರಾಣು ಪೀಡಿತರ ಸಂಖ್ಯೆ ಹೊಸದಾಗಿ 5,242 ದಾಖಲಾಗಿದೆ. ಗುಜರಾತ್, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಪರೀಕ್ಷೆಗೊಳಪಡಿಸಲಾಗಿದ್ದ ಶೇ. 50 ರಷ್ಟು ಜನರಲ್ಲಿ ಸೋಂಕು ಕಂಡುಬರುತ್ತಿದೆ.
ತಮಿಳುನಾಡಿನಲ್ಲೂ ಕೂಡ 11,760 ಮಂದಿ ವೈರಸ್ ಗೆ ತುತ್ತಾಗಿದ್ದು 81 ಜನರು ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ ಕೋವಿಡ್ 19 ಗೆ ಬಲಿಯಾದವರ ಸಂಖ್ಯೆ 694 ಕ್ಕೆ ಏರಿದ್ದು , 11,746 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು ಈವರೆಗೂ ಸುಮಾರು 35,000ಕ್ಕಿಂತ ಹೆಚ್ಚು ಮಂದಿ ವೈರಾಣುವಿನಿಂದ ಬಳಲುತ್ತಿದ್ದು, 1,249 ಜನರು ಮೃತಪಟ್ಟಿದ್ದಾರೆ.
ಭಾರತದಲ್ಲಿ ಕೋವಿಡ್ 19 ವೈರಸ್ ಕಾಣಿಸಿಕೊಂಡು 78 ದಿನಗಳು ಕಳೆದಿದ್ದು, ಈವರೆಗೂ 1,00,311 ಜನರಿಗೆ ಸೋಂಕು ಧೃಢಪಟ್ಟಿದ್ದು, 3,081 ಜನರು ವೈರಸ್ ಕಾರಣದಿಂದ ಮೃತಪಟ್ಟಿದ್ದಾರೆ.
4ನೇ ಹಂತದ ಲಾಕ್ ಡೌನ್ ನಲ್ಲಿ ಹಲವು ರಾಜ್ಯಗಳಲ್ಲಿ ಸಾರಿಗೆ, ಅಂಗಡಿ ಮುಂಗಟ್ಟು, ಮಾರುಕಟ್ಟೆ, ಸಲೂನ್ ಸೇರಿದಂತೆ ಹಲವು ಚಟುವಟಿಕೆಗಳು ಆರಂಭಗೊಂಡಿದೆ. ಕಂಟೈನ್ ಮೆಂಟ್ ಝೋನ್ ಗಳಲ್ಲಿ ಮಾತ್ರ ನಿರ್ಭಂದಗಳು ಮುಂದುವರೆದಿದೆ. ಅದಾಗ್ಯೂ ಶಾಲಾ, ಕಾಲೇಜು, ಚಿತ್ರಮಂದಿರ, ಮಾಲ್ ಗಳು ಮುಂತಾದವುಗಳ ಮೇ 31 ರವರೆಗೂ ಲಾಕ್ ಡೌನ್ ಆಗಿರಲಿವೆ.

