ಸಂಸದೆಯನ್ನು ನೀವು ಭಾರತೀಯರೇ ಎಂದ CISF ಅಧಿಕಾರಿಗಳು: ಹಿಂದಿ ದಬ್ಬಾಳಿಕೆಯ ವಿರುದ್ಧ ಹೆಚ್‌ಡಿಕೆ ಆಕ್ರೋಶ

ಭಾಷೆ ಕಾರಣಕ್ಕೆ ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದೆ ಕನಿಮೋಳಿ ಕರುಣಾನಿಧಿ ಅವರನ್ನು ನೀವು ಭಾರತೀಯರೇ ಎಂದು CISF ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಶ್ನಿಸಿ, ಅವಮಾನ ಮಾಡಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಕನಿಮೋಳಿ ಅವರಿಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇಶಾದ್ಯಂತ ಹಿಂದಿ ಹೇರಿಕೆಯ ವಿರುದ್ಧ ಕಿಡಿ ಕಾರಿದ್ದಾರೆ. 

ಭಾಷಾ ಕಾರಣಕ್ಕೆ ಕನಿಮೊಳಿ ಅವರನ್ನು ‘ನೀವು ಭಾರತೀಯರೇ?’ ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೋಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ. ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ ಎಂದು ಹೆಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

“ಭಾಷೆ ಪಂಥ ನಡಿದ್ಹಾಂಗಾಗಲಿ ಹಾಸ್ಯ ಮಾಡಿ ಜನರೆಲ್ಲರು ನಗಲಿ ಈ ಶಿಶುನಾಳಧೀಶ ಸದ್ಗುರುವಿನ ಲೇಸಾದ ದಯವೊಂದು ಕಡೆತನಕಿರಲಿ” ಎಂಬ ಶಿಶುನಾಳ ಶರೀಫರು ಕವಿತೆಯನ್ನು ಉಲ್ಲೇಖಿಸಿರುವ ಕುಮಾರಸ್ವಾಮಿಯವರು ಬಾಷಾ ತಾರತಮ್ಯ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದಿ ರಾಜಕಾರಣವು ದಕ್ಷಿಣ ಭಾರತದ ಹಲವು ನಾಯಕರ ಪ್ರಧಾನಿಯಾಗುವ ಅವಕಾಶ ಕಸಿದಿದೆ. ಅದರಲ್ಲಿ ಹೆಚ್‌ಡಿ ದೇವೇಗೌಡ, ಕರುಣಾನಿಧಿ, ಕಾಮರಾಜರ ಹೆಸರುಗಳು ಪ್ರಧಾನ. ಈ ವ್ಯೂಹವನ್ನು ದೇವೇಗೌಡರು ಭೇದಿಸಿ ಅತ್ಯುನ್ನತ ಪಟ್ಟ ಅಲಂಕರಿಸಿದರಾದರೂ, ಭಾಷೆ ವಿಚಾರಕ್ಕೆ ಅವರನ್ನು ಮೂದಲಿಸಿದ, ಗೇಲಿ ಮಾಡಿದ, ಕನ್ನಡತನ ಪ್ರಶ್ನಿಸಿದ ಪ್ರಸಂಗಗಳು ಆಗಿ ಹೋಗಿವೆ ಎಂದು ಅವರು ಹೇಳಿದ್ದಾರೆ.

ಭಾರತದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರಿಂದ ಅಂದು ಕೆಂಪು ಕೋಟೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಿಸುವಲ್ಲಿ ‘ಹಿಂದಿ ರಾಜಕಾರಣ’ ಯಶಸ್ವಿಯಾಗಿತ್ತು. ಬಿಹಾರ ಮತ್ತು ಉತ್ತರ ಪ್ರದೇಶದ ಬಹುದೊಡ್ಡ ರೈತ ಸಮುದಾಯದ ದೃಷ್ಟಿಯಿಂದ ಅಂದು ದೇವೇಗೌಡರು ಹಿಂದಿಯಲ್ಲೇ ಮಾತನಾಡಿದರು. ಅಷ್ಟರ ಮಟ್ಟಿಗೆ ಈ ದೇಶದಲ್ಲಿ ಹಿಂದಿ ರಾಜಕಾರಣ ಕೆಲಸ ಮಾಡುತ್ತದೆ ಎಂದು ಆರೋಪಿಸಿದ್ದಾರೆ.

ಇಂಥದ್ದೇ ಅನುಭವ ನನಗೂ ಆಗಿವೆ. ನಾನೂ 2 ಬಾರಿ ಸಂಸದನಾಗಿದ್ದವನು. ಸಂಸತ್‌ನಲ್ಲಿ ಕನ್ನಡದಲ್ಲಿ ಮಾಡಲಾಗುವ ಭಾಷಣಗಳ ಬಗ್ಗೆ ಆಳುವ ವರ್ಗ ದಿವ್ಯ ನಿರ್ಲಕ್ಷ್ಯ ತೋರುತ್ತದೆ. ಅಲ್ಲದೆ, ಹಿಂದಿ ವ್ಯಾಮೋಹಿ ರಾಜಕಾರಣಿಗಳ ವರಸೆಗಳನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳೆಂದರೆ ಬಹುತೇಕರಿಗೆ ಅಲ್ಲಿ ಅಪತ್ಯವೇ ಸರಿ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.

ರಾಜಕಾರಣ ಹೊರತುಪಡಿಸಿ ಔದ್ಯೋಗಿಕ ಕ್ಷೇತ್ರಕ್ಕೆ ಬಂದರೆ, ಕೇಂದ್ರ ಸರ್ಕಾರದ ಕೆಲ ಹುದ್ದೆಗಳ ಪರೀಕ್ಷೆಗಳನ್ನು ಇಂಗ್ಲಿಷ್‌–ಹಿಂದಿಯಲ್ಲೇ ಬರೆಯಬೇಕಿದೆ. ಅದರಲ್ಲಿ #IBPSmosa ಕೂಡ ಒಂದು. ಈ ಬಾರಿಯ ಅಧಿಸೂಚನೆಯಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಹೀಗಾಗಿ ಕನ್ನಡದ ಉದ್ಯೋಗಾಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು ಎಂದು ಕೇಂದ್ರ ಸರ್ಕಾರ ಬಾಯಿ ಮಾತಿಗಷ್ಟೇ ಹೇಳುತ್ತದೆ. ಆದರೆ, ಹಿಂದಿ ಅಭಿವೃದ್ಧಿಗಾಗಿ ದೇಶ, ವಿದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರವು ಕೋಟ್ಯಂತರ ಮೊತ್ತ ವಿನಿಯೋಗಿಸುತ್ತದೆ. ಇದು ರಹಸ್ಯ ಕಾರ್ಯಸೂಚಿಗಳಲ್ಲೊಂದು. ಪ್ರಾಮಾಣಿಕ ಭಾಷಾಭಿಮಾನದಿಂದ ಮಾತ್ರ ಇವುಗಳನ್ನು ಮೆಟ್ಟಿಸಲು ಸಾಧ್ಯ ಎಂದು ತಿಳಿಸಿದ್ದಾರೆ.

 


ಇದನ್ನೂ ಓದಿಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್‌ ಕಾರ್ಯಕರ್ತೆ ವಿರುದ್ಧ ಅಶ್ಲೀಲ ಕಮೆಂಟ್‌: 07 ಜನರ ವಿರುದ್ಧ FIR ದಾಖಲು


ಇದನ್ನೂ ಓದಿವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ; ಉಚಿತ ಪ್ರವೇಶಕ್ಕೆ ಕೆವಿಎಸ್‌ ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights