ಬೆಳಗಾವಿಯಲ್ಲಿ ರೈತರ ಪರೇಡ್‌ಗೆ ಪೊಲೀಸರ ತಡೆ; ಟ್ರಾಕ್ಟರ್‌ಗಳನ್ನು ಸೀಜ್ ಮಾಡುವುದಾಗಿ ಬೆದರಿಕೆ!

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಜನವರಿ 26ರ ಗಣರಾಜ್ಯೋತ್ಸವದ ದಿನ ದೇಶಾದ್ಯಂತ ಟ್ರ್ಯಾಕ್ಟರ್‌ ಪರೇ‌ಡ್‌ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಇದರ ಭಾಗವಾಗಿ ಇಂದು ಬೆಳಗಾವಿಯಲ್ಲಿ ಟ್ಯ್ರಾಕ್ಟರ್ ರ್‍ಯಾಲಿ ಆರಂಭಿಸಲು ರೈತರು ಮುಂದಾಗಿದ್ದು, ರ್ಯಾಲಿಗೆ ಪೊಲೀಸ್ ಮತ್ತು ಆರ್‌ಟಿಓ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ತಮ್ಮ ಆದೇಶ ಉಲ್ಲಂಘಿಸಿ ಪರೇಡ್ ನಡೆಸುವ ಟ್ಯ್ರಾಕ್ಟರ್‌ಗಳನ್ನು ಸೀಜ್ ಮಾಡುವುದಾಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಜ.26 ರಂದು ಬೆಂಗಳೂರಿನಲ್ಲಿ ಜನ-ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ ಪರೇ‌ಡ್ ನಡೆಸಲು ನೂರಾರು ಸಂಘಟನೆಗಳು ತೀರ್ಮಾನಿಸಿವೆ. ಅದರ ಭಾಗವಾಗಿ ರಾಜ್ಯದ ಹಲವು ಭಾಗಗಳಿಂದ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಹಲವು ಜಿಲ್ಲೆಗಳಲ್ಲಿ ರ್ಯಾಲಿ ನಡೆಸಿ ಜನವರಿ 26 ರಂದು ಬೆಂಗಳೂರು ತಲುಪಲು ನಿರ್ಧರಿಸಿದ್ದರು. ಅದರಂತೆ ಇಂದು ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಟ್ಯ್ರಾಕ್ಟರ್‌ ರ್ಯಾಲಿ ಆರಂಭವಾಗಿದ್ದು, ಹಿರಿಯ ಹೋರಾಟಗಾರ ಸಿರಿಮನೆ ನಾಗರಾಜ್ ಜಾಥಾಗೆ ಚಾಲನೆ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆ ತಲುಪಿ ನಂತರ ಧಾರವಾಡದ ಮೂಲಕ ಸಂಜೆಗೆ ಹುಬ್ಬಳ್ಳಿ ತಲುಪಲು ಯೋಜಿಸಲಾಗಿತ್ತು. ಆದರೆ ಇದನ್ನು ತಡೆಗಟ್ಟುವ ಸಲುವಾಗಿ ಪೊಲೀಸರು ಆರ್‌ಟಿಓ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದು ರೈತರ ವಾಹನಗಳನ್ನು ವಶಕ್ಕೆ ಪಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

“ನಿಮ್ಮ ಟ್ರ್ಯಾಕ್ಟರ್‌ಗಳಿಗೆ ಇನ್ಶೂರೆನ್ಸ್ ಕಟ್ಟಿಲ್ಲ ಎಂಬುದನ್ನು ಮರೆಯಬೇಡಿ. ನಾವು ಹೋಗಲಿ ಎಂದು ಸುಮ್ಮನಿದ್ದೇವೆ. ಈಗ ನೀವು ರ್ಯಾಲಿ ಹೊರಟರೆ ಖಂಡಿತ ನಿಮ್ಮ ವಾಹನಗಳನ್ನು ಸೀಜ್‌ ಮಾಡುವುದಾಗಿ ಆರ್‌ಟಿಓ ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಇದಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆದೇಶ ನೀಡಿದ್ದಾರೆ” ಎಂದು ರೈತರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿಗಾಗಲೇ – ಸುಪ್ರೀಂ ಕೋರ್ಟ್‌ಗಾಗಲೀ ರೈತರ ಟ್ರಾಕ್ಟರ್ ಪರೇಡ್ ತಡೆಯಲು ಸಾಧ್ಯವಿಲ್ಲ: ರೈತ ಮುಖಂಡ

ನಾವು ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಡನೆ ಮಾತನಾಡಲು ಕರೆ ಮಾಡುತ್ತಿದ್ದೇವೆ. ಆದರೆ ನಮ್ಮ ಯಾವುದೇ ಕರೆಗಳನ್ನು ಅವರು ಸ್ವೀಕರಿಸುತ್ತಿಲ್ಲ. ಬೇಕಂತಲೇ ಅವು ನಮ್ಮ ಕರೆ ಸ್ವೀಕರಿಸದೇ ಈ ನ್ಯಾಯಯುತ ರೈತ ಹೋರಾಟ ಹಣಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಫಲವಾಗುವುದಿಲ್ಲ. ನಮ್ಮ ಟ್ಯ್ರಾಕ್ಟರ್ ರ್ಯಾಲಿಗೆ ಅನುಮತಿ ನೀಡದಿದ್ದರೆ ಸರ್ಕಾರ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಮೈಸೂರು ಕಡೆಯಿಂದ, ಹೈದರಾಬಾದ್ ಕರ್ನಾಟಕ ಕಡೆಯಿಂದ, ಕೋಲಾರ- ಚಿಕ್ಕಬಳ್ಳಾಪುರದಿಂದ, ಹಾಸನ-ಚಿಕ್ಕಮಗಳೂರು ಕಡೆಯಿಂದ ಸೇರಿದಂತೆ ರಾಜ್ಯದ ಐದು ದಿಕ್ಕುಗಳಿಂದಲೂ ಬರುವ ಟ್ರಾಕ್ಟರ್‌ಗಳು ಜನವರಿ 26 ರಂದು ಬೆಂಗಳೂರು ನಗರವನ್ನು ಪ್ರವೇಶಿಸಿ ಪರೇಡ್ ನಡೆಸಲಾಗುತ್ತದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ 4 ರೈತ ನಾಯಕರ ಹತ್ಯೆಗೆ ಸಂಚು: ಸಿಕ್ಕಬಿದ್ದ ಆರೋಪಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights