ರಾಜ್ಯಸಭೆ ಉಪಚುನಾವಣೆ: ನಟಿ ಖುಷ್ಬೂ ಅಥವಾ ನಟ ರಜಿನಿಕಾಂತ್‌ಗೆ BJP ಟಿಕೆಟ್‌!

ರಾಜ್ಯಸಭೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದವರಲ್ಲಿ ಒಂದು ಸ್ಥಾನ ತೆರವಾಗಿದ್ದು, ಆ ಸ್ಥಾನಕ್ಕೆ ಡಿಸೆಂಬರ್‌ 1ರಂದು ಚುನಾವಣೆ ನಡೆಯಲಿದೆ. ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ನಟಿ ಖುಷ್ಬೂ ಅಥವಾ ನಟ ರಜಿನಿಕಾಂತ್‌ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಶೋಕ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ ತಿಂಗಳ 18 ಕಡೆಯ ದಿನವಾಗಿದೆ. ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಿಂದ ಗಸ್ತಿ ಅವರ ಪತ್ನಿ ಸುಮಾ ಗಸ್ತಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಶಂಕರಪ್ಪ ಹಾಗೂ ಮಾಜಿ ಶಾಸಕ ನಿರ್ಮಲ್‌ ಕುಮಾರ್‌ ಸುರಾನಾ ಹೆಸರು ಸೂಚಿಸಲಾಗಿದೆ.

ಆದರೆ, ಇದೂ ವರೆಗೂ ರಾಜ್ಯ   ಬಿಜೆಪಿಗೆ ಶಾಕ್‌ ಕೊಡುತ್ತಲೇ ಇರುವ ಬಿಜೆಪಿ ಹೈಕಮಾಂಡ್‌, ಈ ಬಾರಿಯೂ ಅಂತದ್ಧೇ ಶಾಕ್‌ ನೀಡುವ ಸಾಧ್ಯಗಳಿವೆ. ತಮಿಳುನಾಡಿನಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಬಿಜೆಪಿ ವರಿಷ್ಠರು ಉದ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ರಜಿನಿಕಾಂತ್‌ ಅಥವಾ ಇತ್ತೀಚೆಗೆ ಪಕ್ಷ ಸೇರ್ಪಡೆಯಾದ ಖುಷ್ಬು ಅವರಿಗೆ ಅವಕಾಶ ನೀಡಲು ಹೈಕಮಾಂಡ್‌ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಹಾಗಾಗಿ ಪಕ್ಷದ ರಾಜ್ಯ ಘಟಕ ಶಿಫಾರಸು ಮಾಡಿದ ಪಟ್ಟಿ ಅನುಸಾರ ಈ ಪ್ರಕ್ರಿಯೆ ನಡೆಯುತ್ತದೆ ಎಂಬ ಖಚಿತ ಭರವಸೆ ಇರಿಸಿಕೊಳ್ಳಲಾಗದು. ಅಶೋಕ್‌ ಗಸ್ತಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು. ಹಾಗಾಗಿ ಇದೇ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿದೆ. ಈ ನಡುವೆಯೂ ಹೊರ ರಾಜ್ಯದವರನ್ನು ಹೈಕಮಾಂಡ್‌ ಪರಿಗಣಿಸಿದರೆ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆಯ ಉಪ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ ಇದೆ. ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವುದಕ್ಕೆ ಎರಡು ಪಕ್ಷಗಳ ಮಧ್ಯೆ ಹೊಂದಾಣಿಕೆಯೇ ಇಲ್ಲ. ಅಲ್ಲದೆ, ಜೆಡಿಎಸ್‌ ಹಾಗೂ ಬಿಜೆಪಿ ಆಂತರಿಕ ಸಂಬಂಧ ಈಗ ಮೊದಲಿಗಿಂತ ಬಲಗೊಳ್ಳುತ್ತಿದೆ. ಹಾಗಾಗಿ ಅಭ್ಯರ್ಥಿ ಕಣಕ್ಕಿಳಿಸಿ ಸೋಲುಣ್ಣುವುದಕ್ಕಿಂತ ಸುಮ್ಮನಿರುವುದೇ ಮೇಲೆಂದು ಕಾಂಗ್ರೆಸ್‌ ನಾಯಕರು ಭಾವಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಮಂಡ್ಯ ಡಿಸಿಸಿ ಬ್ಯಾಂಕ್‌ ಚುಣಾವಣೆ: ಕಾಂಗ್ರೆಸ್‌ ಸೋಲಿಸಲು BJP ಮೊರೆಹೋದ JDS

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights