ಉಸಿರಾಡಲು ಆಗುತ್ತಿಲ್ಲ, ಬೈ ಅಪ್ಪಾ’ ಎಂದು ವಿಡಿಯೋ ಕಳಿಸಿ ಪ್ರಾಣ ಬಿಟ್ಟ ಯುವಕ! ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಜೀವ ಬಲಿ!

‘ನನಗೆ ಉಸಿರಾಡಲೂ ಆಗುತ್ತಿಲ್ಲ… 3 ಗಂಟೆಗಳಿಂದ ನನಗೆ ಆಕ್ಸಿಜನ್ ಸಪ್ಲೈ ಮಾಡುವುದನ್ನು ನಿಲ್ಲಿಸಿದ್ದಾರೆ. ನಾನು ಇವರನ್ನು ಬೇಡಿಕೊಂಡರೂ  ಆಕ್ಸಿಜನ್‌ ನೀಡುತ್ತಿಲ್ಲ. ಹೃದಯ ಬಡಿದುಕೊಳ್ಳುತ್ತಿಲ್ಲ ಅನ್ನಿಸುತ್ತಿದೆ…ತುಂಬಾ ಕಷ್ಟವಾಗುತ್ತಿದೆ ಅಪ್ಪಾ… ಬೈ ಅಪ್ಪಾ…’ ಎಂದು ಕೊರೊನಾ ಸೋಂಕಿಗೆ ಗುರಿಯಾಗಿದ್ದ ಸೋಂಕಿತರೊಬ್ಬರು ತನ್ನ ತಂದೆಗೆ ವಿಡಿಯೋ ಮೆಸೇಜ್‌ ಕಳಿಸಿ ಪ್ರಾಣ ಬಿಟ್ಟಿದ್ದಾರೆ.

ಹೈದರಾಬಾದ್​ನ ಕೊರೋನಾ ಆಸ್ಪತ್ರೆಗೆ ದಾಖಲಾಗಿದ್ದ 34 ವರ್ಷದ ರೋಗಿ ತಾನಿನ್ನು ಬದುಕುವುದಿಲ್ಲ ಎಂದು ಖಾತರಿಯಾಗುತ್ತಿದ್ದಂತೆ ತನ್ನ ಅಪ್ಪನಿಗೆ ಒಂದು ಸೆಲ್ಫೀ ವಿಡಿಯೋ ಕಳುಹಿಸಿದ್ದಾರೆ. ಆ ಮನಕಲಕುವ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ವೈರಲ್‌ ಆಗಿದ್ದು, ವಿಡಿಯೋ ನೋಡಿದವರ ಕಣ್ಣಂಚಲ್ಲಿ ನೀರು ತರಿಸಿದೆ. ಆತನ ಪರಿಸ್ಥಿತಿಗೆ ಕಾರಣರಾದ ಆಸ್ಪತ್ರೆಯ ಸಿಬ್ಬಂದಿಗೆ ತಕ್ಕ ಶಿಕ್ಷೆಯಾಗಬೇಕು. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಹೆಚ್ಚಾಗಿದೆ.

ತೀವ್ರವಾದ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 34 ವರ್ಷದ ಯುವಕನನ್ನು ಆತನ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಕೊರೋನಾ ಭೀತಿಯಿಂದ 10 ಖಾಸಗಿ ಆಸ್ಪತ್ರೆಯವರು ಆತನನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ, ಕೊನೆಗೆ ಹೈದರಾಬಾದ್​ನ ಸರ್ಕಾರಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆತ ಸಾವನ್ನಪ್ಪಿದ ನಂತರ ಬಂದ ವೈದ್ಯಕೀಯ ವರದಿಯಲ್ಲಿ ಆತನಿಗೆ ಕೊರೋನಾ ಇದ್ದುದು ಖಚಿತವಾಗಿತ್ತು. ಆತ ಸಾವನ್ನಪ್ಪಿದ ಸುದ್ದಿ ತಿಳಿದು, ಆತನ ಅಂತ್ಯಕ್ರಿಯೆಯನ್ನು ಮುಗಿಸಿ ಮನೆಗೆ ಬಂದ ಅಪ್ಪ ತನ್ನ ಮೊಬೈಲ್ ನೋಡಿದಾಗ ಮಗ ವಿಡಿಯೋ ಮೆಸೇಜ್ ಕಳುಹಿಸಿದ್ದು ಗೊತ್ತಾಗಿದೆ.

ಆ ವಿಡಿಯೋ ಮೆಸೇಜ್ ಕಳುಹಿಸಿದ ಒಂದೇ ಗಂಟೆಯಲ್ಲಿ ಆತ ಸಾವನ್ನಪ್ಪಿದ್ದ. ಹೈದರಾಬಾದ್​ನ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ರೋಗಿ ಆ ಆಸ್ಪತ್ರೆಯ ವಾಸ್ತವ ಸ್ಥಿತಿಯನ್ನು ಜಗತ್ತಿನ ಕಣ್ಣೆದುರಿಗಿಟ್ಟು, ತನ್ನ ಕಣ್ಣು ಮುಚ್ಚಿದ್ದಾನೆ.  ತನ್ನ ಮಗನ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆತನ ಅಪ್ಪ ಆರೋಪಿಸಿದ್ದಾರೆ.

‘ನನಗಿಲ್ಲಿ ಉಸಿರಾಡಲೂ ಕಷ್ಟವಾಗುತ್ತಿದೆ. ನನಗೆ ಆಕ್ಸಿಜನ್​ ನೀಡುವಂತೆ 3 ಗಂಟೆಗಳಿಂದ ವೈದ್ಯರು, ನರ್ಸ್​ಗಳ ಬಳಿ ಬೇಡಿಕೊಳ್ಳುತ್ತಿದ್ದೇನೆ. ಆದರೆ, ಅವರು ನನ್ನ ಮಾತನ್ನೇ ಕೇಳಿಸಿಕೊಳ್ಳುತ್ತಿಲ್ಲ. ನನ್ನ ಹೃದಯ ಬಡಿತ ನಿಂತು ಹೋಗುತ್ತಿದೆ ಎಂದೆನಿಸುತ್ತಿದೆ. ಎಲ್ಲರಿಗೂ ಬೈ, ಬೈ ಅಪ್ಪಾ….’ ಎಂದು ಆತ ಅಪ್ಪನಿಗೆ ವಿಡಿಯೋ ಮಾಡಿ ಕಳುಹಿಸಿದ್ದ. ತನ್ನ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಬೇಕೆಂದು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಆತನ ತಂದೆ ಪೋಸ್ಟ್​ ಮಾಡಿದ್ದಾರೆ.

ಆದರೆ, ಆಸ್ಪತ್ರೆಯ ಸಿಬ್ಬಂದಿ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಆತನನ್ನು ನಾವು ವೆಂಟಿಲೇಟರ್​ನಲ್ಲೇ ಇರಿಸಿದ್ದೆವು. ಆಕ್ಸಿಜನ್ ಕೊಟ್ಟರೂ ಆತ ಬದುಕಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights