ಸಟ್ಲೇಜ್-ಯಮುನಾ ಕಾಲುವೆ ನಿರ್ಮಾಣಕ್ಕೆ ಮುಂದಾದರೆ ಪಂಜಾಬ್ ಹೊತ್ತಿ ಉರಿಯಲಿದೆ: ಪಂಜಾಬ್ ಮುಖ್ಯಮಂತ್ರಿ

ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ವಿವಾದದ ಸುಳಿಯಲ್ಲಿರುವ ಸಟ್ಲೇಜ್ ಮತ್ತು ಯಮುನಾ ನದಿಗಳನ್ನು ಜೋಡಿಸುವ ಕೇಂದ್ರ ಸರ್ಕಾರದ ಯೋಜನೆಗೆ ಪಂಜಾಬ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಟ್ಲೆಜ್‌ ಯಮುನಾ ಸಂಪರ್ಕ ಕಾಲುವೆ ನಿರ್ಮಾಣವಾದರೆ ಸಂಪೂರ್ಣ ಪಂಜಾಬ್‌ ಹೊತ್ತಿ ಉರುಯುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ ಹೇಳಿದ್ದಾರೆ.

ನಿನ್ನೆ (ಮಂಗಳವಾರ) ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ್‌ ಸಿಂಗ್ ಶೇಖಾವತ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ ಖಟ್ಟರ್ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಈ ಬಗ್ಗೆ ಚರ್ಚಿಸಿರುವ ಅಮರಿಂದರ್ ಸಿಂಗ್‌,  ಈ ಸಮಸ್ಯೆಯನ್ನು ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ನೋಡಬೇಕಾಗಿದೆ. ಸಟ್ಲೇಜ್‌-ಯಮುನಾ ಕಾಲುವೆ ನಿರ್ಮಾಣಕ್ಕೆ ಮುಂದಾದರೆ ಪಂಜಾಬ್‌ ಹೊತ್ತಿ ಉರಿಯಲಿದೆ. ಅಲ್ಲದೆ, ಹರಿಯಾಣದೊಂದಿಗೆ ಇರುವ ನೀರು ಹಂಚಿಕೆ ವಿವಾದ ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹರಿಯಾಣದೊಂದಿಗಿನ ನೀರು ಹಂಚಿಕೆಯು ಸಮಸ್ಯೆಯಾಗಿ ಬದಲಾಗಿದರೆ, ಇದರ ಪರಿಣಾಮವನ್ನು ಹರಿಯಾಣ ಮತ್ತು ರಾಜಸ್ಥಾನವೂ ಕೂಡ ಅನುಭವಿಸಲಿವೆ ಎಂದು ಅಮರಿಂದರ್‌ ಸಿಂಗ್ ಹೇಳಿದ್ದಾರೆ.

Sutlej-Yamuna Link Issue

1966ರಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೀರಿನ ವಿವಾದ ಉದ್ಭವಿಸಿದೆ. ಹರಿಯಾಣವು ಭಾರೀ ಪ್ರಮಾಣದ ನದಿ ನೀರಿಗಾಗಿ ಒತ್ತಾಯಿಸುತ್ತಲೇ ಇದೆ. ಪಂಜಾಬ್ ಪ್ರತಿ ವರ್ಷವೂ ಸಾಕಷ್ಟು ನೀರು ಇಲ್ಲ ಎಂದು ಹೆಚ್ಚಿನ ನೀರು ಬಿಡಲು ನಿರಾಕರಿಸುತ್ತಲೇ ಬಂದಿದೆ. ಈ ನಡುವೆ, 1975ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ನದಿ ನೀರನ್ನು ಎರಡು ರಾಜ್ಯಗಳ ನಡುವೆ ವಿಂಗಡಿಸಿ ಕಾಲುವೆ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದರು.

1982ರಲ್ಲಿ ಇಂದಿರಾ ಗಾಂಧಿಯವರು ಕಾಲುವೆ ನಿರ್ಮಾಣ ಪ್ರಾರಂಭಿಸಿದ್ದರು. ಇದರ ವಿರುದ್ಧ ಶಿರೋಮಣಿ ಅಕಾಲಿ ದಳ ಭಾರೀ ಪ್ರತಿಭಟನೆ ನಡೆಸಿತ್ತು. 1985ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಎಸ್‌ಎಡಿ ಮುಖ್ಯಸ್ಥ ಹರ್ಚಂದ್ ಸಿಂಗ್ ಲಾಂಗೋವಾಲ್ ಅವರನ್ನು ಭೇಟಿಯಾಗಿ ಹೊಸ ನ್ಯಾಯಮಂಡಳಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದಕ್ಕೆ ಸಹಿ ಹಾಕಿದ ಒಂದು ತಿಂಗಳಲ್ಲೇ ಲಾಂಗೋವಾಲ್ ಅವರನ್ನು ಹತ್ಯೆಯಾಯಿತು.

Sutlej Yamuna Link Canal
ಆರ್ಧಕ್ಕೆ ನಿಂತುಹೋದ ಕಾಲುವೆ ಕಾಮಗಾರಿ

1990ರಲ್ಲಿ, ಮುಖ್ಯ ಎಂಜಿನಿಯರ್ ಎಂ.ಎಲ್.ಸೆಖ್ರಿ ಮತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್ ಅವತಾರ್ ಸಿಂಗ್ ಔಲಖ್ ಅವರ ಹತ್ಯೆಗಳಾದವು. ಅದಾದ ನಂತರ, ಸಟ್ಲೇಜ್-ಯಮುನಾ ಕಾಲುವೆ ನಿರ್ಮಾಣ ಯೋಜನೆ ಕುಂಟುತ್ತಲೇ ಇದೆ. ಹಾಗಾಗಿ ಸಟ್ಲೇಜ್‌ ಯಮುನಾ ಕಾಲುವೆಯ ಪೂರ್ಣಗೊಳಿಸುವಿಕೆ ಕುರಿತು ಚರ್ಚಿಸಲು ಇಬ್ಬರು ಮುಖ್ಯಮಂತ್ರಿಗಳಿಗೆ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಈ ಹಿನ್ನೆಲೆ ಮಂಗಳವಾರ ಸಭೆ ನಡೆದಿದ್ದು, ಅಮರಿಂದರ್ ಸಿಂಗ್‌ ನದಿ ಜೋಡಣೆಯ ಕಾಲುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.


Read Also:  ದೆಹಲಿಯಲ್ಲಿ ಭಾರಿ ಮಳೆ : ರಸ್ತೆಗಳೆಲ್ಲಾ ಜಲಾವೃತ – ಸಂಚಾರ ಅಸ್ಥವ್ಯಸ್ಥ! ಎಚ್ಚರಿಕೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights