ತಮಿಳುನಾಡು ಚುನಾವಣೆ: 234 ಕ್ಷೇತ್ರಗಳಲ್ಲಿ BJPಗೆ 20 – AIADMKಗೆ 170 ಸ್ಥಾನಗಳ ಹಂಚಿಕೆ!

ಕೆಲವೇ ದಿನಗಳಲ್ಲಿ ಪಂಚರಾಜ್ಯಗಳ ಚುನಾವಣೆ ಆರಂಭವಾಗಲಿದೆ. ಇದೀಗ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ವಿಚಾರ ಸದ್ದು ಮಾಡುತ್ತಿದೆ. ತಮಿಳುನಾಡಿನಲ್ಲಿ 234 ಸ್ಥಾನಗಳಿಗೆ ಏಪ್ರಿಲ್‌ 06 ರಂದು ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದಲ್ಲಿ ಒಂದು ಮೈತ್ರಿ ಹಾಗೂ ಡಿಎಂಕೆ-ಕಾಂಗ್ರೆಸ್‌ ನೇತೃತ್ವದಲ್ಲಿ ಮತ್ತೊಂದು ಮೈತ್ರಿ ಚುನಾವಣೆಯನ್ನು ಎದುರಿಸುತ್ತಿದ್ದು, ಎರಡೂ ಮೈತ್ರಿಗಳಲ್ಲಿಯೂ ಸೀಟು ಹಂಚಿಕೆ ಬಿಕ್ಕಟ್ಟು ಎದುರಾಗಿದೆ.

ಸದ್ಯ, ಆಡಳಿತಾರೂಢ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ಸೀಟು ಹಂಚಿಕೆಗೆ ಮುಂದಾಗಿದ್ದು, ತಮಿಳುನಾಡಿನ 234 ಕ್ಷೇತ್ರಗಳ ಪೈಕಿ 20 ವಿಧಾನಸಭಾ ಕ್ಷೇತ್ರಗಳನ್ನೂ ಹಾಗೂ ಒಂದು ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಎಐಎಡಿಎಂಕೆ ಬಿಟ್ಟುಕೊಟ್ಟಿದೆ.

ಮೈತ್ರಿಗೂ ಮುನ್ನವೇ ಆಡಳಿತದಲ್ಲಿ ಹೆಚ್ಚು ತಲೆಹಾಕದಂತೆ ಬಿಜೆಪಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದ ಎಐಎಡಿಎಂಕೆ, ಇದೀಗ ಮೈತ್ರಿಗೆ ಒಪ್ಪಿಗೆ ನೀಡಿ, ಸೀಟು ಹಂಚಿಕೆಗೆ ಸಹಿ ಹಾಕಿದೆ. ಉಭಯ ಮಿತ್ರ ಪಕ್ಷಗಳು ಚುನಾವಣೆಯಲ್ಲಿ ಪರಸ್ಪರ ಬೆಂಬಲ ನೀಡುವುದಾಗಿ ಒಪ್ಪಂದ ಪತ್ರದಲ್ಲಿ ಬರೆದುಕೊಂಡಿದ್ದು, ಪತ್ರಕ್ಕೆ ಎಐಎಡಿಎಂಕೆಯ ಓ. ಪನ್ನೀರ್‍ಸೆಲ್ವಂ ಮತ್ತು ಕೆ. ಪಳನಿಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಎಲ್. ಮುರುಗನ್ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ತಮಿಳು ಭಾಷೆ ಕಲಿಯದಿರುವುದಕ್ಕೆ ಬೇಸರವಿದೆ; ಮನ್-‌ಕಿ-ಬಾತ್‌ನಲ್ಲಿ ಮೋದಿ

ಇದಲ್ಲದೆ, ತಮಿಳುನಾಡಿನ ಮತ್ತೊಂದು ಪ್ರಾದೇಶಿಕ ಪಕ್ಷ ಪಾಟ್ಟಾಲಿ ಮಕ್ಕಳ್ ಕಟ್ಚಿಯೊಂದಿಗೆ ಎಐಎಡಿಎಂಕೆ ಮಾತುಕತೆ ನಡೆಸಿದ್ದು, ಆ ಪಕ್ಷವೂ ಮೈತ್ರಿಯಲ್ಲಿ ಪಾಲು ಪಡೆದುಕೊಂಡಿದೆ. ಆ ಪಕ್ಷಕ್ಕೆ 23 ಕ್ಷೇತ್ರಗಳನ್ನು ನೀಡಲಾಗಿದೆ. ರಾಜ್ಯದ 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ 170 ಕ್ಷೇತ್ರಗಳಲ್ಲಿ ಸ್ಪರ್ಧಿಸಿಲಿದೆ ಎಂಧು ಹೇಳಲಾಗಿದೆ.

ಕಳೆದ 2016ರ ಚುನಾವಣೆಯಲ್ಲಿ ಎಐಎಡಿಎಂಕೆ 134 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಸರ್ಕಾರ ರಚನೆ ಮಾಡಲು ಅಗತ್ಯ ಬಹುಮತವನ್ನು ಹೊಂದಿತ್ತು.

ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights