ತೆಲಂಗಾಣ: TRS ಶಾಸಕರ ಮನೆ ಮೇಲೆ ದಾಳಿ; 39 BJP ಕಾರ್ಯಕರ್ತರ ಬಂಧನ!

ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಶಾಸಕ ಚಲ್ಲಾ ಧರ್ಮ ರೆಡ್ಡಿ ಅವರ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರು ಭಾನುವಾರ ಸಂಜೆ ದಾಳಿ ನಡೆಸಿದ್ದು, ಘಟನೆ ಸಂಬಂಧ ಕೇಸರಿ ಪಕ್ಷದ 39 ಕಾರ್ಯಕರ್ತರನ್ನು ತೆಲಂಗಾಣದ ವಾರಂಗಲ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪೊಲೀಸರು ಅವರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 39 ಜನರನ್ನು ವಾರಂಗಲ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಇವರಲ್ಲದೆ, ಶಾಸಕರ ನಿವಾಸದ ಮೇಲೆ ದಾಳಿಯಲ್ಲಿ ಭಾಗಿಯಾಗಿದ್ದ ಇನ್ನೂ 14 ಬಿಜೆಪಿ ಕಾರ್ಯಕರ್ತರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಯಾವುದೇ ಖಾತೆಗಳನ್ನು ತೋರಿಸದೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಹೆಸರಿನಲ್ಲಿ ಭಾರೀ ಮತ್ತದ ಹಣವನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಮಂದಿರದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಟಿಆರ್‌ಎಸ್ ಶಾಸಕ ಚಲ್ಲಾ ಧರ್ಮ ರೆಡ್ಡಿ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ, ಕೇಸರಿ ಪಕ್ಷದ ವಾರಂಗಲ್ (ನಗರ) ಜಿಲ್ಲಾ ಘಟಕದ ಅಧ್ಯಕ್ಷ ರಾವ್ ಪದ್ಮಾ ನೇತೃತ್ವದ ಬಿಜೆಪಿ ಕಾರ್ಯಕರ್ತರು ಹನಮಕೊಂಡದ ಹಂಟರ್ ರಸ್ತೆಯಲ್ಲಿರುವ ಶಾಸಕ ಶರ್ಮ ರೆಡ್ಡಿ ಅವರ ನಿವಾಸದ ಮೇಲೆ ಸೋವುವಾರ ದಾಳಿ ನಡೆಸಿದ್ದರು.

ಬಿಜೆಪಿ ಕಾರ್ಯಕರ್ತರು ಶಾಸಕರ ನಿವಾಸದ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ತೂರಿದ್ದಾರೆ. ಇದರಿಂದಾಗಿ ಮನೆಯ ಕಿಟಕಿ ಫಲಕಗಳು, ಹೂವಿನ ಮಡಿಕೆಗಳು ಮತ್ತು ಇತರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ದಾಳಿ ನಡೆಸದಂತೆ ತಡೆದಿದ್ದು, 39 ಜನರನ್ನು ಬಂಧಿಸಿ ಸುಬೇದಾರಿ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ವರದಿಯಾಗಿದೆ.

ಆಡಳಿತಾರೂಢ  ಟಿಆರ್‌ಎಸ್ ಪಕ್ಷದ ಕಾರ್ಯಕರ್ತರು ಕೂಡ ಪ್ರತೀಕಾರವಾಗಿ ಬಿಜೆಪಿ ಪಕ್ಷದ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯ ಮೇಲೆ ಕಲ್ಲು ಎಸೆದು, ಫ್ಲೆಕ್ಸ್ ಬೋರ್ಡ್‌ಗಳು ಮತ್ತು ಬ್ಯಾನರ್‌ಗಳನ್ನು ಕೆಡವಿದ್ದು, ಸ್ಥಳೀಯ ಬಿಜೆಪಿ ಮುಖಂಡ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಟಿಆರ್‌ಎಸ್‌ ಶಾಸಕ ಮನೆಯ ಮೇಲಿನ ದಾಳಿಯನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಸೋಮವಾರ ವಾರಂಗಲ್‌ ನಗರವನ್ನು ಬಂದ್‌ ಮಾಡಿದ್ದು, ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಪ್ರತಿಭಟನೆ-ಧರಣಿ ನಡೆಸಿದ್ದಾರೆ.

“ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯತ್ವವನ್ನು ಸ್ಥಾಪಿಸುವ ರಾಜಕೀಯ ಆಂದೋಲನದಿಂದ ಟಿಆರ್‌ಎಸ್ ಹುಟ್ಟಿದೆ ಎಂಬುದನ್ನು ಬಿಜೆಪಿ ನೆನಪಿನಲ್ಲಿಡಬೇಕು. ಬಿಜೆಪಿ ಇಂತಹ ಹಿಂಸಾಚಾರವನ್ನು ಪ್ರಚೋದಿಸಲು ಬಯಸಿದ್ದರೆ, ಟಿಆರ್‌ಎಸ್‌ಗೂ ತನ್ನ ಕಾರ್ಯಕರ್ತರನ್ನು ರಕ್ಷಿಸುವ ಶಕ್ತಿ ಇದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು ”ಎಂದು ಟಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ಹೇಳಿದ್ದಾರೆ.

ಇದನ್ನೂ ಓದಿ: ಮ.ಪ್ರದೇಶ BJPಯಲ್ಲಿ ಸಿಂಧಿಯಾ ಬೆಂಬಲಿಗರ ಬಂಡಾಯ?; ಬಿಜೆಪಿ ಉಸ್ತುವಾರಿ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights